ಮೈಸೂರು: ರಾಜ್ಯ ಸರ್ಕಾರ ಜನಗಣತಿಗೆ ಸಿದ್ಧತೆ ನಡೆಸಿರುವುದನ್ನು ಸ್ವಾಗತಿಸುತ್ತಾ, ಶೀಘ್ರವೇ ಅದನ್ನು ಬಿಡುಗಡೆ ಮಾಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ವಾದ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದಸಂಸ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾವಳ್ಳಿ ಶಂಕರ್, ಕೇಂದ್ರ ಸರ್ಕಾರ ಜನಗಣತಿ ಹಾಗೂ ಮಹಿಳಾ ಮೀಸಲಾತಿಯ ಬಗ್ಗೆ ಪ್ರಸ್ತಾಪಿಸಿದೆ. ಮಾತ್ರವಲ್ಲದೆ ಮುಂದಿನ ಲೋಕಸಭಾ ಚುನಾವಣೆಯ ಬಳಿಕ ಜಾರಿಗೊಳಿಸುವುದಾಗಿ ಹೇಳಿರುವುದು ಹಾಸ್ಯಸ್ಪದವಾಗಿದೆ. ಆ ಮೂಲಕ ಬಿಜೆಪಿ ರಾಜಕೀಯ ಲಾಭಕ್ಕಾಗಿ ಘೋಷಣೆ ಮಾಡುತ್ತಿರುವುದು ಸ್ಪಷ್ಟವಾಗಿದೆ. ಆದರೆ, ರಾಜ್ಯ ಸರ್ಕಾರ ಘೋಷಣೆಗೆ ಸಿದ್ಧತೆ ಮಾಡಿರುವುದು ಸ್ವಾಗತಾರ್ಹ ಎಂದರು.
ಇನ್ನೂ ರಾಜ್ಯ ಹಾಗೂ ಆಂದ್ರಪ್ರದೇಶದ ರಾಜ್ಯ ಸರ್ಕಾರದ ಮಾದರಿಯಲ್ಲಿ ಉಳಿದ ರಾಜ್ಯಗಳಲ್ಲಿಯೂ ಜನಗಣತಿ ನಡೆಸಿ ಘೋಷಣೆ ಮಾಡಬೇಕು. ಮಾತ್ರವಲ್ಲದೆ, ಇತ್ತಿಚೀನ ದಿನಗಳಲ್ಲಿ ಸರ್ಕಾರಿ ಸೌಲಭ್ಯ ಪಡೆಯಲು ಸುಳ್ಳು ಜಾತಿ ಪ್ರಮಾಣ ಪತ್ರ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ರಾಜ್ಯ ಸಮಿತಿ ಸದಸ್ಯ ಈರೇಶ್ ಹಿರೇಹಳ್ಳಿ, ಮೈಸೂರು ವಿಭಾಗೀಯ ಸಂಚಾಲಕ ಕೆ.ಸಿದ್ದರಾಜುದೊಡ್ಡಿಂದುವಾಡಿ, ವಿಭಾಗೀಯ ಸಂಘಟನಾ ಸಂಚಾಲಕ ಧರ್ಮೇಶ್ ಕುಪ್ಪೆ ಗೋಷ್ಠಿಯಲ್ಲಿದ್ದರು.