ವರದಿ: ಬೆನಕ ಸುರೇಶ್
ಚಾಮರಾಜನಗರ: ರಾಜ್ಯ ವಿಧಾನಸಭಾ ಚುನಾವಣೆಯ ಬಿಜೆಪಿ ಟಿಕೆಟ್ ಪಟ್ಟಿ ಅಂತಿಮ ಹಂತಕ್ಕೆ ತಲುಪಿದ್ದರೂ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಕರಗಿಲ್ಲ.
ಹೌದು, ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ದಂಡೇ ಇದೆ. ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ನಾಗಶ್ರೀ ಪ್ರತಾಪ್, ಕೆಆರ್ಐಡಿಎಲ್ ಅಧ್ಯಕ್ಷ ರುದ್ರೇಶ್, ಕಾಡಾ ಅಧ್ಯಕ್ಷ ನಿಜಗುಣರಾಜು, ಕೇಂದ್ರ ಬರಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ, ಖ್ಯಾತ ಕಿವಿ, ಮೂಗು, ಗಂಟಲು ತಜ್ಞ ಡಾ.ಎ.ಆರ್. ಬಾಬು, ರೈತ ಮುಖಂಡ ಮಲ್ಲೇಶ್, ದಲಿತ ಮುಖಂಡ ವೆಂಕಟರಮಣಸ್ವಾಮಿ @ ಪಾಪು, ನಾಗುರಮೇಶ್, ಹೀಗೆ ಆಕಾಂಕ್ಷಿಗಳ ಪಟ್ಟಿ ದಿನೇ ದಿನೇ ಹನಮಂತನ ಬಾಲದಂತೆ ಬೆಳೆಯುತ್ತಲೇ ಇದೆ. ಇವರೆಲ್ಲರ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ರವರ ಹೆಸರು ಬಲವಾಗಿ ಕೇಳಿ ಬರುತ್ತಿರುವುದು ಇತರೆ ಆಕಾಂಕ್ಷಿಗಳ ನಿದ್ದೆಗೆಡಿಸಿದೆ.
ಇವರ ಪೈಕಿ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ ರವರು ಈ ಹಿಂದೆ ಬಿಜೆಪಿಯಿಂದ ಒಂದು ಬಾರಿ ಹಾಗೂ ಕೆಜೆಪಿ ಒಂದು ಬಾರಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪುಟ್ಟರಂಗಶೆಟ್ಟಿ ರವರ ಎದುರಿಗೆ ಸೋಲು ಅನುಭವಿಸಿದ್ದಾರೆ. ಇವರು ಮತ್ತೊಂದು ಅವಕಾಶಕ್ಕಾಗಿ ಪ್ರಯತ್ನಿಸುತ್ತಿದ್ದಾರೆ.
ಹಾಗೆಯೇ ನಾಗಶ್ರೀ ಪ್ರತಾಪ್ ರವರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಜನಪ್ರಿಯತೆ ಗಳಿಸಿದ್ದಾರೆ. ಅಲ್ಲದೆ ಇವರ ತಂದೆ ಮಾಜಿ ಶಾಸಕ ದಿವಂಗತ ಸಿ. ಗುರುಸ್ವಾಮಿರವರ ಹೆಸರು ಸಹ ನೆರವಿಗೆ ಬರಲಿದೆ. ಮಹಿಳೆ ಎಂಬ ಕಾರಣಕ್ಕೂ ಸಹ ಇವರ ಹೆಸರು ಟಿಕೆಟ್ ಪೈಪೋಟಿಯಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿದೆ. ಕ್ಷೇತ್ರದ ಹಲವರ ಬಾಯಲ್ಲಿ ಇವರಿಗೆ ಟಿಕೆಟ್ ನೀಡುವುದು ಸೂಕ್ತ ಎಂಬ ಅಭಿಪ್ರಾಯಗಳು ಹರಿದಾಡುತ್ತಿದೆ.
