ಹುಣಸೂರು: ವಿಶ್ವ ವಿಖ್ಯಾತ 413 ನೇ ಮೈಸೂರು ದಸರಾಗೆ ನಾಂದಿಯಾಡುವ ಗಜಪಯಣಕ್ಕೆ ನಾಗರಹೊಳೆ ಉದ್ಯಾನದ ಹೆಬ್ಬಾಗಿಲು ವೀರನಹೊಸಹಳ್ಳಿ ಬಳಿ ಇಂದು ಅಲಂಕೃತ ಗಜಗಳಿಗೆ ಪುಷ್ಪರ್ಚನೆ ಮಾಡುವ ಮೂಲಕ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಚಾಲನೆ ನೀಡಿದರು.
9.45 ರಿಂದ 10-15 ರ ನಡುವೆ ಸಲುವ ತುಲಾ ಶುಭ ಲಗ್ನದಲ್ಲಿ ಸಂಪ್ರದಾಯದಂತೆ ಮೈಸೂರು ಅರಮನೆ ಪುರೋಹಿತರಾದ ಪ್ರಹಲ್ಲಾದರಾವ್ ತಂಡ ವೀರನಹೊಸಹಳ್ಳಿ ಗೇಟ್ ಬಳಿಯ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ನೆರೆವೇರಿಸಿ ಆನೆಗಳಿಗೆ ಬೀಳ್ಕೊಟರು.
ಅರಣ್ಯ ಇಲಾಖೆ ಈ ಬಾರಿಯ ಗಜಪಯಣವನ್ನು ವಿಜೃಂಭಿಸಲು ವಿಭಿನ್ನ, ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಜಂಗಲ್ ಇನ್ ರೆಸಾರ್ಟ್ ಬಳಿ ಈ ಬಾರಿ ಗಣ್ಯರು ಸೇರಿದಂತೆ ಸುಮಾರು ಎರಡು ಸಾವಿರ ಮಂದಿಗೆ ಆಸನ ವ್ಯವಸ್ಥೆ ಕಲ್ಪಿಸಿದ್ದು, ಮಳೆ ನೀರು ರಕ್ಷಕ ಜರ್ಮನ್ ಟೆಂಟ್ನ ಬೃಹತ್ ಪೆಂಡಾಲ್ ಹಾಕಲಾಗಿದೆ. ರಸ್ತೆಯ ಇಕ್ಕೆಲಗಳಲ್ಲೂ ಗಿಡಗುಂಟೆಗಳನ್ನು ತೆರವುಗೊಳಿಸಲಾಗಿದೆ. ಸುಮಾರು ಮೂರು ಸಾವಿರ ಮಂದಿಗೆ ಹಾಗೂ ಗಣ್ಯರಿಗೆ ನಾಗಾಪುರ ಆಶ್ರಮ ಶಾಲೆಯಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಅರಣ್ಯ ಸಚಿವ ಈಶ್ವರ್ ಕಂಡ್ರೆ ಸೇರಿದಂತೆ ಪಶುಸಂಗೋಪನಾ ಇಲಾಖೆ ಸಚಿವ ಕೆ.ವೆಂಕಟೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ತಂಗಡಗಿ, ಸಂಸದ ಪ್ರತಾಪಸಿಂಹ, ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ರಾಜೇಂದ್ರ, ಪೊಲೀಸ್ ಎಸ್.ಪಿ. ಸಿಮಾ, ದೊಡ್ಡಹೆಜ್ಜೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಅಂಬಿಕಾಲೋಕೇಶ್ ಸೇರಿದಂತೆ ಜಿಲ್ಲೆಯ ಶಾಸಕರು ಹಾಗೂ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಭಾಗವಹಿಸಿದರು.
ಕಲಾ ತಂಡಗಳ ವೈಭವ
ಗಜಪಡೆಯ ಮುಂದೆ ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ ಕುಣಿತ, ಪೂಜಾ ಕುಣಿತ, ಪಟಕುಣಿತ, ಗೊರವರ ಕುಣಿತ, ಗುರುಪುರ ಟಿಬೇಟಿಯನ್ ಶಾಲಾ ಮಕ್ಕಳ ನೃತ್ಯ, ಆದಿವಾಸಿ ಮಕ್ಕಳ ನೃತ್ಯ ಸೇರಿದಂತೆ ಹತ್ತಕ್ಕೂ ಹೆಚ್ಚು ಕಲಾ ತಂಡಗಳು ಪ್ರದರ್ಶನ ನೀಡಿ ಜನರನ್ನು ಮನರಂಜನೆಗೊಳಿಸಿದವು.
ಮೊದಲ ತಂಡದಲ್ಲಿ 9 ಆನೆಗಳು
ದಸರಾ ಗಜಪಯಣದ ಮೊದಲ ತಂಡದಲ್ಲಿ ಅಂಬಾರಿ ಹೊರುವ ಕ್ಯಾಪ್ಟನ್ ಅಭಿಮನ್ಯು ಹಾಗೂ ಎರಡು ಹೆಣ್ಣಾನೆಗಳು ಸೇರಿದಂತೆ ಒಟ್ಟು 9 ಆನೆಗಳ ತಂಡ ಪಯಣ ಬೆಳೆಸಿದವು.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮತ್ತಿಗೋಡು ಆನೆ ಶಿಬಿರದ ಅಭಿಮನ್ಯು, ಭೀಮ, ಮಹೇಂದ್ರ, ಬಳ್ಳೆ ಆನೆ ಶಿಬಿರದ ಅರ್ಜುನ, ಭೀಮನಕಟ್ಟೆ ಆನೆ ಶಿಬಿರದ ವರಲಕ್ಷ್ಮಿ, ಕೊಡಗಿನ ಮಡಿಕೇರಿ ವಿಭಾಗದ ದುಬಾರೆ ಶಿಬಿರದ ಧನಂಜಯ, ಗೋಪಿ, ಹೊಸ ಆನೆ ಕಂಜನ್ ಹಾಗೂ ಹೆಣ್ಣಾನೆ ವಿಜಯ ಮೈಸೂರಿಗೆ ತೆರಳಿದವು.
ಎರಡನೇ ತಂಡದಲ್ಲಿ ತೆರಳುವ ಐದು ಆನೆಗಳ ಮಾಹಿತಿ ಸೆ.10 ರ ನಂತರ ಲಭ್ಯವಾಗಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.