ಬೆಂಗಳೂರು: ಕನ್ನಡ ಕಿರುತೆರೆಯ ಖ್ಯಾತ ನಟ ಸಿಹಿಕಹಿ ಚಂದ್ರು ನಡೆಸಿಕೊಡುವ ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗಿಯಾಗಿದ್ದಾರೆ. ರಾಜಕೀಯ ಒತ್ತಡಗಳ ನಡುವೆಯೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಡಿ.ಕೆ. ಶಿವಕುಮಾರ್, ಗೆಳೆಯನ ಕೈ ರುಚಿಯನ್ನು ಸವಿದಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಡಿಕೆಶಿ, ನನ್ನ ಆತ್ಮೀಯ ಸ್ನೇಹಿತ ಹಾಗೂ ನಟ ಶ್ರೀ ಸಿಹಿಕಹಿ ಚಂದ್ರು ಅವರು ನಡೆಸಿಕೊಡುವ ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ರುಚಿಕರ ಆಹಾರ ಸವಿದೆ. ಪಾಕ ಪ್ರವೀಣರೂ ಆಗಿರುವ ಚಂದ್ರು ಅವರ ಕೈರುಚಿಯ ಅಡುಗೆ ಸವಿದು ಬಹಳ ಕಾಲವಾಗಿತ್ತು, ಅದಕ್ಕೆ ಕಾಲ ಕೈಗೂಡಿರುವುದು ಖುಷಿಯ ಸಂಗತಿ ಎಂದು ಹೇಳಿದ್ದಾರೆ.
ಸಿಹಿಕಹಿ ಚಂದ್ರು ಮತ್ತು ಡಿ.ಕೆ.ಶಿವಕುಮಾರ್ ಆತ್ಮೀಯ ಸ್ನೇಹಿತರು. ಈ ಹಿಂದೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಾಧಕರ ಸೀಟಿನಲ್ಲಿ ಡಿಕೆಶಿ ಕುಳಿತಾಗ ಚಂದ್ರು ಆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ನೆಚ್ಚಿನ ಗೆಳೆಯನ ಬಗ್ಗೆ ಹೆಮ್ಮೆಯ ಮಾತುಗಳನ್ನೂ ಅವರು ಆಡಿದ್ದರು. ಇದೀಗ ಗೆಳೆಯನ ಕಾರ್ಯಕ್ರಮಕ್ಕೆ ಡಿಕೆಶಿ ಬರುವ ಮೂಲಕ ಕೊಡುಕೊಳ್ಳುವಿಕೆಗೆ ನಿಜವಾದ ಮುನ್ನುಡಿ ಬರೆದಿದ್ದಾರೆ.
ಸಿಹಿಕಹಿ ಚಂದ್ರು ನಡೆಸಿಕೊಂಡು ಬರುತ್ತಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮ ಯಶಸ್ವಿ 850 ಕಂತುಗಳನ್ನು ಪೂರೈಸಿ ಸಾವಿರದತ್ತ ಹೆಜ್ಜೆ ಹಾಕುತ್ತಿದೆ. ಈ ಕಾರ್ಯಕ್ರಮದ ವಿಶೇಷತೆ ಅಂದರೆ ಬಯಲೂಟ, ಮನೆಯೂಟ, ಸವಿಯೂಟ, ನಮ್ಮೂರ ಊಟ, ಅತಿಥಿ ದೇವೋಭವ ಎಂಬ ವಿಭಾಗಗಳಿದ್ದು, ಆರೋಗ್ಯಕ್ಕೆ ಸಂಬಂಧಿಸಿದ ಹಾಗೆ ಆರೋಗ್ಯ ಆಹಾರ ಹಾಗೂ ಅಂಗೈಯಲ್ಲಿ ಆರೋಗ್ಯ ಎಂಬ ಹೆಸರಿನಲ್ಲಿ ಮನೆಮದ್ದುಗಳ ಕುರಿತಾಗಿಯೂ ಮಾಹಿತಿ ನೀಡಲಾಗುತ್ತದೆ.
ವೈದ್ಯರಾದ ಗೌರಿ ಸುಬ್ರಹ್ಮಣ್ಯ ಮನೆಮದ್ದು ಮಾಹಿತಿ ನೀಡಿದರೆ, ಎಂ.ಎನ್ ನರಸಿಂಹಮೂರ್ತಿ ಟೈಮ್ ಪಾಸ್ ಜೋಕ್ಸ್ ನಡೆಸಿಕೊಡುತ್ತಾರೆ. ಖುಷಿ ಚಂದ್ರಶೇಖರ್ ಬ್ಯೂಟಿ ಟಿಪ್ಸ್ ಹೇಳಿದರೆ, ಅಲ್ಲದೇ ಈ ಪಾಕಶಾಲೆಯಲ್ಲಿ ಮೂಡಿ ಬಂದ ಭೋಜನದ ವಿವರವನ್ನು ಒಳಗೊಂಡಂತಹ ಪುಸ್ತಕವನ್ನೂ ಸಿಹಿಕಹಿ ಚಂದ್ರು ಹೊರ ತಂದಿದ್ದಾರೆ.