ಟಿಕೆಟ್ ಆಕಾಂಕ್ಷಿಗಳಲ್ಲಿ ಪ್ರಬಲವಾಗಿ ಕೇಳಿ ಬರುತ್ತಿರುವ ಮತ್ತೊಂದು ಹೆಸರು ಕೆ.ಆರ್.ಐ.ಡಿ.ಎಲ್. ಅಧ್ಯಕ್ಷ ರುದ್ರೇಶ್. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಆಪ್ತ ಬಳಗದಲ್ಲಿ ಕಾಣಿಸಿಕೊಂಡಿರುವ ಇವರು ಈಗಾಗಲೇ ಹಲವಾರು ತಿಂಗಳಿನಿAದ ನಗರದಲ್ಲೇ ಬೀಡು ಬಿಟ್ಟಿದ್ದು, ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕ್ಷೇತ್ರದಾದ್ಯಂತ ಓಡಾಡಿದ್ದಾರೆ. ಅಲ್ಲದೆ ಚಾಮರಾಜನಗರದಿಂದ ಸ್ಪರ್ಧಿಸಲು ಟಿಕೆಟ್ ದೊರೆಯುವ ಭರವಸೆಯಿಂದ ವಾಸದ ಮನೆಯನ್ನು ಸಹ ಖರೀದಿಸಿರುತ್ತಾರೆ.
ಇನ್ನೂ ಯಾವುದೇ ಬಣಗಳಿಗೆ ಸೇರದೆ ತಮ್ಮದೇ ಆದ ವರ್ಚಸ್ಸು ಗಳಿಸಿರುವ ಮತ್ತೊಬ್ಬ ಮುಖಂಡ ಕಿವಿ, ಮೂಗು, ಗಂಟಲು ತಜ್ಷ ಡಾ|| ಎ.ಆರ್. ಬಾಬು ಅವರು ಖ್ಯಾತ ವೈದ್ಯರಾಗಿದ್ದಾರೆ. ಇವರು ಸಹ ಹಲವಾರು ದಿನಗಳಿಂದ ಕ್ಷೇತ್ರದಾದ್ಯಂತ ವಿವಿಧ ಕಡೆಗಳಲ್ಲಿ ಸಾರ್ವಜನಿಕರಿಗೆ ಅದರಲ್ಲೂ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಮನೆ ಬಾಗಿಲಿಗೆ ವೈದ್ಯಕೀಯ ಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ವಿವಿಧ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸುತ್ತಾ ಬಂದಿದ್ದು, ಜನರ ಮೆಚ್ಚುಗೆಯನ್ನು ಗಳಿಸಿರುತ್ತಾರೆ. ಇವರು ಸಹ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಹೊಸ ಮುಖಗಳಿಗೆ ಮಣೆ ಹಾಕುವ ಬಿಜೆಪಿಯವರ ತಂತ್ರಗಾರಿಕೆಯಲ್ಲಿ ಇವರಿಗೆ ಟಿಕೆಟ್ ಸಿಕ್ಕಿದರೂ ಆಶ್ಚರ್ಯವಿಲ್ಲ.
