ಬೆಂಗಳೂರು: ಕೋಟಿ ಕುಬೇರ ಕೆಜಿಎಫ್ ಬಾಬು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಇದರ ಬೆನ್ನಲ್ಲೇ ಮಸೀದಿಗಳಿಗೆ ನೀಡಿದ್ದ ಹಣದ ಚೆಕ್ಗಳನ್ನು ವಾಪಸ್ ಪಡೆಯಲು ಕೆಜಿಎಫ್ ಬಾಬು ಮುಂದಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿದವರ ಪೈಕಿ ಅತಿ ಶ್ರೀಮಂತ ಅಭ್ಯರ್ಥಿಯಾಗಿದ್ದ ಕೆಜಿಎಫ್ ಬಾಬು ಉರ್ದು ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡುವ ಮೂಲಕ ಚೆಕ್ಗಳನ್ನು ವಾಪಸ್ ಕೇಳಿದ್ದಾರೆ.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಯುಸೂಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು ಸುಮಾರು ೬೪ ಮಸೀದಿಗಳಿಗೆ ೧೭.೩೦ ಕೋಟಿ ರೂ. ಮೌಲ್ಯದ ಚೆಕ್ಗಳನ್ನು ನೀಡಿದ್ದರು. ಈಗ ಉರ್ದು ಪತ್ರಿಕೆಯಲ್ಲಿ ಜಾಹೀರಾತು ನೀಡಿರುವ ಕೆಜಿಎಫ್ ಬಾಬು ನಾನು ನೀಡಿರುವ ಹಣವನ್ನು ಮಸೀದಿಗಳು ಬಳಸಬಾರದು. ಅದು ಸ್ವೀಕರಾರ್ಹವಲ್ಲದ ಹಣ, ಆದಷ್ಟು ಬೇಗ ಚೆಕ್ಗಳನ್ನು ವಾಪಸ್ ಮಾಡಿ ಎಂದು ಸಮಿತಿಗಳಿಗೆ ಹೇಳಿದ್ದಾರೆ.
ಇಸ್ಲಾಮಿಕ್ ಸಂಸ್ಥೆ ದಾರುಲ್ ಉಲೂಮ್ ಹೊರಡಿಸಿರುವ ಫತ್ವಾ ಉಲ್ಲೇಖಿಸಿರುವ ಕೆಜಿಎಫ್ ಬಾಬು, ಚುನಾವಣಾ ಸಮಯದಲ್ಲಿ ರಾಜಕಾರಣಿಗಳಿಂದ ಪಡೆದ ಹಣ ಸ್ವೀಕರಾರ್ಹವಲ್ಲ ಎಂದಿದ್ದಾರೆ. ಸಿದ್ದಾಪುರದ ಟ್ಯಾಂಕ್ ಗಾರ್ಡನ್ನಲ್ಲಿರುವ ಮಸೀದಿ-ಇ-ಅತಿಕ್ ಹಾಗೂ ಕೃಷ್ಣಪ್ಪ ಗಾರ್ಡನ್ನಲ್ಲಿರುವ ಮಸೀದಿ-ಇ-ಹುಸ್ನಾ ಸೇರಿ ಹಲವು ಮಸೀದಿ ಸಮಿತಿಗಳಿಗೆ ನಾನು ಕೊಟ್ಟಿರುವ ಚೆಕ್ಗಳನ್ನು ವಾಪಸ್ ನೀಡಿ, ಅದನ್ನು ಬಳಸಬೇಡಿ ಎಂದು ಕೇಳಿದ್ದಾರೆ.
