ದಾವಣಗೆರೆ : ಲೋಕಸಭಾ ಚುನಾವಣೆ ಬಗ್ಗೆ ಕೋಡಿಮಠದ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಪ್ರಮುಖ ಭವಿಷ್ಯವೊಂದನ್ನು ನುಡಿದಿದ್ದಾರೆ. ಮುಂದಿನ ಚುನಾವಣೆಯಲ್ಲಿ ದೇಶದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ. ಅಮಾವಾಸ್ಯೆಯ ಬಳಿಕ ಕರ್ನಾಟಕದಲ್ಲಿ ಭಾರೀ ಮಳೆಯಾಗಲಿದ್ದು, ರಾಜ್ಯದಲ್ಲಿ ಕೆಲ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಕೋಡಿಮಠದ ಶ್ರೀಗಳು ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಭಕ್ತರೊಬ್ಬರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಪಕ್ಷಾಂತರ ಹೆಚ್ಚಾದರೂ ಕೂಡ ಒಂದೇ ಪಕ್ಷ ದೇಶದಲ್ಲಿ ಅಧಿಕಾರಕ್ಕೆ ಬರಲಿದೆ ಎನ್ನುವ ಮೂಲಕ ಮತ್ತೊಂದು ಬಾರಿ ನರೇಂದ್ರ ಮೋದಿ ಪ್ರಧಾನಿ ಆಗಬಹುದು ಎಂಬ ಸೂಚ್ಯವನ್ನು ನೀಡಿದ್ದಾರೆ. ಜೊತೆಗೆ ರಾಜ್ಯದಲ್ಲಿ ಅಮಾವಾಸ್ಯೆ ಬಳಿಕ ಮಳೆ ಬರಲಿದೆ ಆತಂಕಪಡುವ ಅಗತ್ಯವಿಲ್ಲ. ಕಾರ್ತಿಕ, ಸಂಕ್ರಾಂತಿ ವೇಳೆಗೆ ರಾಜ್ಯದಲ್ಲಿ ಕೆಲ ಅವಘಢಗಳು ನಡೆಯುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ರಾಜ್ಯ, ರಾಷ್ಟ್ರ ರಾಜಕೀಯದಲ್ಲಿ ಅಸ್ಥಿರತೆ ಕಾಡಲಿದೆ ; ಕೋಡಿಮಠ ಸ್ವಾಮೀಜಿ ಭವಿಷ್ಯ
ಮನುಷ್ಯ ಮಾಡಿದ ತಪ್ಪುಗಳನ್ನು ಭಗವಂತ ಕ್ಷಮಿಸುತ್ತಾನೆ. ಆದರೆ, ಎಲ್ಲ ತಿಳಿದು ತಪುö್ಪ ಮಾಡಿದಾಗ ಕ್ಷಮಿಸಲಾರ. ಇತ್ತೀಚಿನ ದಿನಗಳಲ್ಲಿ ಎಲ್ಲ ಗೊತ್ತಿದ್ದೂ ಮನುಷ್ಯ ಪ್ರಕೃತಿ, ನೆಲ, ಜಲ ಇವುಗಳ ನಿರಂತರ ದುರುಪಯೋಗ ಮಾಡುತ್ತಿದ್ದಾನೆ. ಇದರಿಂದ ನಾವು ಬರ, ಪ್ರವಾಹ ಸೇರಿ ಅನೇಕ ರೀತಿಯ ಪ್ರಕೃತಿ ವಿಕೋಪ ಎದುರಿಸುವಂತಾಗಿದೆ ಎಂದು ಹೇಳಿದರು.
ಸಮಾಜದಲ್ಲಿ ಶಾಂತಿ ನಿರ್ಮಿಸುವ ಹೇಳಿಕೆ ನೀಡಿ
ಯಾವುದು ಮನುಷ್ಯನಿಗೆ, ಸಮಾಜಕ್ಕೆ ಶಾಂತಿ, ನೆಮ್ಮದಿ ನೀಡುತ್ತದೆಯೋ ಅದೇ ಧರ್ಮ. ನೀರಿನ ಮೇಲೆ ದೋಣಿ ಇರಬೇಕೇ ಹೊರತು ದೋಣಿಯೊಳಗೆ ನೀರು ಇರಬಾರದು. ದೋಣಿಯೊಳಗೆ ನೀರು ಬಂದರೆ ಅಪಾಯ ತಪ್ಪದು. ರಾಜಕಾರಣಿಗಳಾಗಲಿ, ಗುರುಗಳಾಗಲಿ ಸಮಾಜದಲ್ಲಿ ಶಾಂತಿ ನಿರ್ಮಿಸುವ ಹೇಳಿಕೆ ನೀಡಬೇಕು ಎಂದು ಕೋಡಿಮಠದ ಸ್ವಾಮೀಜಿ ಹೇಳಿದರು.
ನೂರಾರು ವರ್ಷಗಳ ಹಿಂದೆ ಹೇಳಿದ್ದು ಸತ್ಯ, ಕಾಲಜ್ಞಾನವೇ ಗುರುಗಳ ಸಂಪತ್ತು ಎಂದ ಕೋಡಿಮಠದ ಶ್ರೀಗಳು, ಕಾಲಜ್ಞಾನದಲ್ಲಿ ಕಟ್ಟಿಗೆ ಹಾಡುತ್ತದೆ, ಕಬ್ಬಿಣವು ಓಡುತ್ತದೆ, ಗಾಳಿ ಮಾತನಾಡುತ್ತದೆ ಎಂದು ನೂರಾರು ವರ್ಷಗಳ ಹಿಂದೆ ಹೇಳಿದ್ದು ಈಗ ಸತ್ಯವಾಗಿದೆ. ಕಟ್ಟಿಗೆ ಮತ್ತು ಕಬ್ಬಿಣ ಅಂದರೆ ರೈಲುಗಳು ಬಂದಿರುವ ಬಗ್ಗೆ, ಗಾಳಿ ಮಾತನಾಡುತ್ತದೆ ಎಂದರೆ ಮೊಬೈಲ್ ಬಂದಿರುವುದಕ್ಕೆ ಸಾಕ್ಷಿ. ಕಲ್ಲಿನ ಕೋಳಿ ಕೂಗುತ್ತದೆ ಎಂದರೆ ಮೊಬೈಲ್ನಲ್ಲಿರುವ ಸಿಮ್ಗಳು ಎಂದು ಕಾಲಜ್ಞಾನದ ಭವಿಷ್ಯ ನಿಜವಾಗಿರುವುದನ್ನು ವಿವರಿಸಿದರು.
ಯಾವುದೇ ಯೋಜನೆ ತಂದರೂ ಕರ್ನಾಟಕಕ್ಕೆ ತೊಂದರೆ ಇಲ್ಲ
ಸರ್ಕಾರಗಳು ಏನೇ ಯೋಜನೆಗಳನ್ನು ಜಾರಿಗೆ ತಂದರೂ ಕರ್ನಾಟಕಕ್ಕೆ ತೊಂದರೆ ಇಲ್ಲ. ಏಕೆಂದರೆ ನಮ್ಮ ಕರ್ನಾಟಕ ಪ್ರಾಕೃತಿಕವಾಗಿ ಎಲ್ಲಾ ರೀತಿಯಲ್ಲಿ ಸಮೃದ್ಧವಾಗಿದ್ದು, ಆ ಸಂಪತನ್ನು ಸಮರ್ಪಕವಾಗಿ ಬಳಸಿಕೊಂಡಾಗ ಯಾವುದೇ ತೊಂದರೆ ಆಗದು ಎಂದು ಹೇಳಿದರು.