ಬೆಂಗಳೂರು: ಆರೋಗ್ಯ ಹಾಗೂ ಆಹಾರ ಸುರಕ್ಷತಾ ಇಲಾಖೆ ಜನರ ಹಿತದೃಷ್ಟಿ ಕಾಪಾಡುವ ಸಲುವಾಗಿ, ಅನೇಕ ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ಜನರು ಸೇವಿಸುವ ಆಹಾರ ದಿನದಿಂದ ದಿನಕ್ಕೆ ಕಲುಷಿತವಾಗುತ್ತಿದ್ದು, ಕಲಬೆರಕೆ ಆಹಾರದ ವಿರುದ್ಧ ಸಮರ ಸಾರಿದೆ. ಗೋಬಿ, ಕಬಾಬ್, ಕಾಟನ್ ಕ್ಯಾಂಡಿ, ಪಾನಿಪುರಿ ತಿನಿಸುಗಳ ಮೇಲೆ ಆಹಾರ ಇಲಾಖೆ ಒಂದಷ್ಟು ನಿರ್ಬಂಧಗಳನ್ನು ವಿಧಿಸಿತ್ತು. ಜೊತೆಗೆ ಹೋಟೆಲ್ಗಳು ಹಾಗೂ ಬೀದಿ ಬದಿ ವ್ಯಾಪಾರಿಗಳ ಮೇಲೂ ಕೂಡಾ ಒಂದಷ್ಟು ನಿರ್ಬಂಧಗಳನ್ನು ಹೇರಲಾಗಿತ್ತು. ಇಲಾಖೆಯ ಮುಂದಿನ ಗುರಿ ಬೇಕರಿ ತಿನಿಸುಗಳಾಗಿವೆ.
ಬೇಕರಿಯ ತಿನಿಸುಗಳ ಮೇಲೆ ನಿರ್ಬಂಧ ತರಲು ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ಮೊದಲಿಗೆ ಸಾಮಾನ್ಯವಾಗಿ ಜನರು ಹೆಚ್ಚು ಸೇವನೆ ಮಾಡುವ ಕೇಕ್ಗಳ ಮೇಲೆ ನಿಗಾ ವಹಿಸಲಾಗುತ್ತಿದೆ. ಕೇಕ್ಗೆ ಬಳಸುವ ಮೈದಾಹಿಟ್ಟು, ಕೋಕೋ ಪೌಡರ್, ಕ್ರೀಮ್ಗಳಿಗೆ ಬಳಸುವ ಪದಾರ್ಥಗಳು, ಫ್ಲೇವರ್ಗಳು ಹಾಗೂ ಬಣ್ಣ ಬಣ್ಣವಾಗಿರಲು ಬಳಸುವ ಕಲರ್ಗಳನ್ನ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಪೈನಾಪಲ್, ರೆಡ್ ವೆಲ್ವೆಟ್, ಚಾಕೋಲೇಟ್ ಸೇರಿದಂತೆ ವಿವಿಧ ಫ್ಲೇವರ್ಗಳನ್ನ ಜನರು ಇಷ್ಟ ಪಡುವುದರಿಂದ ಅವುಗಳ ತಯಾರಿಕೆ ಅಥವಾ ಅದಕ್ಕೆ ಹಾಕುವ ಪದಾರ್ಥಗಳು ಜನರು ಆರೋಗ್ಯಕ್ಕೆ ಪೂರಕವಾ ಅಥವಾ ಮಾರಕವಾ ಎಂಬುದನ್ನು ತಿಳಿಯಲು ಮುಂದಾಗಿದೆ.