ಶಿವಮೊಗ್ಗ : ಕಾಂಗ್ರೆಸ್ ಪಕ್ಷದ ಸರ್ಕಾರದಷ್ಟು ಭ್ರಷ್ಟ ಸರ್ಕಾರವನ್ನು ನಾನೆಂದೂ ನೋಡಿಲ್ಲ. ಸರ್ಕಾರ ಬಂದು ಕೇವಲ ಮೂರು ತಿಂಗಳಾಗಿದೆ. ಈಗಾಗಲೇ ಜನರು ಮನೆಮನೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ಗೆ ವೋಟ್ ಯಾಕೆ ಹಾಕಿದ್ದೇವೋ ಎಂಬ ಅನಿಸಿಕೆ ಜನರಿಗೆ ಬರುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಶಿಕಾರಿಪುರ ಬಿಜೆಪಿ ಶಾಸಕ ಬಿವೈ ವಿಜಯೇಂದ್ರ ಕಿಡಿಕಾರಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರದ ವಿರುದ್ಧ ಅನೇಕ ಭ್ರಷ್ಟಾಚಾರದ ಆರೋಪಗಳನ್ನ ಮಾಡಿದ್ದರು. ಕಾಂಗ್ರೆಸ್ ಬಾಯಲ್ಲಿ ಭ್ರಷ್ಟಾಚಾರದ ಮಾತು ಹೇಗೆ ಎಂದರೆ ಭೂತದ ಬಾಯಲ್ಲಿ ಭಗವದ್ಗೀತೆ ಇದ್ದಂತೆ. ಈ ಸರ್ಕಾರ ಬಂದು ಕೇವಲ ಮೂರು ತಿಂಗಳು ಕಳೆದಿದೆ. ಈಗಾಗಲೇ ಜನರು ಮನೆಮನೆಯಲ್ಲೂ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಇನ್ನೂ ಹಳೆಯ ಚಾಳಿ ಬಿಟ್ಟಿಲ್ಲ. ಭ್ರಷ್ಟಾಚಾರ ತುಂಬಿತುಳುಕುತ್ತಿದೆ. ಅನೇಕ ಮಂತ್ರಿಗಳ ಹೆಸರು ಕೂಡ ತಳುಕು ಹಾಕಿಕೊಂಡಿದೆ. ಸಿಎಂ ಸಿದ್ದರಾಮಯ್ಯ ಅವರ ಮೊದಲ ಅವಧಿ ಕೂಡ ಭ್ರಷ್ಟಾಚಾರದಿಂದ ಕೂಡಿತ್ತು. ಅಂದು ಕೂಡ ಭ್ರಷ್ಟಾಚಾರವನ್ನು ಸಮರ್ಥನೆ ಮಾಡಿಕೊಂಡಿದ್ದರು. ಇಂದು ಕೂಡ ಸಮರ್ಥನೆ ಮಾಡಿಕೊಂಡಿದ್ದಾರೆ. ಹೊಸ ಸರ್ಕಾರ ತನ್ನ ಜನಪ್ರಿಯತೆಯನ್ನು ಇಷ್ಟು ಬೇಗ ಕಳೆದುಕೊಂಡಿದೆ ಎಂಬುದನ್ನು ನೋಡಿದರೆ ನನಗೂ ಕೂಡ ಆಶ್ಚರ್ಯ ಆಗುತ್ತದೆ ಎಂದರು.
ಕಾAಗ್ರೆಸ್ ಸ್ವಯಂಕೃತ ಅಪರಾಧ ಮಾಡಿದ್ದು, ಚುನಾವಣಾ ಪ್ರಚಾರದ ವೇಳೆ ಕೊಟ್ಟ ಭರವಸೆಗಳನ್ನು ಈಡೇರಿಸಲು ಈಗ ಹರಸಾಹಸ ಪಡುತ್ತಿದೆ. 40 ರಿಂದ 50 ಸಾವಿರ ಕೋಟಿ ರೂ. ಹೆಚ್ಚುವರಿ ಸಾಲ ಮಾಡುವ ಪರಿಸ್ಥಿತಿ ಬಂದಿದೆ. ಆರ್ಥಿಕ ತಜ್ಞರ ಪ್ರಕಾರ 80,000 ಕೋಟಿ ರೂ. ಹೆಚ್ಚು ಸಾಲ ಮಾಡಲಿದ್ದಾರೆ. ಆರ್ಥಿಕ ಶಿಸ್ತು ಉಲ್ಲಂಘನೆ ಮಾಡಿ ರಾಜ್ಯದ ಜನರಿಗೆ ಮೋಸ ಮಾಡುತ್ತಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಜನ ಹಾದಿ ಬೀದಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನಮ್ಮ ಸರ್ಕಾರ ಇದ್ದಾಗ ಆರೋಪ ಮಾಡುತ್ತಿದ್ದರು. ಈಗ ಅವರು ಮಾತನಾಡುತ್ತಿಲ್ಲ. ಡಿಕೆ ಶಿವಕುಮಾರ್ ವಿರುದ್ಧ ಹೇಳಿಕೆ ನೀಡಿದವರು. ತಮ್ಮ ಹೇಳಿಕೆಯನ್ನು ವಾಪಸ್ ಪಡೆದುಕೊಂಡಿದ್ದಾರೆ. ಈ ಸರ್ಕಾರದಲ್ಲಿ ಏನೇನು ನಡೆಯುತ್ತಿದೆಯೋ ನನಗಂತೂ ಅರ್ಥ ಆಗ್ತಿಲ್ಲ. ಸರ್ಕಾರಕ್ಕೆ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ. ಮೊದಲು ಉಚಿತ ವಿದ್ಯುತ್ ಎಂದರು, ಮಳೆಯ ಅಭಾವದಿಂದ ವಿದ್ಯುತ್ ಕಡಿತ ಎನ್ನುತ್ತಿದ್ದಾರೆ ಎಂದರು.
ಮಳೆಯಿಲ್ಲದೇ ಜನ ಪರಿತಪಿಸುತ್ತಿದ್ದಾರೆ. ಇದರ ನಡುವೆ ಲೋಡ್ ಶೆಡ್ಡಿಂಗ್ ಪುನಃ ಜನರಿಗೆ ಸಮಸ್ಯೆ ಉಂಟು ಮಾಡಿದೆ. ಶಿಕಾರಿಪುರದಲ್ಲಿ ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ತುಂಗಭದ್ರಾ ನದಿಯಿಂದ ನೀರು ತರುವ ಕೆಲಸವನ್ನು ಮಾಡಿದ್ದರು. ಆದರೆ, ಈಗ ಲೋಡ್ ಶೆಡ್ಡಿಂಗ್ನಿAದ ರೈತರಿಗೆ ನೀರು ಕೊಡಲು ಆಗುತ್ತಿಲ್ಲ. ಹೀಗಾಗಿ ಅನೇಕ ಯೋಜನೆಗಳು ವಿದ್ಯುತ್ ಅಭಾವದಿಂದ ನಿಲ್ಲಲಿವೆ. ಜನರೇ ಅವರಿಗೆ ಶಾಪ ಹಾಕ್ತಿದ್ದಾರೆ ಎಂದು ಕಿಡಿಕಾರಿದರು.