ತುಮಕೂರು: ಮಗನೇ ತನ್ನ ತಂದೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಆಲಪನಹಳ್ಳಿ ಗ್ರಾಮದಲ್ಲಿ ನಡೆದಿದೆ. ವೆಂಕಟಪ್ಪ (75) ಮೃತ ದುರ್ದೈವಿ.ಸಿದ್ದಪ್ಪ (45) ತಂದೆಯನ್ನ ಕೊಲೆಗೈದ ಪಾಪಿ ಮಗ. ಕೊಲೆಯಾದ ವೆಂಕಟ್ಟಪ್ಪ ಮೂರೂವರೆ ಎಕರೆ ಆಸ್ತಿ ಹೊಂದಿದ್ದನು. ಇತ್ತೀಚೆಗೆ ಜಮೀನು ಮಾರಾಟ ಮಾಡಿದ್ದನು.
ಮಾರಾಟ ಮಾಡಿದ್ದ ಜಮೀನಿನ 25 ಲಕ್ಷ ಹಣವನ್ನ ವೆಂಕಟ್ಟಪ್ಪ ಮಗಳಿಗೆ ಕೊಟ್ಟಿದ್ದನು. ಜೊತೆಗೆ ಜಮೀನನ್ನು ಸಹ ಮಗಳ ಹೆಸರಿಗೆ ಬರೆದುಕೊಟ್ಟಿದ್ದ ಎನ್ನಲಾಗಿದೆ. ಇದೇ ವಿಚಾರಕ್ಕೆ ತಂದೆ ಮಗನ ಜೊತೆ ಹಲವು ಬಾರಿ ಗಲಾಟೆ ನಡೆದಿತ್ತು. ಗ್ರಾಮದ ಹಿರಿಯರ ಸಮ್ಮುಖದಲ್ಲಿ ಹಲವು ಬಾರಿ ನ್ಯಾಯ ಪಂಚಾಯತಿ ಕೂಡಾ ಮಾಡಲಾಗಿತ್ತು.ನ್ಯಾಯ ಪಂಚಾಯತಿ ಮಾಡಿದ್ರು ಸಹ ಮಗನಿಗೆ ಆಸ್ತಿ, ಹಣ ನೀಡಲು ತಂದೆ ವೆಂಕಟಪ್ಪ ಹಿಂದೇಟು ಹಾಕಿದ್ದ ಎನ್ನಲಾಗುತ್ತಿದೆ. ಇದರಿಂದ ಬೇಸತ್ತು ತಂದೆಯನ್ನ ಮಗ ಸಿದ್ದಪ್ಪ ಕೊಲೆಗೈದಿದ್ದಾನೆ. ತಲೆಗೆ ಮಚ್ಚಿನಿಂದ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ.
ಮಚ್ಚೇಟಿಗೆ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ವೆಂಕಟಪ್ಪ ಸಾವನ್ನಪ್ಪಿದ್ದಾನೆ. ಅತ್ತ ತಂದೆಯನ್ನ ಕೊಲೆಗೈದು ಮಗ ಸಿದ್ದಪ್ಪ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಎಎಸ್ಪಿ ಮರಿಯಪ್ಪ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾಗಿರುವ ಮಗ ಸಿದ್ದಪ್ಪನಿಗಾಗಿ ಪೊಲೀಸರಿಂದ ಹುಡುಕಾಟ ಮುಂದುವರಿದಿದೆ.