ಮಡಿಕೇರಿ :ಪ್ರವಾಸೋದ್ಯಮ ಜಿಲ್ಲೆ, ಕೊಡಗಿನಲ್ಲಿ ಇದೀಗ ಕೆಲವು ಕಡೆ ಪ್ರವಾಸಿಗರ ಮೇಲೆ ಹಲ್ಲೆ ದೂರುಗಳು ಕೇಳಿ ಬರುತ್ತಿವೆ. ಇತ್ತೀಚಿಗೆ ಅಭಿ ಫಾಲ್ಸ್ ನಲ್ಲಿ ಪ್ರವಾಸಿಗರ ಮೇಲೆ ದೊಣ್ಣೆ ಹಾಗೂ ಕೈಯಿಂದ ಹಲ್ಲೆ ಮಾಡಿರುವ ಘಟನೆ ಸಂಭಂದಿಸಿದಂತೆ ಮೂವರನ್ನು ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡ್ದು ಅವರ ಮೇಲೆ ಮೊಕದಮ್ಮೆ ದಾಖಲು ಮಾಡಲಾಗಿದೆ. ಇದೀಗ ಮತ್ತೊಂದು ರಮಣೀಯ ಪ್ರದೇಶ ಮಾಂದಲಪಟ್ಟಿಯಲ್ಲಿ ಸ್ಥಳೀಯ ಜೀಪ್ ಚಾಲಕರು ಹಾಗೂ ಸ್ಥಳೀಯ ಮುಖಂಡರೊಬ್ಬರ ನಡುವೆ ಘರ್ಷಣೆ ಏರ್ಪಟ್ಟಿದೆ. ಇಲ್ಲೂ ಕೂಡ ಹೊಡೆದಾಟ ನಡೆದಿದೆ. ಖಾಸಗಿ ಜೀಪುಗಳನ್ನು ಬಳಸಿಕೊಂಡು ದುಬಾರಿ ಬೆಲೆಯಲ್ಲಿ ಪ್ರವಾಸಿಗರನ್ನು ಸೂಲಿಗೆ ಮಾಡುತ್ತಿರುವ ಅಂಶ ಬೆಳಕೆಗೆ ಬಂದಿದೆ. ಈ ಕಾರಣಕ್ಕಾಗಿ ಜಿಲ್ಲಾಡಳಿತ ಖಾಸಗಿ ಜೀಪುಗಳ ಪ್ರವೇಶಕ್ಕೆ ನಿರ್ಬಂಧ ಹೇರಿದೆ, ಇದರಿಂದ ಇದೀಗ ಪ್ರವಾಸಿಗರು ಸಂಕಷ್ಟಕ್ಕೆ ಈಡಾಗಿದ್ದಾರೆ. ಮಡಿಕೇರಿ ಯಿಂದ 18 ಕಿಲೋಮೀಟರ್ ದೂರದಲ್ಲಿರುವ ಮಾಂದಲಪಟ್ಟಿಯಲ್ಲಿ ಸುಂದರ ರಮಣೀಯ ದೃಶ್ಯವನ್ನು ಕಣ್ತುಂಬಿಸಿಕೊಳ್ಳಲು ರಾಜ್ಯದ ಹಾಗೂ ಹೊರ ರಾಜ್ಯದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಆಗಮಿಸುತ್ತಾರೆ. ಸ್ವಂತ ವಾಹನದಲ್ಲಿ ಅಲ್ಲಿ ತೆರಳಲು ಕಷ್ಟವಾಗುವುದರಿಂದ . ಫೋರ್ ವೀಲ್ ಡ್ರೈವಿಂಗ್ ಜೀಪನ್ನು ಅವಲಂಬಿಸಬೇಕಾಗಿರುತ್ತದೆ. ಇದರ ಲಾಭವನ್ನು ಪಡೆದುಕೊಂಡಿರುವ ಖಾಸಗಿ ಜೀಪುಗಳು ಪ್ರವಾಸಿಗರನ್ನು ಅಡ್ಡಗಟ್ಟಿ ಹೆಚ್ಚಿನದರವನ್ನು ವಿಧಿಸುತ್ತಾರೆ. ಇದನ್ನು ಪ್ರಶ್ನಿಸಲು ಹೊರಟ ಕೆಲವರ ಮೇಲೆ ಹಲ್ಲೆ ಕೂಡ ನಡೆಸುತ್ತಾರಂತೆ. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಖಾಸಗಿ ಜೀಪುಗಳನ್ನು ಬಾಡಿಗೆಗೆ ಓಡಿಸಲು ತಡೆ ಒಡ್ಡಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಒಂದೆಡೆ ಮೂಲಭೂತ ಸೌಕರ್ಯದ ಕೊರತೆ ಇನ್ನೊಂದೆಡೆ ಕಾನೂನಿನ ಜಾರಿಯಲ್ಲಿ ಅಸಡ್ಡೆ. ಇದರಿಂದ ಕೆಲವರು ಇದರ ಲಾಭವನ್ನು ಪಡೆದುಕೊಂಡು ಇಲ್ಲಿಗೆ ಬರುವ ಪ್ರವಾಸಿಗರಿಗೆ ಅಡಚಣೆ ಉಂಟು ಮಾಡಿ ಹೆಚ್ಚಿನ ದುಬಾರಿ ಬೆಲೆಯನ್ನು ವಿಧಿಸಿ ಹಗಲು ದರೋಡೆ ನಡೆಸುತ್ತಿದ್ದಾರೆ. ಸಂಬಾರ ಪದಾರ್ಥಗಳು ತಿಂಡಿ ತಿನಿಸುಗಳು, ಉಳಿಯುವ ವಸತಿ ಗ್ರಹಗಳು ಎಲ್ಲದಕ್ಕೂ ಕೂಡ ನಿಗದಿತ ದರವಿಲ್ಲ ಆಯಾಯ ಸಂದರ್ಭದಲ್ಲಿ ಅನುಗುಣವಾಗಿ ಕೆಲವರು ತಮಗೆ ತೋಚಿದಷ್ಟು ಹಣವನ್ನು ಸುಲಿಗೆ ಮಾಡುವ ಪ್ರವೃತ್ತಿ ಈ ಜಿಲ್ಲೆಯಲ್ಲಿ ಕಾಣುತ್ತಿದೆ. ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಸರ್ಕಾರ, ಕಟ್ಟು ನಿಟ್ಟಿನ ಕಾನೂನು ಜಾರಿ ಮಾಡದೆ ಮತ್ತೊಂದೆಡೆ ಪರೋಕ್ಷವಾಗಿ ಸುಲಿಗೆ ಗಾರರಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಲಾಗುತ್ತಿದೆ. ಸರ್ಕಾರ ಬದಲಾಗಿದೆ, ಸ್ಥಳೀಯ ಜನಪ್ರತಿನಿಧಿಗಳು ಬದಲಾಗಿದ್ದಾರೆ ಇವರುಗಳಾದರೂ ಕೊಡಗಿನ ಪ್ರವಾಸೋದ್ಯಮದತ್ತ ಚಿತ್ತಹರಿಸುತ್ತಾರೋ ಎಂಬುದನ್ನು ಕಾದು ನೋಡಬೇಕಾಗಿದೆ.
ಖಲೀಲ್ :ಸಿದ್ದಾಪುರ