ಬೆಂಗಳೂರು: ಪರಿಸರ ಪ್ರೇಮಿ, ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಇಂದು ಸಂಜೆ ಮಂಜುನಾಥನಗರದಲ್ಲಿರುವ ನಿವಾಸದಲ್ಲಿ ಕಾಲು ಜಾರಿ ಬಿದ್ದಿದ್ದು, ಬೆನ್ನು ಮೂಳೆಗೆ ಪೆಟ್ಟಾಗಿದೆ. ಹಾಗಾಗಿ ಜಯನಗರ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ತುಮಕೂರಿನ ಗುಬ್ಬಿ ತಾಲೂಕಿನಲ್ಲಿ ಜನಿಸಿದ ತಿಮ್ಮಕ್ಕ ಅವರು ಪರಿಸರದ ಮೇಲಿನ ತಮ್ಮ ಪ್ರೀತಿಯಿಂದ ಸಾಲುಮರದ ತಿಮ್ಮಕ್ಕ ಎಂದೇ ಖ್ಯಾತರಾದವರು.
8 ಸಾವಿರಕ್ಕೂ ಅಧಿಕ ಗಿಡಗಳನ್ನ ನೆಟ್ಟ `ವೃಕ್ಷ ಮಾತೆ’
ಕಿತ್ತು ತಿನ್ನುವ ಬಡತನದ ನಡುವೆಯೂ ಸಾಲು ಸಾಲು ಗಿಡಗಳನ್ನು ನೆಟ್ಟು ಪೋಷಿಸಿ ಬೆಳೆಸಿರುವ ಈ ವೃಕ್ಷಮಾತೆ ಎಂತಹವರಿಗೂ ಸ್ಪೂರ್ತಿ. ಸುಮಾರು 112ರ ವಯಸ್ಸಿನ ತಿಮ್ಮಕ್ಕ ಅವರು ಕಳೆದ 65 ವರ್ಷಗಳಿಂದ ಗಿಡಗಳನ್ನು ನೆಟ್ಟು ಪೋಷಿಸುವಂತಹ ಕಾಯಕದಲ್ಲಿ ತೊಡಗಿದ್ದಾರೆ. ಇಲ್ಲಿಯವರೆಗೂ ಸರಿಸುಮಾರು 8 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಟ್ಟು `ವೃಕ್ಷ ಮಾತೆ’ ಎಂದು ಪ್ರಖ್ಯಾತಿ ಗಳಿಸಿದ್ದಾರೆ.
ಅಂದು ಇವರು ಪ್ರೀತಿಯಿಂದ ಪೋಷಿಸಿ ನೆಟ್ಟ ಮರಗಳು ಇಂದು ಹೆಮ್ಮರವಾಗಿ ಬೆಳೆದು ನಿಂತಿವೆ. ಪರಿಸರದ ಉಳಿವಿಗಾಗಿ ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿದ ಭಾರತ ಸರ್ಕಾರ 2019 ರಲ್ಲಿ ತಿಮ್ಮಕ್ಕನವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡುವ ಮೂಲಕ ಗೌರವಿಸಲಾಗಿದೆ.
ಸಾವಿರಾರು ಮರಗಳಿಗೆ ಜೀವ ನೀಡಿರುವ ಸಾಲುಮರದ ತಿಮ್ಮಕ್ಕ ಅವರ ಆರೋಗ್ಯದಲ್ಲಿ ಸದ್ಯ ಏರುಪೇರಾಗಿದೆ. ತಮ್ಮ ನಿವಾಸದಲ್ಲಿ ಜಾರಿ ಬೀಳುವ ಮೂಲಕ ಬೆನ್ನು ಮೂಳೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಅವರಿಗೆ ಉಸಿರಾಟದ ತೊಂದರೆ, ಮಂಡಿ ನೋವು ಸಹ ಕಾಣಿಸಿಕೊಂಡಿತ್ತು.