ಬೆಂಗಳೂರು: ಇಸ್ರೊ ವಿಜ್ಞಾನಿಗಳನ್ನು ಅಭಿನಂದಿಸಲು ದಕ್ಷಿಣ ಆಫ್ರಿಕಾ, ಗ್ರೀಸ್ ದೇಶಗಳ ಪ್ರವಾಸ ಮುಗಿಸಿ ಇಂದು ಶನಿವಾರ ಬೆಳಗ್ಗೆಯೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದಿದ್ದರು. ಅವರನ್ನು ಸ್ವಾಗತಿಸಲು ಶಿಷ್ಠಾಚಾರ ಪ್ರಕಾರವಾಗಿ ಮುಖ್ಯಮಂತ್ರಿ, ಇಲ್ಲದಿದ್ದರೆ ಉಪ ಮುಖ್ಯಮಂತ್ರಿಗಳು, ರಾಜ್ಯಪಾಲರು ಸಾಮಾನ್ಯವಾಗಿ ಹೋಗುತ್ತಾರೆ.
ಆದರೆ ಇಂದು ಹೆಚ್ ಎಎಲ್ ಏರ್ ಪೋರ್ಟ್ ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಸೇರಿದಂತೆ ಇತರ ಪ್ರಮುಖ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಮಾತ್ರ ಹೋಗಿದ್ದರು. ಇದಕ್ಕೆ ಬಿಜೆಪಿ ನಾಯಕರು ಆಕ್ರೋಶಗೊಂಡಿದ್ದಾರೆ. ಸರ್ಕಾರ ಶಿಷ್ಟಾಚಾರ ಪಾಲನೆ ಉಲ್ಲಂಘಿಸಿದೆ ಎಂದು ಮಾಜಿ ಸಚಿವ ಆರ್ ಅಶೋಕ್ ಆರೋಪಿಸಿದ್ದರು.
ಅದಕ್ಕೆ ಬೆಂಗಳೂರಿನಲ್ಲಿAದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಆರ್ ಅಶೋಕ್ ಗೆ ಸ್ವಲ್ಪ ಪ್ರಾಬ್ಲಂ ಇದೆ. ಆರ್ ಅಶೋಕ್ ನ ಕೇಂದ್ರ ಸರ್ಕಾರ, ಪ್ರಧಾನಿ ಕಚೇರಿ ಎಷ್ಟು ದೂರ ಇಟ್ಟಿದ್ದಾರೆ ಎನ್ನುವುದಕ್ಕೆ ಇವೆಲ್ಲ ಮಾತುಗಳು ಸಾಕ್ಷಿ. ನಮಗೆ ಸಮಯ ಪ್ರಜ್ಞೆ, ರಾಜಕೀಯ ಪ್ರಜ್ಞೆ, ಪ್ರೊಟೊಕಾಲ್, ಯಾರಿಗೆ ಏನು ಯಾವ ಸಮಯದಲ್ಲಿ ಗೌರವ ನೀಡಬೇಕೆಂದು ಬಿಜೆಪಿಯವರಿಗಿಂತ ಜಾಸ್ತಿ ಚೆನ್ನಾಗಿ ಗೊತ್ತಿದೆ.
ಬೆಳಗ್ಗೆಯೇ ಶಿಷ್ಠಾಚಾರ ಪಾಲನೆ ಪ್ರಕಾರ ಪ್ರಧಾನ ಮಂತ್ರಿಗಳು ರಾಜ್ಯದಲ್ಲಿ ಚುನಾವಣೆ ಮುಗಿದ ನಂತರ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮುಖ್ಯಮಂತ್ರಿಗಳು, ಸರ್ಕಾರ ಅವರನ್ನು ಸ್ವಾಗತಿಸಲು ಸಜ್ಜಾಗಿದ್ದೆವು. ಪ್ರಧಾನ ಮಂತ್ರಿ ಕಚೇರಿಯಿಂದ ನಮಗೆ ಅನಧಿಕೃತವಾಗಿ ಮುಖ್ಯ ಕಾರ್ಯದರ್ಶಿಗಳಿಗೆ ಫೋನ್ ಬಂತು. ಆಗ ನಾವು ಒಪ್ಪದೆ ಅಧಿಕೃತವಾಗಿ ಬರಹ ರೂಪದಲ್ಲಿ ಕೊಡಿ ಎಂದು ಮುಖ್ಯ ಕಾರ್ಯದರ್ಶಿಗಳ ಮೂಲಕ ಮನವಿ ಮಾಡಿದೆವು. ಆಗ ಅಧಿಕೃತವಾಗಿಯೇ ಪ್ರಧಾನ ಮಂತ್ರಿ ಕಚೇರಿಯಿಂದ ರಾಜ್ಯಪಾಲರು, ಮುಖ್ಯಮಂತ್ರಿಗಳು ಸೇರಿದಂತೆ ನಾಯಕರು ಯಾರೂ ಬರುವುದು ಬೇಡವೆಂದು ತಿಳಿಸಿದ್ದಾರೆ ಎಂದರು.
ಯಾರಿಗೆ ಎಷ್ಟು ಪ್ರೊಟೊಕಾಲ್ ನೀಡಬೇಕೆಂದು ನಮಗೆ ಖಂಡಿತ ಅರಿವಿದೆ. ಇದನ್ನು ಪ್ರಧಾನಿ ಕಚೇರಿ ಬಳಿ ಬೇಕಾದರೆ ಬಿಜೆಪಿಯವರು ಚರ್ಚಿಸಲಿ, ನನ್ನ ಫೋನಲ್ಲಿ ದಾಖಲೆಯಿದೆ ಬೇಕಾದರೆ ಬಿಡುಗಡೆ ಮಾಡುತ್ತೇನೆ, ಪ್ರಧಾನಿ ಹುದ್ದೆಗೆ ನಾವು ಗೌರವ ಕೊಡುತ್ತೇವೆ, ಅವರು ವಿಜ್ಞಾನಿಗಳನ್ನು ಅಭಿನಂದಿಸಲು ಬಂದಿದ್ದಾರೆ, ನಾವು ಅವರಿಗೆ ಸ್ವಾಗತ ಕೋರಿ ಶುಭಕೋರುತ್ತಿದ್ದೆವು ಎಂದರು.