ಮೈಸೂರು: ಚಾಮರಾಜೇಂದ್ರ ಮೃಗಾಲಯ ಪ್ರಾಧಿಕಾರದ ಆಶ್ರಯದಲ್ಲಿ ಪೊಲೀಸ್ ಬಡಾವಣೆಯಲ್ಲಿರುವ ತಿಪ್ಪಯ್ಯನ ಕೆರೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೆರೆಯ ಆವರಣದಲ್ಲಿ ವಲಯ ಅರಣ್ಯ ಅಧಿಕಾರಿ ರಾಮಚಂದ್ರಪ್ಪ, ಉಪನಿರ್ದೇಶಕಿ ರೋಷನಿ ಸೇರಿದಂತೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಡಾವಣೆಯ ನಿವಾಸಿಗಳೂ ಕೂಡ ಒಂದೊಂದು ಸಸಿ ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ವಲಯ ಅರಣ್ಯ ಅಧಿಕಾರಿ ರಾಮಚಂದ್ರಪ್ಪ, ಮೈಸೂರು ನಗರಕ್ಕೆ ಹೊಂದಿಕೊಂಡಿರುವ ತಿಪ್ಪಯ್ಯನ ಕೆರೆ ಪ್ರಕೃತಿದತ್ತವಾಗಿ ಬಂದಿರುವ ಬಳುವಳಿಯಾಗಿದೆ. ಚಾಮುಂಡಿ ಬೆಟ್ಟದಿಂದ ಹರಿದುಬರುವ ನೀರು ತಿಪ್ಪಯ್ಯನ ಕೆರೆಯಲ್ಲಿ ಸಂಗ್ರಹವಾಗುವ ಮೂಲಕ ಈ ಭಾಗದ ಜನರ ಪಾಲಿಗೆ ದೇವಿಯ ವರಪ್ರಸಾದವಾಗಿದೆ. ಇಂತಹ ತಾಣವನ್ನು ಭವಿಷ್ಯದ ಪೀಳಿಗೆಗಾಗಿ ಕಾಪಾಡಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.
ವನಮಹೋತ್ಸವದ ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಕುರಿತು ನಾವೆಲ್ಲರೂ ಸಂಕಲ್ಪ ಮಾಡಬೇಕು. ಗಿಡದಿಂದ ಮರ, ಮರದಿಂದ ಮನೆ, ಮನೆಯಿಂದ ಬದುಕು ಎಂಬುದನ್ನು ನಾವು ಅರಿತು, ಪರಿಸರದ ಮೇಲೆ ಸವಾರಿ ಮಾಡದಂತೆ ಬದುಕು ಸಾಗಿಸಬೇಕು ಎಂದು ಹೇಳಿದರು.
ಈ ವೇಳೆ ಉಪನಿರ್ದೇಶಕಿ ರೋಷನಿ, ಶಿಕ್ಷಣಾಧಿಕಾರಿ ಸುಜೋಷ, ತಿಪ್ಪಯ್ಯನ ಕೆರೆ ಉಸ್ತುವಾರಿ ಚಾಮರಾಜ್, ಪೊಲೀಸ್ ಬಡಾವಣೆಯ ಪ್ರಮುಖರಾದ ಥಾಮಸ್, ಲಕ್ಷ್ಮಿಪತಿ, ಎ.ಆರ್. ಸ್ವಾಮಿ, ಮುರಳೀಧರ ಮಾನೆ, ಮನುಕುಮಾರ್, ಶೋಭಾ ಧನಂಜಯ, ವೀಣಾ ಕಾಮತ್, ಮಂಜುನಾಥ್, ಲೀಲಾ ಶಿವಕುಮಾರಯ್ಯ, ಶಂಭು ಮತ್ತಿತರರು ಉಪಸ್ಥಿತರಿದ್ದರು.