ಬೆಂಗಳೂರು: ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ 2013ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದರೂ ನನಗೆ ಮುಖ್ಯಮಂತ್ರಿಯಾಗುವ ಭಾಗ್ಯ ಒದಗಿ ಬರಲಿಲ್ಲ. ದಲಿತ ಸಮುದಾಯದ ನಾಯಕರು ಸಿಎಂ ಆಗುವುದನ್ನು ಪಕ್ಷದೊಳಗೆ ಉದ್ದೇಶಪೂರ್ವಕವಾಗಿ ತಪ್ಪಿಸಲಾಗುತ್ತಿದೆ. ಎಂದು ಗೃಹ ಸಚಿವ ಜಿ. ಪರಮೇಶ್ವರ್ ಬೇಸರ ವ್ಯಕ್ತಪಡಿಸಿದ್ದಾರೆ.
ದಲಿತ ಸಂಘಟನೆಗಳಿAದ ನಗರದ ಅಂಬೇಡ್ಕರ್ ಭವನದಲ್ಲಿಆಯೋಜಿಸಿದ್ದ ‘ಪರಿಶಿಷ್ಟ ಸಮುದಾಯಗಳ ಸಹೋದರತ್ವ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.
2013ರಲ್ಲಿ ನನ್ನ ನೇತೃತ್ವದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದರೂ ಯಾರೊಬ್ಬರೂ ಪರಮೇಶ್ವರ್ ನೇತೃತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದು ಹೇಳಲಿಲ್ಲ. ನಾನು ಕೂಡ ಹೇಳಿಕೊಳ್ಳಲಿಲ್ಲ. 2018ರಲ್ಲಿ ದಲಿತ ಸಮುದಾಯ ಕಡೆಗಣಿಸಿದ ಪರಿಣಾಮ ಕಾಂಗ್ರೆಸ್ ಪಕ್ಷ ಸೋಲಬೇಕಾಯಿತು. ಪಕ್ಷದ ದೊಡ್ಡ ನಾಯಕರು ಎನಿಸಿಕೊಂಡವರು ಯಾವ ಸಮುದಾಯವನ್ನು ಕಡೆಗಣಿಸಿದರೂ ಅದೇ ಸಮುದಾಯದಿಂದ ಪಾಠ ಕಲಿಯ ಬೇಕಾಯಿತು ಎಂದು ಸೂಚ್ಯವಾಗಿ ಹೇಳಿದರು.
ಎಡಗೈ- ಬಲಗೈ ಎಂದು ಕಿತ್ತಾಡಿದರೆ ನಷ್ಟ
ದಲಿತ ಸಮುದಾಯದ ನಾಯಕರು ಮುಖ್ಯಮಂತ್ರಿಯಾಗುವುದನ್ನು ಪಕ್ಷದೊಳಗೆ ಉದ್ದೇಶ-ಪೂರ್ವಕವಾಗಿಯೇ ತಪ್ಪಿಸಲಾಗುತ್ತಿದೆ. ನಾನೂ ಸೇರಿದಂತೆ ಕೆ.ಎಚ್. ಮುನಿಯಪ್ಪ, ಎಚ್.ಸಿ. ಮಹದೇವಪ್ಪ ಏಕೆ ಮುಖ್ಯಮಂತ್ರಿ ಆಗಬಾರದು? ನಾವು ಶೈಕ್ಷಣಿಕ ವಲಯದ ಜತೆ ಯಾವ ಕ್ಷೇತ್ರದಲ್ಲಿ ಕಡಿಮೆ ಇದ್ದೇವೆ ? ಏಕೆ ಪದೇ ಪದೆ ನಮಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಲಾಗುತ್ತಿದೆ ದು ನೋವು ತೋಡಿಕೊಂಡರು.
ನಮ್ಮಲ್ಲಿರುವ ಕೀಳರಿಮೆ ಕಿತ್ತೊಗೆಯಬೇಕು. ನಮ್ಮಲ್ಲಿಒಗ್ಗಟ್ಟು ಪ್ರದರ್ಶಿಸಿದಾಗ ಮಾತ್ರ ನಾವು ಉಳಿದು-ಕೊಳ್ಳುತ್ತೇವೆ. ಅದು ಬಿಟ್ಟು ಎಡಗೈ, ಬಲಗೈ ಸಮುದಾಯ ಎಂದು ಕಿತ್ತಾಡಿಕೊಂಡರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ” ಎಂದು ಮಾರ್ಮಿಕವಾಗಿ ನುಡಿದರು.
