ಕಲಬುರಗಿ: ಕಲಬುರಗಿಯಲ್ಲಿ ನಡೆದ ಎಲ್ಲಾ ಭ್ರಷ್ಟಾಚಾರ ಪ್ರಕರಣಗಳ ತನಿಖೆ ಮಾಡಿಸುತ್ತೇವೆ ಇದು ನಾನು ಕೊಡುತ್ತಿರುವ ಆರನೇ ಗ್ಯಾರಂಟಿ ಎಂದು ಈ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದರು. ಅದರಂತೆ ಇದೀಗ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ(KKRDB) ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕ್ರತಿಕ ಸಂಘದ ಅಕ್ರಮಗಳ ತನಿಖೆಯನ್ನು ಅಧಿಕಾರಿಗಳ ತಂಡ ಆರಂಭಿಸಿದೆ.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಗೆ ಬಿಡುಗಡೆ ಮಾಡಿ ವೆಚ್ಚ ಮಾಡಿರುವ 3000 ಕೋಟಿ ರೂ. ಅನುದಾನದಲ್ಲಿ ನಡೆದಿರುವ ವ್ಯಾಪಕ ಅಕ್ರಮಗಳು ಹಾಗೂ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಗಾಗಿ ಬಿಡುಗಡೆ ಮಾಡಿ ವೆಚ್ಚ ಮಾಡಲಾಗಿರುವ ರೂ 3.50 ಕೋಟಿ ಅನುದಾನವನ್ನು ಕೆ.ಟಿ.ಪಿ.ಪಿ ಕಾಯ್ದೆಯಡಿ ಪ್ರಕ್ರಿಯೆ ನಡೆಸದೆ ಹೆಚ್ಚುವರಿಯಾಗಿ ರೂ. 50 ಲಕ್ಷ ವೆಚ್ಚ ಮಾಡುವಲ್ಲಿ ನಡೆದ ಅಕ್ರಮ ಮತ್ತು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕ್ರತಿಕ ಸಂಘಕ್ಕೆ ಬಿಡುಗಡೆ ಮಾಡಿ ವೆಚ್ಚ ಮಾಡಿರುವ ರೂ 300 ಕೋಟಿ ಅನುದಾನದಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂದು ದೂರುಗಳು ಬಂದ ಹಿನ್ನೆಲೆ ತನಿಖೆ ನಡೆಸಲಾಗುತ್ತಿದೆ.