ಕಾಂಗ್ರೆಸ್ನಲ್ಲಿದ್ದ ಕೆಜಿಎಫ್ ಬಾಬು ಟಿಕೆಟ್ ಸಿಗದ ಕಾರಣಕ್ಕೆ ಚಿಕ್ಕಪೇಟೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಸ್ಲಮ್ ಜನಕ್ಕೆ ೩೦೦ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು. ಜೊತೆಗೆ ಚಿಕ್ಕಪೇಟೆ ಅಭಿವೃದ್ಧಿಗಾಗಿ ತಮ್ಮ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲು ೩೦೦ ಕೋಟಿ ರೂ. ಸ್ವಂತ ಹಣ ವ್ಯಯಿಸುವುದಾಗಿ ಹೇಳಿದ್ದರು. ಆದರೆ, ಕೆಜಿಎಫ್ ಬಾಬು ಚುನಾವಣೆಯಲ್ಲಿ ಸೋತಿದ್ದಾರೆ.
ಈ ನಡೆಯನ್ನು ಖಂಡಿಸಿರುವ ಮಾವಳ್ಳಿ ಮಸೀದಿ ಕಾರ್ಯದರ್ಶಿ ಖಾದಿರ್ ಅಹ್ಮದ್ ಷರೀಫ್ ಕೆಜಿಎಫ್ ಬಾಬು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲೋಕಲ್ ಮೌಲ್ವಿಯಿಂದ ಫತ್ವಾ ಖರೀದಿಸಿ ಚಿಕ್ಕಪೇಟೆಯ ಮಸೀದಿಗಳನ್ನು ಕೆಜಿಎಫ್ ಬಾಬು ಗುರಿಯಾಗಿಸಿಕೊಂಡಿದ್ದಾರೆ. ತಾವೇ ಎಲ್ಲ ಮಸೀದಿಗಳನ್ನು ಆಹ್ವಾನಿಸಿ ಎಸ್ಆರ್ ನಗರದ ಹಕ್ ಹೌಸ್ನಲ್ಲಿ ಬೃಹತ್ ಸಮಾರಂಭ ಮಾಡಿ ಚೆಕ್ ವಿತರಿಸಿದ್ದರು. ಆಗ ಇದು ದೇಣಿಗೆಯಾಗಿದ್ದು, ಮಸೀದಿಗಳ ಅಭಿವೃದ್ಧಿಗೆ ಬಳಸಿಕೊಳ್ಳಬಹುದು ಎಂದು ಹೇಳಿದ್ದರು. ಆದರೆ, ಈಗ ಚುನಾವಣೆಯಲ್ಲಿ ಸೋತ ಬಳಿಕ ನೀಡಿದ್ದ ಚೆಕ್ಗಳನ್ನು ವಾಪಸ್ ನೀಡಿ ಎಂದು ಕೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ಚಿಕ್ಕಪೇಟೆಯಲ್ಲಿ ಕೆಜಿಎಫ್ ಬಾಬುಗೆ ಸೋಲು!
ಕಾಂಗ್ರೆಸ್ನಿAದ ಅಮಾನತುಗೊಂಡು ಚಿಕ್ಕಪೇಟೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಕೆಜಿಎಫ್ ಬಾಬು ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಇಲ್ಲಿ ಹಾಲಿ ಶಾಸಕರಾಗಿದ್ದ ಉದಯ್ ಗರುಡಾಚಾರ್ ಮತ್ತೊಮ್ಮೆ ಬಿಜೆಪಿಯಿಂದ ಗೆದ್ದಿದ್ದರೆ, ಕಾಂಗ್ರೆಸ್ನಿAದ ಸ್ಪರ್ಧಿಸಿದ್ದ ಆರ್ವಿ ದೇವರಾಜ್ ಸೋಲು ಅನುಭವಿಸಿದರು. ಉದಯ್ ಗರುಡಾಚಾರ್ ೫೭,೨೯೯ ಮತಗಳನ್ನು ಪಡೆದರೆ, ಆರ್ವಿ ದೇವರಾಜ್ ೪೫,೧೮೬ ಮತಗಳನ್ನು ಪಡೆದಿದ್ದರು. ಪಕ್ಷೇತರ ಕೆಜಿಎಫ್ ಬಾಬು ೨೦,೯೩೧ ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೂ ಕಾರಣರಾಗಿದ್ದರು.