ಮುನಿಯಪ್ಪ ನೇತೃತ್ವದಲ್ಲಿ ಜಗಜೀವನ್ ರಾಮ್ ಜಯಂತಿ ಮಾಡಲು ಹೇಳಿದರು. ನನ್ನ ನೇತೃತ್ವದಲ್ಲಿ ಡಾ.ಅಂಬೇಡ್ಕರ್ ಜಯಂತಿ ಮಾಡಲು ಹೇಳಿದರು. ಜಗಜೀವನ-ರಾಮ್ ಎಡಗೈ, ಅಂಬೇಡ್ಕರ್ ಬಲಗೈ ಎಂದು ನಮಗೆ ಜಯಂತಿ ಮಾಡುವುದಕ್ಕೆ ಹೇಳುತ್ತಾರೆ. ಇದರೊಂದಿಗೆ ಅಲ್ಲೂ ನಮ್ಮನ್ನು ಒಡೆದು ಆಳುವುದಕ್ಕೆ ನೋಡುತ್ತಿದ್ದಾರೆ,” ಎಂದು ದೂರಿದರು.
ದಲಿತರು ಕಾಂಗ್ರೆಸ್ ಜೊತೆ ನಿಂತಿದ್ದಾರೆ
ಈ ಬಾರಿಯ ಚುನಾವಣೆಯಲ್ಲಿ ದಲಿತರು ಕಾಂಗ್ರೆಸ್ ಜತೆ ನಿಂತಿದ್ದಾರೆ. ಮುಸ್ಲಿಮರು ಶೇ.100ರಷ್ಟು ಮತ ನೀಡಿದ್ದಾರೆ. ಹೀಗಾಗಿಯೇ 51 ಮೀಸಲು ಕ್ಷೇತ್ರಗಳ ಪೈಕಿ 32ರಲ್ಲಿ ಗೆಲವು ಸಾಧಿಸಿದ್ದೇವೆ ಎಂದು ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಇದರೊಂದಿಗೆ ಮೊದಲ ಅಧಿವೇಶನದಲ್ಲಿ ನ್ಯಾ. ಸದಾಶಿವ ಆಯೋಗದ ವರದಿ ಮಂಡಿಸುತ್ತೇವೆ ಎಂದು ಹೇಳಿದರು.
ಸಚಿವ ಕೆ.ಎಚ್. ಮುನಿಯಪ್ಪ, ಕೆಪಿಸಿಸಿ ಪ್ರಚಾರ ಸಮಿತಿ ಸಹ ಅಧ್ಯಕ್ಷ ಎಚ್.ಪಿ. ಸುಧಾಮ್ ದಾಸ್, ಉಪಾಧ್ಯಕ್ಷ ಬಿ. ಗೋಪಾಲ್, ಕಾಂಗ್ರೆಸ್ ಮುಖಂಡ ಅಂಬಣ್ಣ ಅರೋಲಿಕರ್, ದಲಿತ ಮುಖಂಡ ಹೆಣ್ಣೂರು ಶ್ರೀನಿವಾಸ್ ಉಪಸ್ಥಿತರಿದ್ದರು.
ಮತ್ತೆ ಸಿಎಂ ಆಗುವ ಆಶಯ ವ್ಯಕ್ತಪಡಿಸಿದ ಪರಂ
ನಾನು ಯಾಕೆ ಸಿಎಂ ಆಗಬಾರದು ಎಂದು ಪ್ರಶ್ನಿಸುವ ಮೂಲಕ ಸಚಿವಡಾ ಜಿ ಪರಮೇಶ್ವರ್ ಮತ್ತೆ ಸಿಎಂ ಆಗುವ ಆಶಯ ವ್ಯಕ್ತಪಡಿಸಿದ್ದಾರೆ. ಮುನಿಯಪ್ಪ, ಮಹದೇವಪ್ಪ ಯಾಕೆ ಸಿಎಂ ಆಗಬಾರದು? ನಮಗೆ ಅವಕಾಶಗಳನ್ನು ತಪ್ಪಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಒಗ್ಗಟ್ಟಿದ್ದರೆ ಮಾತ್ರ ನಾವು ಉಳಿದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಇಷ್ಟು ಮಾತ್ರವಲ್ಲದೆ ದಲಿತರನ್ನು ಕಡೆಗಣಿಸಿದ್ದಕ್ಕೆ 2018ರಲ್ಲಿ ಸೋಲಾಯಿತು ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.