ಮೈಸೂರು: ಟೆಂಡರ್ ಪದ್ದತಿ ರದ್ದು ಸೇರಿ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಬಿನಿ ಮತ್ತು ವರುಣ ಗುತ್ತಿಗೆದಾರರ ಸಂಘ ಪ್ರತಿಭಟನೆ ನಡೆಸಿತು.
ನಗರದ ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಕಚೇರಿ ಎದುರು ಪ್ರತಿಭಟಿಸಿದ ಗುತ್ತಿಗೆದಾರರು ಸರ್ಕಾರದ ವಿರುದ್ಧ ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹಲವು ವರ್ಷಗಳಿಂದಲೂ ಸರ್ಕಾರದ ಮಟ್ಟದಲ್ಲಿ ಹಾಗೂ ತಮ್ಮ ಇಲಾಖೆಗಳ ಮುಖಾಂತರ ಟೆಂಡರ್ ಕಾಮಗಾರಿಗಳ ಪ್ಯಾಕೇಜ್ ಪದ್ದತಿಯನ್ನು ಕೈಬಿಡಬೇಕೆಂದು ಹಲವಾರು ಬಾರಿ ಮನವಿ ಮಾಡಿಕೊಂಡಿದ್ದೇವೆ. ಇದರ ಬಗ್ಗೆ ನ್ಯಾಯಾಲಯದಲ್ಲೂ ಸಹ ಪ್ಯಾಕೇಜ್ ಪದ್ಧತಿಯ ವಿರುದ್ಧವಾಗಿ ಆದೇಶವಾಗಿರುತ್ತದೆ. ಇತ್ತೀಚೆಗೆ ತಮ್ಮ ಇಲಾಖಾ ಅನುದಾನವನ್ನು ಪ್ಯಾಕೇಜ್ ಪದ್ಧತಿ ಮಾಡುವುದರಿಂದ ದೊಡ್ಡ-ದೊಡ್ಡ ಕಂಪನಿ ಗುತ್ತಿಗೆದಾರರಿಗೆ ವ್ಯಾಪ್ತಿಯಲ್ಲಿ ನೀಡುವ ಅನುಕೂವಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಪ್ಯಾಕೇಜ್ ಪದ್ಧತಿಯಲ್ಲಿ ಟೆಂಡರ್ಗಳನ್ನು ಕರೆಯಬಾರದು ಎಂದು ಆಗ್ರಹಿಸಿದರು.
ಕಳೆದ ವರ್ಷದಲ್ಲಿ ಹಲವು ಟೆಂಡರ್ ಕಾಮಗಾರಿಗಳನ್ನು ಕರೆದಿದ್ದು, ಅದರಲ್ಲಿ ಗುತ್ತಿಗೆದಾರರಾದ ನಾವು ಭಾಗವಹಿಸಿದ್ದು ಇದುವರೆವಿಗೂ ಆ ಕಾಮಗಾರಿಗಳು ಅನುಮೋದನೆಗೊಂಡಿರುವುದಿಲ್ಲ ಇದರ ಬಗ್ಗೆ ಶೀಘ್ರವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ಟೆಂಡರ್ ಕಾಮಗಾರಿಗಳಿಗಾಗಿ ನಾವು ನೀಡುತ್ತಿರುವ ಭದ್ರತಾ ಠೇವಣಿಯನ್ನು ಬೇರೆ ಎಲ್ಲಾ ಇಲಾಖೆಗಳಲ್ಲಿ ಇರುವಂತೆ 1 ವರ್ಷದ ಅವಧಿಯಂತೆ ನಮ್ಮ ಈ ನೀರಾವರಿ ನಿಗಮದಲ್ಲಿ 3 ವರ್ಷ ಇರುವುದನ್ನು 1 ವರ್ಷಕ್ಕೆ ನಿಗಧಿಪಡಿಸುವಂತೆ ಆದೇಶಿಸಬೇಕು. ಇದುವರೆಗೂ ಇರುವ ಹಳೆಯ ಬಿಲ್ಲುಗಳಲ್ಲಿ 20 ಲಕ್ಷಕ್ಕಿಂತ ಕಡಿಮೆ ಇರುವ ಬಿಲ್ಲುಗಳನ್ನು ಪೂರ್ಣವಾಗಿ ಪಾವತಿಸಿ, ಅದಕ್ಕಿಂತ ಮೇಲ್ಪಟ್ಟ ಬಿಲ್ಲುಗಳನ್ನು ಸಿನಿಯಾರಿಟಿ ಪ್ರಕಾರ ಶೀಘ್ರವಾಗಿ ಪಾವತಿಸಬೇಕು. 50 ಲಕ್ಷದ ಕಾಮಗಾರಿಗಳಿಗೆ ಯಾವುದೇ ಕಂಡಿಷನ್ ಇಲ್ಲದೆ ಟೆಂಡರ್ ಕಾಮಗಾರಿಗಳಲ್ಲಿ ಭಾಗವಹಿಸಲು ಅನುಕೂಲ ಮಾಡಿ 1ಕೋಟಿ ಕಾಮಗಾರಿಗೆ ಇರುವ ಕಂಡಿಷನ್ಗಳನ್ನು ಸಡಿಲಗೊಳಿಸಿ ಟೆಂಡರ್ ಭಾಗವಹಿಸಲು ಅನುಕೂಲ ಮಾಡಿಕೊಡಬೇಕೆಂಬ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.