ಇವೆಲ್ಲದರ ಮಧ್ಯೆಯೇ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣರವರು ಚಾಮರಾಜನಗರದಿಂದ ಕಣಕ್ಕಿಳಿಯಲು ತೆರೆಮರೆಯಿಂದ ಪ್ರಯತ್ನಿಸುತ್ತಿರುವುದು ಇನ್ನುಳಿದ ಆಕಾಂಕ್ಷಿಗಳ ನಿದ್ದೆಗೆಡಿಸಿರುವುದು ಸುಳ್ಳಲ್ಲ. ಸೋಮಣ್ಣರವರು ತಮ್ಮ ಅಭಿವೃದ್ಧಿ ಕಾರ್ಯಕ್ರಮಗಳಿಂದ ಜಿಲ್ಲೆಯಲ್ಲಿ ತಮ್ಮದೇ ಆದ ಅಭಿಮಾನಿ ಬಳಗ ಹಾಗೂ ಕಾರ್ಯಕರ್ತರನ್ನು ಹೊಂದಿದ್ದಾರೆ. ಎಲ್ಲ ಪಕ್ಷದವರೊಂದಿಗೆ ಸ್ನೇಹ ಹೊಂದಿರುವ ಇವರು, ಮುಸ್ಲಿಂ ಜನಾಂಗ ಸೇರಿದಂತೆ ಎಲ್ಲಾ ಜನಾಂಗದವರ ವಿಶ್ವಾಸವನ್ನು ಸಹ ಗಳಿಸಿರುತ್ತಾರೆ. ಇವರು ಸ್ಪರ್ಧಿಸಿದರೆ ಚಾಮರಾಜನಗರ ಕ್ಷೇತ್ರವು ಭಾರಿ ಕುತೂಹಲ ಕೆರಳಿಸಲಿದೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಸತತ 3 ಬಾರಿ ಶಾಸಕರಾಗಿರುವ ಸಿ. ಪುಟ್ಟರಂಗಶೆಟ್ಟಿ ರವರನ್ನು ಎದುರಿಸಲು ಸಮರ್ಥ ಅಭ್ಯರ್ಥಿಯೇ ಬೇಕು. ಏಕೆಂದರೆ, ಶಾಸಕ ಸಿ. ಪುಟ್ಟರಂಗಶೆಟ್ಟಿ ಈಗಾಗಲೇ ಕ್ಷೇತ್ರದ ಜನರ ನಾಡಿಮಿಡಿತವನ್ನು ಚೆನ್ನಾಗಿಯೇ ಅರಿತಿದ್ದಾರೆ. ಉಪ್ಪಾರ ಸಮಾಜಕ್ಕೆ ಸೇರಿದ ಇವರು ತಮ್ಮದೇ ಆದ ಓಟ್ ಬ್ಯಾಂಕ್ನ್ನು ಹೊಂದಿದ್ದಾರೆ. ಉಪ್ಪಾರರ ಸಂಪೂರ್ಣ ಮತಗಳು ಇವರಿಗೆ ಮೀಸಲಿರಿಸಿದೆ. ಇದಲ್ಲದೆ ಕಾಂಗ್ರೆಸ್ನ ಸಾಂಪ್ರಾದಾಯಿಕ ಮತಗಳಾದ ಮುಸ್ಲಿಂ ಮತಗಳು ಸಹ ಇವರಿಗೆ ಸಾರಸಗಟಾಗಿ ಬೀಳಲಿದೆ. ಇನ್ನು ಸಿದ್ಧರಾಮಯ್ಯರವರನ್ನು ಬೆಂಬಲಿಸಿ ಕೆಲವು ಕುರುಬ ಜನಾಂಗದ ಮತಗಳು ಹಳೆಯ ಕಾಂಗ್ರೆಸ್ನ ಲಿಂಗಾಯತ ಮತಗಳು ಸಹ ಪುಟ್ಟರಂಗಶೆಟ್ಟಿರವರ ಗೆಲುವಿಗೆ ನೆರವಾಗಲಿದೆ.
ಇವೆಲ್ಲವನ್ನೂ ಮೀರಿ ಪುಟ್ಟರಂಗಶೆಟ್ಟಿರವರನ್ನು ಎದುರಿಸಿ ಗೆಲುವು ಸಾಧಿಸಲು ಸಮರ್ಥ ಅಭ್ಯರ್ಥಿಯೇ ಬೇಕು. ಇದಕ್ಕಾಗಿಯೇ ಬಿಜೆಪಿಯು ಟಿಕೆಟ್ ಘೋಷಣೆ ಮಾಡದೆ ಎಲ್ಲಾ ಲೆಕ್ಕಾಚಾರಗಳನ್ನು ಹಾಕುತ್ತಿದೆ. ಅಳೆದು ತೂಗಿ ಯಾರಿಗೆ ಟಿಕೆಟ್ ನೀಡುವುದು ಕಾದು ನೋಡಬೇಕಿದೆ.