ಬೆಂಗಳೂರು: ಗೃಹ ಜ್ಯೋತಿ ಯೋಜನೆಗಾಗಿ ಅರ್ಜಿಗಳನ್ನು ಜೂ. 15ರಿಂದ ಸ್ವೀಕರಿಸುವುದಾಗಿ ಹೇಳಿದ್ದ ಸರ್ಕಾರ, ಅರ್ಜಿ ಸಲ್ಲಿಕೆ ದಿನಾಂಕವನ್ನು ಸದ್ಯದ ಮಟ್ಟಿಗೆ ಮುಂದೂಡಿದೆ. ಜೂ. 15ರ ಬದಲು ಜೂ. 18ರಿಂದ ಅರ್ಜಿಗಳನ್ನು ಸ್ವೀಕರಿಸುವುದಾಗಿ ತಿಳಿಸಿದೆ.
ಸೇವಾ ಸಿಂಧು ಪೋರ್ಟಲ್ ಮೂಲಕ, ಸರ್ಕಾರಿ ಸಂಸ್ಥೆಗಳ ಬಿಲ್ ಪಾವತಿ ಕೇಂದ್ರಗಳಲ್ಲಿ ಗೃಹ ಜ್ಯೋತಿ ಯೋಜನೆಗೆ ಅರ್ಜಿಗಳನ್ನು ಸಲ್ಲಿಸಬೇಕೆಂದು ಸೂಚಿಸಲಾಗಿತ್ತು. ಅದಕ್ಕಾಗಿ ಸರ್ಕಾರ ಕೂಡ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಅದಕ್ಕಾಗಿ ಸಿದ್ಧಪಡಿಸಲಾಗಿರುವ ತಂತ್ರಾAಶದಲ್ಲಿ (ಸಾಫ್ಟ್ ವೇರ್) ಕೆಲವು ತಾಂತ್ರಿಕ ಅಡಚಣೆಗಳು ಕಾಣಿಸಿಕೊಂಡಿವೆ.
ಆ ತಾಂತ್ರಿಕ ಅಡಚಣೆಗಳನ್ನು ಪರಿಹರಿಸಿ ಅದನ್ನು ಪುನಃ ಪರಿಶೀಲನೆಗೊಳಿಸಬೇಕಿದೆ. ಅದು ಪರಿಶೀಲನೆಗೊಳಪಟ್ಟು ಯಾವುದೇ ತಾಂತ್ರಿಕ ಸಮಸ್ಯೆಗಳು ಪುನಃ ಬಾರದಂತೆ ಅದು ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಖಾತ್ರಿಪಡಿಸಿಕೊಂಡ ನಂತರವಷ್ಟೇ ಅದನ್ನು ಬಳಕೆಗೆ ತರಬೇಕಿದೆ. ಇದಕ್ಕಾಗಿ ಕನಿಷ್ಟ ಎರಡು ದಿನಗಳಾದರೂ ಬೇಕು. ಹಾಗಾಗಿ, ಸದ್ಯದ ಮಟ್ಟಿಗೆ ಅರ್ಜಿ ಸಲ್ಲಿಕೆಯ ಆರಂಭಿಕ ದಿನಾಂಕವನ್ನು ಮುಂದೂಡುವುದಾಗಿ ಸರ್ಕಾರ ತಿಳಿಸಿದೆ.
ಅರ್ಜಿಯನ್ನು ಯಾಕೆ ಸಲ್ಲಿಸಬೇಕು?
ಕಾಂಗ್ರೆಸ್ ಪಕ್ಷ, ಚುನಾವಣೆಗೂ ಜನರಿಗೆ ಐದು ಉಚಿತ ಕೊಡುಗೆಗಳನ್ನು ನೀಡುವ ಗ್ಯಾರಂಟಿಗಳನ್ನು ಪ್ರಕಟಿಸಿತ್ತು. ಅದರಲ್ಲೊಂದು ಗೃಹ ಜ್ಯೋತಿ ಯೋಜನೆ. ಅದರಡಿ, ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ಕೊಡುವುದಾಗಿ ಹೇಳಿತ್ತು.
