ಚಾಮರಾಜನಗರ:- ಚಿರತೆ ಸೆರೆಹಿಡಿಯುವುದಕ್ಕಾಗಿ ಬೋನಿನಲ್ಲಿ ಇರಿಸಿದ್ದ ಮೇಕೆಯನ್ನು ಕದ್ದೊಯ್ದಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಚನ್ನವಡೆಯಪುರ ಗ್ರಾಮದ ಬಳಿ ಚಿರತೆ ದಾಳಿ ನಡೆಸಿ ಕರು, ಕುರಿಗಳನ್ನು ಸಾಯಿಸಿತ್ತು. ಚಿರತೆ ಸೆರೆ ಹಿಡಿಯಲು ಗ್ರಾಮದ ರೈತರು ಒತ್ತಾಯಿಸಿದ್ದರು. ಅದರಂತೆ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯ ಅರಣ್ಯಾಧಿಕಾರಿಗಳು ಚಿರತೆ ಸೆರೆಗೆ ಬೋನು ಇರಿಸಿದ್ದರು.
ಸಂಜೆ ಬೋನಿಗೆ ಮೇಕೆ ಕಟ್ಟಿ ಅರಣ್ಯ ಇಲಾಖೆ ಸಿಬ್ಬಂದಿ ವಾಪಸ್ ಬಂದಿದ್ದರು. ಆದರೆ ಬೆಳಿಗ್ಗೆ ಬೋನಿನ ಹತ್ತಿರ ಹೋದಾಗ ಚಿರತೆನೂ ಇಲ್ಲ, ಮೇಕೆನೂ ಇರದೆ ಬೋನು ಖಾಲಿಯಾಗಿತ್ತು. ಕಳ್ಳರ ಕೈ ಚಳಕದಿಂದ ಮೇಕೆ ಮಾಯವಾಗಿತ್ತು.
ಚಿರತೆ ಏನಾದರೂ ಮೇಕೆಯನ್ನು ಎಳೆದುಕೊಂಡು ಹೋಗಿದೆಯಾ ಎಂದರೆ ಚಿರತೆ ಬಂದಿದ್ದ ಕುರುಹು ಕೂಡ ಇಲ್ಲದಿದ್ದರಿಂದ ಕಳ್ಳರು ಮೇಕೆಯನ್ನು ಬಿಚ್ಚಿಕೊಂಡು ಹೋಗಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಈಗ ಚಿರತೆ ಬದಲಾಗಿ ಮೇಕೆ ಹುಡುಕುವಂತಾಗಿದೆ.