ಮೈಸೂರು: ನಗರದ ಜೆ.ಕೆ.ಮೈದಾನದಲ್ಲಿ ಸ್ವರಾಂಜಲಿ ತಂಡದ ವತಿಯಿಂದ ಡಿ.17 ರ ಭಾನುವಾರ ಸಂಜೆ 5 ಗಂಟೆಗೆ ಹಿರಿಯ ನಾಗರೀಕರಿಗಾಗಿ “ಸಂಧ್ಯಾ ಸಂಭ್ರಮ” ಕಾರ್ಯಕ್ರಮ ಎರ್ಪಡಿಸಲಾಗಿದೆ.
ಈ ಕುರಿತು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸ್ವರಾಂಜಲಿ ಸ್ವರ ಸಂಭ್ರಮ ಆಯೋಜಕಿ ಕಾರ್ಯದರ್ಶಿ ರೂಪಶ್ರೀ ಶೇಷಾದ್ರಿ, ಮೈಸೂರಿನ ‘ಸ್ವರಾಂಜಲಿ’ ಎಂಬ ತಂಡದ ಸದಸ್ಯರಾದ ನಾವುಗಳು ಹಿರಿಯ ಜೀವಿಗಳಿಗೆ ಮಾನಸಿಕ ಧೈರ್ಯ ಹಾಗೂ ದೈಹಿಕ ಆರೋಗ್ಯ ಬಲಪಡಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಕಳೆದ ಎರಡು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದೇವೆ. ಈ ವರ್ಷ ಡಿ.17 ರಂದು ‘ಸಂಧ್ಯಾ ಸಂಭ್ರಮ’ ಶೀರ್ಷಿಕೆಯಡಿ ನಗರದ ಜೆ.ಕೆ.ಮೈದಾನದಲ್ಲಿರುವ ಎಂಎಂಸಿ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತೇವೆ ಎಂದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಚಂದನ ವಾಹಿನಿಯ ‘ಥಟ್ ಅಂತ ಹೇಳಿ’ ಖ್ಯಾತಿಯ ಡಾ.ನಾ.ಸೋಮೇಶ್ವರ್ ಹಾಗೂ ವಾಗ್ನಿ ಪ್ರೊ.ಕೃಷ್ಣೇಗೌಡ ಆಗಮಿಸಲಿದ್ದಾರೆ. ಈಗಾಗಲೇ ಹಿರಿಯ ನಾಗರೀಕರಿಗೆ ಡಿ.9ರಂದು ಗಾಯನ ಸ್ಪರ್ಧೆ, ಡಿ.10ರಂದು ರಂಗೋಲಿ ಸ್ಪರ್ಧೆ ಹಾಗೂ ರಸಪ್ರಶ್ನೆ ( ಲಿಖಿತ ) ಸ್ಪರ್ಧೆಯನ್ನು ನಡೆಸಲಾಗಿರುತ್ತದೆ. ಡಿ.16ರ ಶನಿವಾರ ಮ.2 ಫ್ಯಾಷನ್ ಶೋ ಸ್ಪರ್ಧೆ(ನೋಡಿ ಸ್ವಾಮಿ, ನಾವಿರೋದೆ ಹೀಗೆ ) ನಡೆಯಲಿದ್ದು, ಈ ಹಿಂದೆ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿದಂತೆ ಈ ಸ್ಪರ್ಧೆಯಲ್ಲೂ ಪಾಲ್ಗೊಳ್ಳಬಹುದಾಗಿರುತ್ತದೆ ಎಂದರು.
ಡಿ.17 ರ ಬೆಳಿಗ್ಗೆ 10 ಕ್ಕೆ ರಸಪ್ರಶ್ನೆ, ಮೌಖಿಕ ಸ್ಪರ್ದೆ, ಅಂದು ಸಂ.7 ಕ್ಕೆ ಬಹುಮಾನ ವಿತರಣೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ.9916830019, 9663977949 ಸಂಪರ್ಕಿಸಬಹುದಾಗಿದೆ ಎಂದರು. ಸಂಸ್ಥಾಪಕ ಡಾ.ರಘುವೀರ್, ಡಾ.ಲಾವಣ್ಯ, ಸದಸ್ಯ ಆನಂದ ಮಾಧವ ಇನ್ನಿತರರು ಉಪಸ್ಥಿತರಿದ್ದರು.