ಮಾಚಹಳ್ಳಿಯಲ್ಲಿ ಬಸವೇಶ್ವರರ ಪ್ರತಿಮೆ ಅನಾವರಣ
ಮಂಡ್ಯ:ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ರೈತರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ತಾಲ್ಲೂಕಿನ ಮಾಚಹಳ್ಳಿ ಗ್ರಾಮದಲ್ಲಿ ನಡೆದ ಬಸವೇಶ್ವರರ ಪ್ರತಿಮೆ ಅನಾವರಣ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಜೆಡಿಎಸ್ ಅಧಿಕಾರಕ್ಕೆ ಬಂದ ತಕ್ಷಣವೇ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು. ಬಡತನ, ನಿರುದ್ಯೋಗ,ಕೃಷಿ ಬಿಕ್ಕಟ್ಟಿನ ಸಮಸ್ಯೆಗಳಿಗೆ ಪರಿಹಾರ ಇಲ್ಲಿಯ ತನಕ ದೊರೆತಿಲ್ಲ.ಬಡವರು ಬಡವರಾಗಿಯೇ ಇದ್ದಾರೆ.ಇಂತಹ ಸಂದರ್ಭದಲ್ಲಿ ಬಸವೇಶ್ವರರ ತತ್ವಸಿದ್ಧಾಂತಗಳು ಮತ್ತು ಮಾರ್ಗದರ್ಶನಗಳು ರೈತರಿಗೆ ಆಸರೆಯಾಗಿವೆ ಎಂದರು.
ಬಸವೇಶ್ವರರ ತತ್ವಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾರಿಯಾಗಬೇಕು.12ನೇ ಶತಮಾನದಲ್ಲೇ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಜಗಜ್ಯೋತಿ ಬಸವೇಶ್ವರರು ಶ್ರಮಿಸಿದ್ದಾರೆ.ಅವರ ಆದರ್ಶಗಳನ್ನು ಪಾಲಿಸಿ,ಸಿದ್ಧಾಂತಗಳನ್ನು ಕಾರ್ಯರೂಪಕ್ಕೆ ತರಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಪ್ರಸ್ತುತ ಸಮಾಜದಲ್ಲಿ ಹತ್ತಾರು ರೀತಿಯ ತಾರತಮ್ಯಗಳು, ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಅವುಗಳಿಗೆ ಬಸವಣ್ಣನವರ ಮಾತುಗಳಿಂದಲೇ ಪರಿಹಾರ ಸಿಗಲಿವೆ.ಗ್ರಾಮೀಣ ಭಾಗದಲ್ಲಿ ಅವರ ಪ್ರತಿಮೆ ಸ್ಥಾಪನೆಯಾಗಿರುವುದು ಸಂತಸದ ವಿಚಾರ. ಅವರ ತತ್ವ ಸಿದ್ಧಾಂತಗಳನ್ನು ಗ್ರಾಮೀಣ ಭಾಗದ ಜನರು ಅಳವಡಿಸಿಕೊಳ್ಳಬೇಕು ಎಂದರು.
ಶಾಸಕ ಸಿ.ಎಸ್.ಪುಟ್ಟರಾಜು ಅವರು ಈ ಭಾಗದ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಕಾಯಕ ಮಾಡಿದ್ದಾರೆ. ರಸ್ತೆ ಸೇರಿದಂತೆ ಮೂಲಸೌಕರ್ಯ ಕಲ್ಪಿಸುತ್ತಿದ್ದಾರೆ.ಯಾವುದೇ ಕುಟುಂಬದಲ್ಲಿ ಏನೇ ಸಮಸ್ಯೆಗಳಿದ್ದರೂ ಅದಕ್ಕೆ ಸ್ಪಂದಿಸುವ ಪ್ರಮಾಣಿಕ ಜನಸೇವಕ. ಚುನಾವಣೆಯಲ್ಲಿ ನೀವು ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು. ಅವರಿಗೆ ಆಶೀರ್ವಾದ ಮಾಡಿದರೆ ಈ ಭಾಗದ ಸಂಪೂರ್ಣ ಅಭಿವೃದ್ಧಿಗೆ ನೆರವಾಗಲಿದೆ’ ಎಂದರು.
ನಡೆದಾಡುವ ದೇವರು ಲಿಂಗೈಕ್ಯ ಡಾ.ಶಿವವಕುಮಾರ ಸ್ವಾಮೀಜಿ ಅವರು ಧಾರ್ಮಿಕ ಕ್ಷೇತ್ರದಲ್ಲಿ ಬಹಳ ಎತ್ತರದ ಸ್ಥಾನಕ್ಕೆ ಬೆಳೆದವರು. ಪಾಂಡವಪುರ ಪಂಚರತ್ನ ರಥಯಾತ್ರೆ ವೇಳೆಯೂ ರುದ್ರಾಕ್ಷಿ ಹಾರವನ್ನು ಅಭಿಮಾನಿಗಳು ತಂದಾಗ,ಅದನ್ನು ನಾನು ಧರಿಸುವುದು ಅಪಚಾರ
ವಾಗುತ್ತದೆ ಎಂದು ಹೇಳಿದೆ. ನಂತರ ಅದನ್ನು ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಹಾಕಲಾಯಿತು. ಜೀವನದಲ್ಲಿ ಗುರು, ದೇವರನ್ನು ನಂಬಿ ಬದುಕಬೇಕು ಎಂದರು.
ಶಾಸಕ ಸಿ.ಎಸ್.ಪುಟ್ಟರಾಜು, ಟಿ.ನರಸೀಪುರ ಶಾಸಕ ಅಶ್ವಿನ್ಕುಮಾರ್, ಮನ್ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು,ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ ಹೆಚ್.ಬಿ.ಬೆಟ್ಟಸ್ವಾಮಿ,ಮುಖಂಡರಾದ ಸಿ.ಅಶೋಕ್,ಮಲ್ಲೇಶ್, ಪುರದಕೊಪ್ಪಲು ಶಂಕರೇಗೌಡ ಭಾಗವಹಿಸಿದ್ದರು.