ಬೆಂಗಳೂರು:- ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹ ಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿ ಖಾತೆಗೆ 2000 ಹಣ ನೀಡುವ ವಿಚಾರದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಗೊಂದಲಗಳಿಗೆ ಕಾರಣವಾಗಿದ್ದು, ಇದೀಗ ಮಹಿಳೆಯವರಿಗೆ ಮಾತ್ರ 2000 ಕೊಡುವುದಲ್ಲ, ಪುರುಷರಿಗೂ ಕೊಡಿ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮನೆ ಯಜಮಾನಿಗೆ 2000 ರೂಪಾಯಿ ಸರ್ಕಾರ ನೀಡುವ ಮೂಲಕ ಯಜಮಾನ ಯಜಮಾನಿಗೆ ಜಗಳ ತಂದಿಡೋದು ಸರಿಯಲ್ಲ. ಪುರುಷರಿಗೂ ಗೃಹಲಕ್ಷ್ಮೀ ಕೊಡಬೇಕು ಅಂತ ಹೇಳಿದ್ದಾರೆ.
ಗೌರವಯುತವಾಗಿ ಕೇಳ್ತೀನಿ ಯಜಮಾನನಿಗೂ ಕೊಡಬೇಕು, ಅವರನ್ನೂ ಕಡೆಗಣಿಸಲು ಸಾಧ್ಯವಿಲ್ಲ. ಯಜಮಾನಿಗೆ 2 ಸಾವಿರ ಬಂದರೆ ಯಜಮಾನನ ಕಥೆ ಏನು ಎಂದು ಪ್ರಶ್ನಿಸಿದ ಅವರು, ಬಜೆಟ್ ಮೇಲಿನ ಚರ್ಚೆಗೆ ಉತ್ತರ ಕೊಡುವಾಗ ಯಜಮಾನ, ಯಜಮಾನಿ ಇಬ್ಬರಿಗೂ ಎರಡೆರಡು ಸಾವಿರ ಕೊಡಬೇಕು. ಬಸ್ನಲ್ಲೂ ಉಚಿತ ಪ್ರಯಾಣ ಕೊಟ್ಟಿದ್ದೀರ, ಇದನ್ನ ನೋಡಿದರೆ ಪುರುಷರ ಮೇಲೆ ಏನೋ ದ್ವೇಷ ಇದ್ದಂತಿದೆ ಎಂದು ಹೇಳಿದ್ದಾರೆ.
ಶಾಸನ ಸಭೆಯಲ್ಲಿ ಅನೇಕರು ಪುರುಷರಿದ್ದರೂ ಈ ಬಗ್ಗೆ ಧ್ವನಿ ಎತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಪದವೀಧರ ಯುವಕರಿಗೆ ಯುವ ನಿಧಿ ಕೊಡುತ್ತಿರಾ. ಆದರೆ ಹಳ್ಳಿಯಲ್ಲಿ ಎಮ್ಮೆ ಕಾಯೋ, ಕುರಿ ದನ ಕಾಯೋ ಹುಡುಗರ ಕಥೆ ಏನಾಗಬೇಕು. ಕುರಿ. ದನ ಎಮ್ಮೆ ಕಾಯೋ ಯುವಕರಿಗೆ ಕನಿಷ್ಟ ಒಂದು ಸಾವಿರ ಆದರೂ ಕೊಡಬೇಕು ಎಂದು ಆಗ್ರಹಿಸಿದರು.