ಮಂಡ್ಯ : ತಾಲೂಕಿನ ಹನಕೆರೆ ರೈಲು ನಿಲ್ದಾಣದಲ್ಲಿ ಶನಿವಾರ ಚಲಿಸುವ ರೈಲಿಗೆ ಸಿಲುಕಿ ಯುವತಿಯ ಎರಡೂ ಕಾಲುಗಳು ತುಂಡರಿಸಲ್ಪಟ್ಟ ಘಟನೆ ಸಂಭವಿಸಿದೆ.
ಗದಗ ಜಿಲ್ಲೆಯ ಶಿರಹಟ್ಟಿ ನಿವಾಸಿ ಅನ್ನಪೂರ್ಣ (21) ಎಂಬಾಕೆಯೇ ಎರಡೂ ಕಾಲುಗಳನ್ನು ಕಳೆದುಕೊಂಡ ಯುವತಿ. ಬೆಂಗಳೂರಿನಿಂದ ಮೈಸೂರಿಗೆ ಹೋಗುತ್ತಿದ್ದ ಮೆಮೊ ರೈಲು ಬೆಳಗ್ಗೆ 11.45ರ ಸಮಯದಲ್ಲಿ ಹನಕೆರೆ ರೈಲು ನಿಲ್ದಾಣಕ್ಕೆ ಆಗಮಿಸಿದೆ. ಆ ವೇಳೆ ಇನ್ನೂ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಪ್ರಯತ್ನಿಸಿದಾಗ ಆಯತಪ್ಪಿ ಬಿದ್ದ ಅನ್ನಪೂರ್ಣ ಅವರು, ರೈಲು ಮತ್ತು ಪ್ಲಾಟ್ಫಾರ್ಮ್ ನಡುವೆ ಸಿಲುಕಿದ್ದಾರೆ.
ಈ ವೇಳೆ ರೈಲು ನಿಲ್ಲುವಷ್ಟರಲ್ಲಿ ಪ್ಲಾಟ್ಫಾರ್ಮ್ ಕೆಳಗೆ ಸಿಲುಕಿದ ಅನ್ನಪೂರ್ಣ ಅವರ ಎರಡೂ ಕಾಲುಗಳು ತುಂಡರಿಲ್ಪಟ್ಟಿವೆ. ಜತೆಗಿದ್ದ ಸಂಬಂಧಿ ಯುವಕ ಮತ್ತು ಸ್ಥಳೀಯರು ಆಕೆಯನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ತೀವ್ರ ಗಾಯಗೊಂಡು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿರುವ ಅನ್ನಪೂರ್ಣ ಅವರನ್ನು ನಗರದ ಮಿಮ್ಸ್ ಬೋಧಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಡ್ಯ ರೈಲ್ವೆ ಹೊರ ಉಪ ಠಾಣೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೈಸೂರು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.