ಮೈಸೂರು: ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ, ಕರ್ನಾಟಕ ರೈತ ಕಲ್ಯಾಣ ಸಂಘದ ವತಿಯಿಂದ ರೈತ ಕಲ್ಯಾಣೋತ್ಸವ ಶೀರ್ಷಿಕೆಯಡಿ ಪ್ರಗತಿಪರ ಕೃಷಿ ಸಾಧಕರಿಗೆ ಕೃಷಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಗೌರವಾಧ್ಯಕ್ಷ ಹೇಮಂತ್ ಕುಮಾರ್ ತಿಳಿಸಿದರು.
ಗುರುವಾರ ಬೆಳಗ್ಗೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.23 ಶನಿವಾರ ನಂಜನಗೂಡು ತಾಲೂಕಿನ ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾಧಕ ರೈತರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗುವುದು ಎಂದರು.
ಇದೇ ವೇಳೆ ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ ಆಯೋಜಿಸಲಾಗಿದ್ದು, ಅಂದು ಬೆ.8 ಗಂಟೆಯಿಂದ 12 ಗಂಟೆಯವರೆಗೆ ತಪಾಸಣೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಮೈಸೂರಿನ ರಾಜೀವ್ ನಗರದ ನವಮಿ ಡಯಾಗೋಸ್ಟಿಕ್ ವತಿಯಿಂದ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಕೂಡ ನಡೆಯಲಿದೆ ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ರಾಜ್ಯಾಧ್ಯಕ್ಷ ಭೂಮಿಪುತ್ರ ಸಿ.ಚಂದನ್ ಗೌಡ ಅವರು ವಹಿಸಲಿದ್ದು, ಶಾಸಕರಾದ ದರ್ಶನ್ ಧ್ರುವನಾರಾಯಣ್, ಹರೀಶ್ ಗೌಡ,ಸಿ.ಎನ್. ಮಂಜೇಗೌಡ, ಮಾಜಿ ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಕಳಲೆ ಕೇಶವಮೂರ್ತಿ, ಮುಖಂಡರಾದ ನಂಜುಂಡಸ್ವಾಮಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ಯುವ ಮುಖಂಡ ಸಂದೇಶ್ ಸ್ಯಾಂಡಿ ಇನ್ನಿತರರು ಕಾರ್ಯಕ್ರಮದಲ್ಲಿರುವರು. ಇದೇ ವೇಳೆ ಉಚಿತ
ಕಣ್ಣಿನ ತಪಾಸಣೆ ಹಾಗೂ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆಗೆ ಅವಕಾಶ ಮಾಡಿಕೊಡಲಾಗಿದೆ ಎಂದರು.
ನಂಜನಗೂಡು ತಾಲೂಕಿನ ಜನತೆ ಇದು ಸದುಪಯೋಗ ಪಡೆದುಕೊಳ್ಳಬೇಕೆಂದು ಇದೇ ವೇಳೆ ಅವರು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಹರೀಶ್ ಪಿ.ಗೌಡ, ಗಿರೀಶ್, ದೀಪಕ್ ಉಪಸ್ಥಿತರಿದ್ದರು.