ಮೈಸೂರು: ಕೆಆರ್ಎಸ್ ಸುತ್ತಮುತ್ತ ಗಣಿಗಾರಿಕೆ ನಿಷೇಧಿಸಲಾಗಿದೆ. ಇದಕ್ಕಾಗಿ ರಾಜ್ಯ ರೈತ ಸಂಘ ಸತತ ಹೋರಾಟ ನಡೆಸಿತ್ತು. ಈಗ ನ್ಯಾಯಾಲಯ ಅದೇಶಿಸಿದೆ ಎಂಬ ಕಾರಣ ನೀಡಿ ಇಲ್ಲಿ ಟ್ರಯಲ್ ಬ್ಲಾಸ್ಟ್ ಮಾಡಲು ಅಧಿಕಾರಿ ವರ್ಗ ಸಿದ್ಧತೆ ನಡೆಸಿದ್ದು, ಇದಕ್ಕೆ ರೈತ ಸಂಘ ಅವಕಾಶ ಕೊಡುವುದಿಲ್ಲ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೇ ವೇಳೆ ಹೈಕೋರ್ಟ್ ಕೂಡ ಗಣಿಗಾರಿಕೆಗಿಂತ ಜಲಾಶಯ ಮುಖ್ಯ ಎಂದು ಹೇಳಿದೆ. ಆದರೆ ವೈಜ್ಞಾನಿಕ ಕಾರಣಕ್ಕಾಗಿ ಪ್ರಾಯೋಗಿಕವಾಗಿ ಸ್ಪೋಟ ನಡೆಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ರೀತಿಯ ಪ್ರಯತ್ನಗಳಿಗೆ ರೈತರು ವಿರೋಧ ವ್ಯಕ್ತಪಡಿಸಿ ವಾಪಸು ಕಳುಹಿಸಿದ್ದರು. ಈಗಲೂ ಮತ್ತೆ ಇದಕ್ಕಾಗಿ ಬರುವ ಸೂಚನೆಯಿದ್ದು, ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಟ್ರಯಲ್ ಬ್ಲಾಸ್್ಟ ಕಂಪನದಿಂದ ಈಗಲ್ಲದಿದ್ದರೂ ಮುಂದೆ ಯಾವಾಗಲಾದರೂ ಅಪಾಯ ಒದಗಬಹುದಾಗಿದೆ. ಆದ್ದರಿಂದ ಸರ್ಕಾರ ಜನರ ಅಭಿಪ್ರಾಯವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು. ಇನ್ನು ಟ್ರಯಲ್ ಬ್ಲಾಸ್್ಟ ನಡೆಸಬೇಕೆಂಬ ಸರ್ಕಾರದ ನಿರ್ಧಾರದ ಹಿಂದೆ ತಮಗೆ ಅನುಮಾನವಿದೆ. ವ್ಯತಿರಿಕ್ತ ವರದಿ ಪಡೆದು ಗಣಿಗಾರಿಕೆಗೆ ಅವಕಾಶ ದೊರಕಿಸುವ ಹುನ್ನಾರ ಇದೆ ಎಂಬ ಶಂಕೆ ಕಾಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲು ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಸರ್ಕಾರಗಳ ಜನವಿರೋಧಿ ನೀತಿ ವಿರುದ್ಧ ಚಳವಳಿ ಗಟ್ಟಿಗೊಳಿಸಲು ಇದೇ ಜು. 10 ರಂದು ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಕರೆದಿರುವ ಸಭೆಯಲ್ಲಿ ತಾವು ಭಾಗವಹಿಸಿತ್ತಿದ್ದೇವೆ. ಇನ್ನು, ರಾಜ್ಯದಲ್ಲಿ ರೈತ ಸಂಘಟನೆ ಬಲಗೊಳಿಸಲು ಕುಟುಂಬಕೊಬ್ಬ ಸದಸ್ಯ, ಊರಿಗೊಬ್ಬ ಕಾರ್ಯಕರ್ತ ಎಂಬ ಅಭಿಯಾನ ಆರಂಭಿಸಿ, ಮುಂದಿನ ಎರಡು ವರ್ಷದಲ್ಲಿ ಸುಮಾರು ಎರಡು ಕೋಟಿ ಸದಸ್ಯರನ್ನು ಹೊಂದುವ ಗುರಿ ಇದೆ. ಹಾಗೆಯೇ ಜುಲೈ ತಿಂಗಳ 21 ರಂದು ಬೆಳಗಾವಿ ಜಿಲ್ಲೆಯ ಯರಗಟ್ಟಿಯಲ್ಲಿ 45 ನೇ ಹುತಾತ್ಮರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದ್ದು, ಈ ಕುರಿತು ನಡೆಯುವ ಸಮಾವೇಶದಲ್ಲಿ ಚಳುವಳಿಯನ್ನು ತಾತ್ವಿಕ ನೆಲೆಗಟ್ಟು, ರಾಜಕೀಯ ಸ್ಪಷ್ಟತೆ, ವೈಚಾರಿಕ ದೃಷ್ಠಿಕೋನದಿಂದ ಸಂಘಟನೆಯನ್ನು ವಿಸ್ತರಿಸಲು ಬಲಿಷ್ಟ ಕಾರ್ಯಕರ್ತರ ತಂಡವನ್ನು ರೂಪಿಸಲು ಸಂಕಲ್ಪ ಮಾಡಲಾಗಿದೆ ಎಂದರು.
ಹೊಸಕೋಟೆ ಬಸವರಾಜು, ಹೊಸೂರು ಕುಮಾರ್, ನಾಗನಹಳ್ಳಿ ವಿಜೇಂದ್ರ, ಪ್ರಸನ್ನ ಎನ್. ಗೌಡ ಹಾಜರಿದ್ದರು.