ನಂಜನಗೂಡು:- ಪುರಾಣ ಪ್ರಸಿದ್ದ ದಕ್ಷಿಣಕಾಶಿ ಎಂದೇ ಪ್ರಸಿದ್ದವಾದ ಇಲ್ಲಿನ ಪ್ರಸಿದ್ದ ಯಾತ್ರಾ ಸ್ಥಳವಾದ ಶ್ರಿ ಕಂಠೇಶ್ವರ ದೇವಾಲಯಕ್ಕೆ ಗುರುಪೌರ್ಣಿಮೆ ಪ್ರಯುಕ್ತ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಬಂದು ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದು ಪುನೀತರಾದರು.
ಪೂರ್ಣಿಮೆ ಪ್ರಯುಕ್ತ ನೆನ್ನೆ ಸಂಜೆಯಿಂದಲೇ ಬಂದ ಭಕ್ತರು, ಕಪಿಲಾ ನದಿಯಲ್ಲಿ ಮಿಂದು ಮುಂಜಾನೆ ೪ ಗಂಟೆಯಿಂದಲೇ ಉದ್ದನೆಯ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಅಲ್ಲದೆ ತೂಕದ ತುಲಾಭಾರಸೇವೆ, ಉರುಳುಸೇವೆ, ಈಡುಗಾಯಿಸೇವೆ, ದೇವಿಗೆ ಕುಂಕುಮಾರ್ಚನೆ, ಶ್ರೀಕಂಠೇಶ್ವರ ಸ್ವಾಮಿಗೆ ಬೆಳ್ಳಿ ಅಂಗಾಂಗಳ ಹರಕೆಯನ್ನು ಹುಂಡಿಗೆ ಹಾಕಿ ಶ್ರದ್ದೆ-ಭಕ್ತಿಗಳಿಂದ ಸೇವೆ ಸಲ್ಲಿಸಿ ಭಕ್ತಿ ಮೆರೆದರು.
ವಿಶೇಷವಾಗಿ ಶ್ರೀಕಂಠೇಶ್ವರಸ್ವಾಮಿ ಯವರಿಗೆ ಚಿನ್ನದ ಕೊಳಗ ತೊಡಿಸಿ, ನಾನಾ ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು ಗುರುಪೂರ್ಣಿಮೆ ಅಂಗವಾಗಿ ಶ್ರೀ ಶ್ರಿಕಂಠೇಶ್ವರ ಸ್ವಾಮಿಯವರಿಗೆ ಪಂಚತೀರ್ಥಗಳ ಅಭಿಷೇಕ, ಬಿಲ್ವಾರ್ಚನೆ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಶಾಲಾನ್ಯ ಅರ್ಪಣೆ, ಕಲ್ಲು-ಸಕ್ಕರೆ, ಪೂಜೆಗಳನ್ನು ಸಾಂಗೋಪವಾಗಿ ನೆರವೇರಿಸಲಾಯಿತು. ನಂತರ ಮಹಾಮಂಗಳಾರತಿಯನ್ನು ಮಾಡಿ ಭಕ್ತರಿಗೆ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.
ದೇವಾಲಯದ ದಾಸೋಹ ಭವನದಲ್ಲಿ ಹುಣ್ಣಿಮೆ ಅಂಗವಾಗಿ ಭಕ್ತಾಧಿಗಳಿಗೆ ಪಾಯಸ, ಅನ್ನ, ಸಾಂಬರ್, ಪಲ್ಯ ಮಾಡಲಾಗಿತ್ತು.