ಬೆಂಗಳೂರು:- ಮಾರತಹಳ್ಳಿ ಮುನ್ನೇಕೊಳಲಿನಲ್ಲಿರುವ ವಾಗ್ದೇವಿ ವಿಲಾಸ ಶಾಲೆಯಲ್ಲಿ ಎರಡು ದಿನಗಳ ಕಾಲ ಬ್ರಹ್ಮಾಂಡ ಎಂಬ ಪರಿಕಲ್ಪನೆಯಡಿಯಲ್ಲಿ ನಡೆದ ವಾಗ್ದೇವಿ ಕಲಾ ಉತ್ಸವ 2023 ಇದರ ಸಮಾರೋಪ ಸಮಾರಂಭದಲ್ಲಿ ಚಳ್ಳಕೆರೆ ಸಹೋದರರೆಂದೇ ಪರಿಚಿತರಾದ ಎಂ.ಎಸ್.ರಾಮಸ್ವಾಮಿ ಹಾಗೂ ಎಂ. ಎಸ್. ಶ್ರೀನಿವಾಸನ್ ಇವರಿಗೆ ‘ವಾಗ್ದೇವಿ ವೇದರತ್ನ’ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿದ ಭಾರತೀಯ ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆಯ ಕುಲಪತಿಗಳಾದ ಡಾ. ಬಿ ಎನ್ ಸುರೇಶ್, ವೇದ ಜ್ಞಾನವನ್ನು ಪಸರಿಸುತ್ತಿರುವ ಚಳ್ಳಕೆರೆ ಸಹೋದರರ ಕಾರ್ಯವನ್ನು ಶ್ಲಾಘಿಸಿದರು. ‘ಬ್ರಹ್ಮಾಂಡ’ ಎಂಬ ಪರಿಕಲ್ಪನೆ ಒಂದು ಅದ್ಭುತ . ಅದರ ಉಗಮದ ಹಿನ್ನೆಲೆಯನ್ನು ಸವಿಸ್ತಾರವಾಗಿ ವಿವರಿಸುತ್ತಾ ಬಿಗ್ ಬ್ಯಾಂಗ್ ತತ್ವದ ಸಾರವನ್ನು ತಿಳಿಸಿದರು. ಬಾಹ್ಯಾಕಾಶ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆಗೆ ಚಂದ್ರಯಾನ 3 ರ ಯಶಸ್ಸು ಅಡಿಪಾಯವಾಗಿ, 2047ರಲ್ಲಿ ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಎಲ್ಲಾ ದೇಶಗಳನ್ನು ಮೀರಿ ಪಾರಮ್ಯ ಸಾಧಿಸಲಿದೆ ಎಂದು ಹೇಳಿದರು. ಭಾರತೀಯ ವೇದ ಪರಂಪರೆ ಹಾಗೂ ವಿಜ್ಞಾನದ ನಡುವೆ ನಿಕಟ ಸಂಬಂಧವಿದ್ದು ಅದನ್ನು ನಮ್ಮ ಯುವಜನಾಂಗ ಅರಿತು ಮುನ್ನಡೆವಲ್ಲಿ ಇಂತಹ ಉತ್ಸವಗಳು ಸಹಕಾರಿ ಆಗಲಿವೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಚಳ್ಳಕೆರೆ ಸಹೋದರರು ವೇದಜ್ಞಾನವನ್ನು ಪಡೆದು ಪರಿಪೂರ್ಣ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮೇಧಾಸೂಕ್ತವನ್ನು ಪಠಿಸಿ ಬುದ್ಧಿಮತ್ತೆಯನ್ನು ವಿಸ್ತರಿಸಿಕೊಳ್ಳಲು ಅದು ಹೇಗೆ ಸಹಾಯಕವಾಗುವುದು ಎನ್ನುವುದನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ವಿಜ್ಞಾನ ಮತ್ತು ಆಧ್ಯಾತ್ಮ ಜೊತೆಗೆ ಸಾಗಿದಾಗ ಬದುಕಿನಲ್ಲಿ ಶ್ರೇಷ್ಠತೆಯ ಅನುಭವವನ್ನು ಪಡೆಯಬಹುದಾಗಿದೆ. ವಿದ್ಯಾರ್ಥಿಗಳು ಸುಭದ್ರ ರಾಷ್ಟ್ರ ನಿರ್ಮಾಣದಲ್ಲಿ ಕೈಜೋಡಿಸಬೇಕಾದರೆ ಅವರಿಗೆ ಭಾರತೀಯ ಮೌಲ್ಯಗಳನ್ನು ಪರಿಚಯಿಸುವುದು ಅತ್ಯವಶ್ಯಕ. ಈ ಹಿನ್ನೆಲೆಯಲ್ಲಿ ಭಾರತೀಯ ಮೌಲ್ಯಗಳನ್ನು ನಿಸ್ವಾರ್ಥ ಮನೋಭಾವದಿಂದ ಎಲ್ಲರಿಗೂ ಪರಿಚಯಿಸುತ್ತಿರುವ ಚಳ್ಳಕೆರೆ ಸಹೋದರರನ್ನು ಕಲಾ ಉತ್ಸವ 2023 ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತಿದೆ ಎಂದು ವಾಗ್ದೇವಿ ವಿಲಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾದ ಕೆ.ಹರೀಶ್ ಹೇಳಿದರು.