ಚಾಮರಾಜನಗರ:- ಯಡನವಹಳ್ಳಿ ಬಳಿಕ ಗರಗನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಲುಷಿತ ಆಹಾರ ಸೇವಿಸಿ ಏಳು ವಿದ್ಯಾರ್ಥಿಗಳು ಅಸ್ವಸ್ಥತರಾದ ಘಟನೆ ನಡೆದಿದೆ. ಇನ್ನು ಅಸ್ವಸ್ಥತರಾದ ವಿದ್ಯಾರ್ಥಿಗಳನ್ನು ನಗರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಯಡನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ಯಾಂಪಸ್ನಲ್ಲಿರುವ ಗರಗನಹಳ್ಳಿ ವಸತಿ ಶಾಲೆಯಲ್ಲಿ ಬುಧವಾರ ಬೆಳಗ್ಗೆ ತರಕಾರಿ ಬಾತ್ ತಿಂಡಿಯನ್ನು ಮಕ್ಕಳಿಗೆ ನೀಡಲಾಗಿತ್ತು. ತಿಂಡಿ ಹೆಚ್ಚು ಖಾರವಾದ ಹಿನ್ನೆಲೆ ವರ್ಣಿತ(13), ಹರ್ಷಿತಾ(13), ಪ್ರಿಯ(13), ರಚನಾ(15), ಸಂಜನಾ(15), ಸಂಗೀತ (13), ಪ್ರಜ್ವಲ್(15) ಎಂಬ ಏಳು ವಿದ್ಯಾರ್ಥಿಗಳಿಗೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಇವರಿಗೆ ಉರಿ, ವಾಂತಿ ಕಾಣಿಸಿಕೊಂಡಿದೆ.
ನಂತರ ಅಸ್ವಸ್ಥತರನ್ನು ಕೂಡಲೇ ಸಮೀಪದ ಹೊರೆಯಾಲ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಇದರಲ್ಲಿ ಪ್ರಜ್ವಲ್ ಎಂಬ ವಿದ್ಯಾರ್ಥಿಗೆ ಹೊಟ್ಟೆ ನೋವು ಹೆಚ್ಚು ಕಾಣಿಸಿಕೊಂಡ ಹಿನ್ನಲೆ ಆತನನ್ನು ಬೇಗೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇನ್ನು ಹೊರೆಯಾಲ ಆಸ್ಪತ್ರೆ ವೈದ್ಯರಾದ ಡಾ.ದೀಪಕ್ ಅಸ್ವಸ್ಥ ವಿದ್ಯಾರ್ಥಿಗಳಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ವಸತಿ ಶಾಲೆ ಪ್ರಾಂಶುಪಾಲ ಲೋಕೇಶ್ ಹಾಗೂ ಬೇಗೂರು ಠಾಣೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ಹಾಗೆಯೇ ಎಲ್ಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಹಾಗೆಯೇ ಇತ್ತೀಚೆಗಷ್ಟೇ ಚಿಕನ್ ಊಟ ಸೇವಿಸಿದ್ದ ಮಕ್ಕಳಿಗೆ ವಾಂತಿ-ಬೇಧಿಯಾಗಿ ಅಸ್ವಸ್ಥಗೊಂಡ ಘಟನೆ ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆದಿತ್ತು.
ಒಟ್ಟು 30 ವಿದ್ಯಾರ್ಥಿಗಳಿಗೆ ವಾಂತಿ-ಬೇಧಿಯಾಗಿದ್ದು, ಈ ಪೈಕಿ ತೀವ್ರ ಅಸ್ವಸ್ಥಗೊಂಡಿದ್ದ 15 ಮಂದಿಗೆ ಬೇಗೂರು ಆಸ್ಪತ್ರೆಯಲ್ಲಿ ಡ್ರಿಪ್ ಹಾಕಿ ಚಿಕಿತ್ಸೆ ಕೊಡಿಸಲಾಗಿತ್ತು. ಕಳೆದ ಭಾನುವಾರ ರಾತ್ರಿ ಚಿಕನ್ ಊಟವನ್ನು ಮಾಡಲಾಗಿತ್ತು. ಅದನ್ನು ತಿಂದ ಬಳಿಕ ವಾಂತಿ-ಬೇಧಿ ಶುರುವಾಗಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು. ನಂತರ ಶಿಕ್ಷಣ ಇಲಾಖೆ ಅಧಿಕಾರಿಗಳು, ಪೊಲೀಸರು ಆಸ್ಪತ್ರೆಗೆ ಭೇಟಿ ಪರಿಶೀಲನೆ ನಡೆಸಿದ್ದರು.