ಮುಂದಿನ ನಾಲ್ಕೈದು ದಿನಗಳು ದೇಶದ ಇತರೆ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆಯ ಸೂಚನೆ ನೀಡಿದೆ.
ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮಹಾರಾಷ್ಟ್ರ, ಕರ್ನಾಟಕ ಹಾಗೂ ತೆಲಂಗಾಣದ ಕೆಲವು ಭಾಗಗಳಲ್ಲಿ ಮುಂಗಾರು ಮತ್ತಷ್ಟು ಚುರುಕುಗೊಳ್ಳುವ ಪರಿಸ್ಥಿತಿಗಳಿವೆ ಎಂದು ಹೇಳಿದೆ. ಮುಂದಿನ ಐದು ದಿನಗಳಲ್ಲಿ ಪೂರ್ವ ಮಧ್ಯಭಾಗ ಹಾಗೂ ವಾಯವ್ಯ ಭಾರತದ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಒಡಿಶಾ, ಅರುಣಾಚಲಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಪಶ್ಚಿಮಬಂಗಾಳ, ಸಿಕ್ಕಿಂ ಮತ್ತು ಜಾರ್ಖಂಡ್ನಲ್ಲಿಯೂ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.
ಜೂನ್ 24, 25 ರಂದು ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ. ಜೂನ್ 26ರಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗಲಿದ್ದು ಆರೆಂಜ್ ಅಲರ್ಟ್ ನೀಡಲಾಗಿದೆ. ಜೂನ್ 26 ರಂದು ಕಲಬುರ್ಗಿ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಜೂನ್ 27ರಂದು ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಹಿನ್ನಲೆಯಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದ್ದು, ಶಿವಮೊಗ್ಗ, ಕಲಬುರ್ಗಿ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಕಳೆದ 3 ವರ್ಷಗಳಿಂದ ಅಪಾರ ಮಳೆಯಿಂದಾದ ಅನಾಹುತಗಳು ಒಂದೆರಡಲ್ಲ. ಭಾರಿ ಭೂ ಕುಸಿತ, ಪ್ರವಾಹದಿಂದಾಗಿ 20ಕ್ಕೂ ಅಧಿಕ ಜೀವ ನಷ್ಟವಾಗಿದೆ. ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿ ನಾಮಾವಶೇಷವಾಗಿದೆ. 1,000ಕ್ಕೂ ಅಧಿಕ ಮನೆಗಳು ನೆಲಸಮಗೊಂಡಿವೆ. ಇದೀಗ ಮತ್ತೆ ಮಳೆಗಾಲ ಎದುರಾಗಿರುವುದರಿಂದ ಸಂಭಾವ್ಯ ಅಪಾಯ ಎದುರಿಸಲು ಅಗತ್ಯ ಕ್ರಮಕ್ಕೆ ಜಿಲ್ಲಾಡಳಿತ ಸಜ್ಜಾಗಿದ್ದು, ಎನ್ಡಿಆರ್ಎಫ್ ತಂಡ ಜೂನ್ 21ರಂದು ಜಿಲ್ಲೆಗೆ ಆಗಮಿಸಿದೆ.