ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ವಿರುದ್ಧ ನಡೆದ 2ನೇ ಟೆಸ್ಟ್ ಪಂದ್ಯದ 4ನೇ ದಿನದಾಟದಲ್ಲಿ ಸ್ಫೋಟಕ ಅರ್ಧಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಕೇವಲ 35 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿದ ಹಿಟ್ಮ್ಯಾನ್ ಸತತ 30ನೇ ಪಂದ್ಯದಲ್ಲಿ ಎರಡಂಕಿ ರನ್ ದಾಖಲಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಸತತ 29 ಪಂದ್ಯಗಳಲ್ಲಿ ಎರಡಂಕಿ ರನ್ ಗಳಿಸಿದ್ದ ಶ್ರೀಲಂಕಾದ ದಿಗ್ಗಜ ಮಹೇಲಾ ಜಯವರ್ಧನೆ ಅವರ ದಾಖಲೆಯನ್ನ ಮುರಿದಿದ್ದಾರೆ. ಇಂಗ್ಲೆಂಡ್ ಬ್ಯಾಟ್ಸ್ಮ್ಯಾನ್ ಲೆನ್ ಹಟ್ಟನ್ ಮತ್ತು ವೆಸ್ಟ್ ಇಂಡೀಸ್ನ ರೋಹನ್ ಕನ್ಹೈ 25 ಬಾರಿ, ಎ.ಬಿ.ಡಿ ವಿಲಿಯರ್ಸ್ 24 ಬಾರಿ ಎರಡಂಕಿ ರನ್ ಕಲೆಹಾಕಿದ ಸಾಧನೆ ಮಾಡಿ ನಂತರದ ಸ್ಥಾನಗಳಲ್ಲಿದ್ದಾರೆ.
ಕಳೆದ 30 ಟೆಸ್ಟ್ ಇನ್ನಿಂಗ್ಸ್ಗಳಲ್ಲಿ ರೋಹಿತ್ ಶರ್ಮಾ ಕ್ರಮವಾಗಿ 12, 161, 26, 66, 25, 49, 34, 30, 36, 12, 83, 21, 19, 59, 11, 127, 29, 31, 24, 24, 24, 24, 24 5, 15, 43, 103, 80 ಬಾರಿಸಿದ್ದು, ವಿಂಡೀಸ್ ವಿರುದ್ಧ ಭಾನುವಾರ 4ನೇ ದಿನದಾಟದಲ್ಲಿ ಕೇವಲ 35 ಎಸೆತಗಳಲ್ಲಿ 50 ರನ್ ಚಚ್ಚಿದ್ದಾರೆ. ಅಲ್ಲದೇ ಒಟ್ಟು 44 ಎಸೆತಗಳನ್ನ ಎದುರಿಸಿ 57 ರನ್ ದಾಖಲಿಸಿದ್ದಾರೆ.
2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 255 ರನ್ಗಳಿಗೆ ವೆಸ್ಟ್ ಇಂಡೀಸ್ ಸರ್ವಪತನ ಕಂಡಿತು. ಬಳಿಕ 4ನೇ ದಿನದಲ್ಲಿ ತನ್ನ 2ನೇ ಇನ್ನಿಂಗ್ಸ್ ಸರದಿ ಆರಂಭಿಸಿದ ಟೀಂ ಇಂಡಿಯಾ ಪರವಾಗಿ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಸ್ಫೋಟಕ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್ ಜೊತೆಯಾಟಕ್ಕೆ 11.5 ಓವರ್ಗಳಲ್ಲಿ 95 ರನ್ ಬಾರಿಸಿತ್ತು. ಯಶಸ್ವಿ 30 ಎಸೆತಗಳಲ್ಲಿ 35 ರನ್ ಗಳಿಸಿದರೆ, ರೋಹಿತ್ ಶರ್ಮಾ 44 ಎಸೆತಗಳಲ್ಲಿ 57 ರನ್ ಗಳಿಸಿದರು. ನಂತರ 4ನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿಸ ಇಶಾನ್ ಕಿಶನ್ ಸಹ 34 ಎಸೆತಗಳಲ್ಲಿ ಸ್ಫೋಟಕ 52 ರನ್ ಬಾರಿಸುವ ಮೂಲಕ 2ನೇ ಇನ್ನಿಂಗ್ಸ್ನ 4ನೇ ದಿನದ ಅಂತ್ಯಕ್ಕೆ 181 ರನ್ ಗಳಿಸಿ ವಿಂಡೀಸ್ಗೆ 365 ರನ್ಗಳ ಗುರಿ ನೀಡಿತು.