ಈಗ ಅಧಿಕಾರಕ್ಕೆ ಬಂದ ನಂತರ, ಈ ಯೋಜನೆಯ ಜಾರಿಗೆ ಮುಂದಾಗಿರುವ ಕಾಂಗ್ರೆಸ್, ಈ ಯೋಜನೆಗೆ ಪ್ರತಿಯೊಬ್ಬರೂ ಅರ್ಜಿ ಸಲ್ಲಿಸಬೇಕು ಎಂದು ಹೇಳಿದೆ. ಅರ್ಜಿಯೊಂದಿಗೆ ತಾವು ವಾಸವಾಗಿರುವ ಸ್ವಂತ ಅಥವಾ ಬಾಡಿಗೆ ಮನೆಗೆ ನೀಡಲಾಗಿರುವ ವಿದ್ಯುತ್ ಸಂಪರ್ಕದ ಆರ್ ಆರ್ ನಂಬರ್ ಅನ್ನು ತಮ್ಮ ಆಧಾರ್ ಕಾರ್ಡ್ ಸಂಖ್ಯೆಯೊAದಿಗೆ ಲಿಂಕ್ ಮಾಡಬೇಕಿರುತ್ತದೆ. ಅದಕ್ಕಾಗಿ ಅರ್ಜಿಯನ್ನು ಸಲ್ಲಿಸಬೇಕಿದೆ.
ಆರ್ ಆರ್ ನಂಬರ್ – ಆಧಾರ್ ಲಿಂಕ್ ಮಾಡಿದರಷ್ಟೇ ಸಾಕೇ?
ಗೃಹ ಜ್ಯೋತಿಯ ಲಾಭ ಪಡೆಯಲು ಆಧಾರ್ ಕಾರ್ಡ್ – ಆರ್ ಆರ್ ನಂಬರ್ ಲಿಂಕ್ ಮಾಡಲು ಸಲ್ಲಿಸಬೇಕಿರುವ ಅರ್ಜಿಯ ಜೊತೆಗೆ ಅರ್ಜಿದಾರರು ಬಾಡಿಗೆ ಮನೆಯಲ್ಲಿದ್ದರೆ ಆ ಮನೆಯ ಮಾಲೀಕರೊಂದಿಗೆ ತಾವು ಮಾಡಿಕೊಂಡಿರುವ 11 ತಿಂಗಳ ಬಾಡಿಗೆ ಕರಾರು ಪತ್ರದ ನಕಲಿ ಪ್ರತಿಯನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.
ಮನೆಗಳನ್ನು ಭೋಗ್ಯಕ್ಕೆ ಪಡೆದಿದ್ದರೆ, ಕಾನೂನು ಪ್ರಕಾರ ಎರಡು ವರ್ಷಗಳ ಅವಧಿಯ ಭೋಗ್ಯ ಕರಾರು ಪತ್ರದ ನಕಲಿ ಪ್ರತಿಯನ್ನು ಅರ್ಜಿಯೊಂದಿಗೆ ನೀಡಬೇಕಿರುತ್ತದೆ. ಅದರ ಜೊತೆಗೆ, ಮನೆ ಮಾಲೀಕರಿಂದ, ತಮ್ಮ ಮಾಲೀಕತ್ವದ ಮನೆಯಲ್ಲಿ ಅರ್ಜಿದಾರರು ಬಾಡಿಗೆ ಇದ್ದಾರೆಂಬುದನ್ನು ಪ್ರತ್ಯೇಕವಾಗಿ ದೃಢೀಕರಿಸಿದ ಪತ್ರವನ್ನೂ ಇದರ ಜೊತೆಗೆ ಲಗತ್ತಿಸಬೇಕಾಗಿದೆ.