ದಸರಾ ಸಂಪೂರ್ಣ ಮಾಹಿತಿ ಕೊಟ್ಟ ದಸರಾ ಉಪಸಮಿತಿ
ಮೈಸೂರು: ಅಕ್ಟೋಬರ್ 22 ಮತ್ತು 23 ರಂದು ದಸರಾ ಅಂಗವಾಗಿ ಏರ್ ಶೋ ನಡೆಯಲಿದೆ ಎಂದು ದಸರಾ ವಿಶೇಷಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.
ನಗರದ ಅರಮನೆ ಆಡಳಿತ ಮಂಡಳಿ ಸಭಾಂಗಣದಲ್ಲಿ ವಿವಿಧ ಉಪಸಮಿತಿಯ ವಿಶೇಷಾಧಿಕಾರಿಗಳೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಕ್ಟೋಬರ್ 22ರಂದು ಏರ್ ಶೋ ಪ್ರಾಯೋಗಿಕವಾಗಿ ನಡೆಯಲಿದ್ದು, ಅಕ್ಟೋಬರ್ 23ರಂದು ಪೂರ್ಣಪ್ರಮಾಣದ ಏರ್ ಶೋ ಆಯೋಜನೆ ಆಗಲಿದೆ ಎಂದು ಹೇಳಿದರು.
ರಿಹರ್ಸಲ್ ಮತ್ತು ಪೂರ್ಣ ಪ್ರಮಾಣದ ಏರ್ ಶೋ ಎರಡು ಕೂಡ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆಯಲಿವೆ.
ಸಂ.4 ಗಂಟೆಗೆ ಏರ್ ಶೋ ಆರಂಭವಾಗಲಿದೆ. ಒಟ್ಟು 45 ನಿಮಿಷ ಏರ್ ಶೋ ನಡೆಯಲಿದೆ. ಈ ಬಾರಿ ಬರದ ಪರಿಣಾಮ ದಸರಾ ಮಹೋತ್ಸವವನ್ನು ಅದ್ದೂರಿಯೂ ಅಲ್ಲದೇ, ಸರಳವೂ ಅಲ್ಲದೇ ಸಾಂಪ್ರದಾಯಿಕವಾಗಿ ಆಚರಿಸಲು ಸರ್ಕಾರ ಸೂಚನೆ ನೀಡಿದ್ದಾರೆ. ಸರ್ಕಾರದ ಸೂಚನೆ ಮೇರೆಗೆ ಮಾರ್ಗಸೂಚಿಯನ್ವಯ ಸಾಂಪ್ರದಾಯಿಕ ದಸರಾವನ್ನು ವ್ಯವಸ್ಥಿತವಾಗಿ ಆಚರಿಸಲು ಸಿದ್ದತೆ ಮಾಡಲಾಗುತ್ತಿದೆ. ಮೈಸೂರಿನ ಪ್ರವಾಸೋದ್ಯಮದ ಹಿತದೃಷ್ಟಿಯಿಂದ ದಸರಾಗೆ ಜನರನ್ನು ಆಕರ್ಷಿಸಲು ಕ್ರಮ ಕೈಗೊಳ್ಳಲಾಗುವುದು. ಸರಳ ದಸರಾ ಎಂದು ಚರ್ಚೆ ನಡೆದರೆ ಪ್ರವಾಸಿಗರು ಬರಲು ಹಿಂದೇಟು ಹಾಕುತ್ತಾರೆ. ಹಾಗಾಗಿ ಸರಳ ದಸರಾ ಚರ್ಚೆ ಅನಗತ್ಯವೆಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಕುರಿತು ಮೈಸೂರು ಜಿಲ್ಲಾ ಪಂಚಾಯತಿಯ ಕಾರ್ಯನಿರ್ವಹಣಾಧಿಕಾರಿ ಗಾಯತ್ರಿ ಮಾಹಿತಿ ನೀಡಿ, ದಸರಾ ಮಹೋತ್ಸವದ ಅಂಗವಾಗಿ ಅರಮನೆ ಆವರಣ ಸೇರಿದಂತೆ ವಿವಿಧೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ.
ಅರಮನೆ ಆವರಣದ ವೇದಿಕೆಯ ಜೊತೆಗೆ, ಜಗನ್ಮೋಹನ ಅರಮನೆ, ಕಲಾಮಂದಿರ, ಗಾನಭಾರತಿ ವೀಣೆಶೇಷಣ್ಣ ಭವನ, ನಾದಬ್ರಹ್ಮ ಸಂಗೀತ ಸಭಾ, ಚಿಕ್ಕಗಡಿಯಾರ ವೃತ್ತ, ನಂಜನಗೂಡು ಶ್ರೀಕಂಠೇಶ್ವರ ದೇಗುಲದ ಆವರಣ, ರಮಾಗೋವಿಂದ ರಂಗಮಂದಿರ, ಪುರಭವನ, ಕಿರುರಂಗಮಂದಿರ, ನಟನ ರಂಗಮಂದಿರ ಮೊದಲಾದ ಸ್ಥಳಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಅನಾವರಣ ಮಾಡಲಿದೆ ಎಂದು ಹೇಳಿದರು.