ಮೈಸೂರು: ಲೋಕಸಭಾ ಚುನಾವಣೆಗೆ ಇನ್ನಿಲ್ಲದ ಕಸರತ್ತು ಎಲ್ಲಾ ಪಕ್ಷಗಳಿಂದ ತೆರೆ ಮರೆಯಲ್ಲಿ ನಡೆಯುತ್ತಿರುವ ಈ ಹೊತ್ತಿನಲ್ಲಿ ಅಭ್ಯರ್ಥಿ ಘೋಷಣೆಗೂ ಮುನ್ನವೇ ಕಾಂಗ್ರೆಸ್ ಆಕಾಂಕ್ಷಿಯಾದ ಜೆ.ಜೆ.ಆನಂದ್ ಲಕ್ಷಕ್ಕೂ ಅಧಿಕ ಚಾಮುಂಡೇಶ್ವರಿ ಫೋಟೋಗಳನ್ನು ವಿತರಿಸಲು ಮುಂದಾಗಿ ಅಚ್ಚರಿ ಮೂಡಿಸಿದ್ದಾರೆ.
ಹೌದು ಚುನಾವಣಾ ಸಮಯದಲ್ಲಿ ಕುಕ್ಕರ್, ಸೀರೆ ಸೇರಿ ನಾನಾ ವಸ್ತುಗಳನ್ನು ಆಮಿಷವಾಗಿ ಹಂಚುವುದು ಸಾಮಾನ್ಯ ಆದರೆ, ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಆಕಾಂಕ್ಷಿಯಾಗಿರುವ ಜೆ.ಜೆ.ಆನಂದ್ 1 ಲಕ್ಷದ 70 ಸಾವಿರ ಚಾಮುಂಡೇಶ್ವರಿ ಭಾವಚಿತ್ರವನ್ನು ಮುದ್ರಿಸಿ ಹಂಚುವ ತಯಾರಿ ನಡೆಸಿದ್ದಾರೆ. ಈಗಾಗಲೇ 1700 ಸ್ಥಳಗಳಲ್ಲಿ 70 ಸಾವಿರ ಭಾವಚಿತ್ರಗಳನ್ನು ವಿತರಿಸಿರುವುದಾಗಿ ತಿಳಿಸಿದ್ದು, ಪಿರಿಯಾಪಟ್ಟಣ, ಕುಶಾಲನಗರ ಭಾಗದಲ್ಲಿಯೂ ಮುಂದುವರೆದ ಪೋಟೊ ವಿತರಣೆ ಜತೆಗೆ ಕೈ ಗೆಲುವಿನ ಪ್ರಚಾರ ನಡೆಸಿರುವುದಾಗಿ ಹೇಳಿದ್ದಾರೆ.
ಅಚ್ಚರಿಯೆಂದರೆ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಲೆಹಾಕಿರುವ ಮಾಹಿತಿ ಪ್ರಕಾರ 14 ಮಂದಿ ಆಕಾಂಕ್ಷಿಗಳಿದ್ದು, ಇದುವರೆವಿಗೂ ಯಾರ ಹೆಸರು ಅಂತಿಮಗೊಂಡಿಲ್ಲ. ಹೀಗಿರುವಾಗಲೇ ಆಕಾಂಕ್ಷಿಯಾಗಿರುವ ಜೆ.ಜೆ.ಆನಂದ್ ಅಬ್ಬರದ ಫ್ಲೆಕ್ಸ್ ಅಳವಡಿಸಿರುವುದು ಹಾಗೂ ಲಕ್ಷಕ್ಕೂ ಹೆಚ್ಚಿನ ಪೋಟೊಗಳ ವಿತರಣೆಗೆ ಮುಂದಾಗಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.