ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ, ಮಾಜಿ ಲೋಕಸಭಾ ಸದಸ್ಯ ದಿವಂಗತ ಧೃವನಾರಾಯಣ ಅವರನ್ನು ನೆನೆದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಸೋಮವಾರ ಕಣ್ಣೀರಿಟ್ಟರು.
ವಿಧಾನಮಂಡಲ ಅಧಿವೇಶನದ ಮೊದಲ ದಿನವಾದ ಇಂದು ಕಲಾಪದಲ್ಲಿ, ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಶಿವಕುಮಾರ್ ಅವರು, ಧೃವನಾರಾಯಣ ಅವರ ಜತೆಗಿನ ಒಡನಾಟ, ಅವರ ಕೆಲಸದ ವೈಖರಿಯನ್ನು ನೆನಪಿಸಿಕೊಳ್ಳುತ್ತ ಭಾವುಕರಾದರು.
ಸಹೋದರನಂತಿದ್ದ ಧೃವನಾರಾಯಣ ಅವರ ಅಗಲಿಕೆ ನನ್ನ ಮನಸ್ಸಿಗೆ ಬಹಳ ನೋವು ತಂದಿದೆ. ರಾಜಕಾರಣದಲ್ಲಿ ಧೃವನಾರಾಯಣ್ ಅವರು ನನಗೆ ಸಹೋದರನಂತೆ ಇದ್ದರು. ಧೃವನಾರಾಯಣ್ ಅವರು ನನ್ನ ಜತೆಗೆ ಪಕ್ಷದ ಕಾರ್ಯಾಧ್ಯಕ್ಷರಾಗಿದ್ದರು. ಅವರಿಗೆ ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಜಿಲ್ಲಾ ಜವಾಬ್ದಾರಿ ವಹಿಸಿದ್ದೆ. ಈ ಎಲ್ಲ ಕಡೆಗಳಲ್ಲಿ ಅವರು ಶುದ್ಧ ರಾಜಕಾರಣ ಮಾಡಿದ್ದಾರೆ. ಅವರಿಗೆ ವಹಿಸಿದ್ದ ಪ್ರದೇಶಗಳಲ್ಲಿ ಶೇಕಡ 75ರಷ್ಟು ಸದಸ್ಯರು ಆಯ್ಕೆಯಾಗಿ ಬಂದಿದ್ದಾರೆ.
ಇಂದು ನಾನು ಕೆಪಿಸಿಸಿ ಅಧ್ಯಕ್ಷನಾಗಿ ಮುಂದುವರಿಯುತ್ತಿದ್ದು, ನನ್ನ ನಂತರ ಈ ಸ್ಥಾನದಲ್ಲಿ ಧೃವನಾರಾಯಣ ಅವರನ್ನು ಕೂರಿಸಬೇಕು ಎಂಬ ಆಲೋಚನೆ ನನ್ನ ತಲೆಯಲ್ಲಿತ್ತು. ನನ್ನ ಜತೆ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್ ಅವರು ಸಚಿವ ಸಂಪುಟದ ಸದಸ್ಯರಾಗಿ ಕೂತಿದ್ದಾರೆ. ಧೃವನಾರಾಯಣ ಅವರು ಬದುಕಿದ್ದರೆ, ಅವರು ಕೂಡ ಈ ಸದನದಲ್ಲಿ ಸಚಿವ ಸ್ಥಾನದಲ್ಲಿ ಕೂರುವುದನ್ನು ಯಾರಿಂದಲೂ ತಪ್ಪಿಸಲು ಆಗುತ್ತಿರಲಿಲ್ಲ ಎಂದು ಅವರು ಹೇಳಿದರು.
ಪಕ್ಷದ ಸಂಘಟನೆಯಲ್ಲಿ ಅವರಿಗೆ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ನಮ್ಮ ಪಕ್ಷದ ವತಿಯಿಂದ ಆರೋಗ್ಯ ಹಸ್ತ ಕಾರ್ಯಕ್ರಮ ಮಾಡಿದಾಗ, ಅವರು ಬಹಳ ಜವಾಬ್ದಾರಿಯಿಂದ ಕೆಲಸ ಮಾಡಿದ್ದರು ಎಂಬುದನ್ನು ಡಿಸಿಎಂ ಡಿಕೆ ಶಿವಕುಮಾರ್ ನೆನಪಿಸಿಕೊಂಡರು.
ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತದಲ್ಲಿ 36 ಜನ ಸತ್ತಾಗ ಆಗಿನ ಮಂತ್ರಿಗಳು ಕೇವಲ 3 ಮಂದಿ ಮಾತ್ರ ಸತ್ತಿದ್ದಾರೆ ಎಂದು ಹೇಳಿದ್ದರು. ಆದರೆ ಧೃವನಾರಾಯಣ ಅವರು ನನ್ನನ್ನು ಹಾಗೂ ಸಿದ್ದರಾಮಯ್ಯ ಅವರನ್ನು ಕರೆದುಕೊಂಡು ಹೋಗಿ ಪರಿಶೀಲಿಸುವಂತೆ ಮಾಡಿದರು. ನಂತರ ಈ ದುರಂತದಲ್ಲಿ 36 ಮಂದಿ ಸತ್ತಿರುವ ಬಗ್ಗೆ ಸತ್ಯಾಂಶ ಬಯಲಿಗೆ ಬಂತು ಎಂಬುದನ್ನು ಇಲ್ಲಿ ಸ್ಮರಿಸಲು ಬಯಸುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಪ್ರತಿ ಹಂತದಲ್ಲಿ ಅವರು ನಗುತ್ತಲೇ ಕೆಲಸ ಮಾಡಿದ್ದಾರೆ. ಅವರು ನಮ್ಮ ಪಕ್ಷಕ್ಕೆ ಮಾತ್ರವಲ್ಲ, ರಾಜ್ಯ ರಾಜಕಾರಣದಲ್ಲೂ ಧೃವತಾರೆ. ನಮಗೆ ಅವರ ಜತೆ ಇದ್ದ ಸ್ನೇಹ ಸಂಬಂಧ ಬಣ್ಣಿಸಲಾಗುವುದಿಲ್ಲ. ಆತ ಒಂದು ದಿನ ಬೇರೆಯವರ ಮನಸ್ಸು ನೋಯಿಸಲಿಲ್ಲ.
ವಿದ್ಯಾರ್ಥಿ ನಾಯಕನಾಗಿದ್ದ ಧೃವನಾರಾಯಣ್ ಬಿಜೆಪಿಗೆ ಹೋಗಿದ್ದರು. ನಾನು ಅವರನ್ನು ಪಕ್ಷಕ್ಕೆ ಕರೆತಂದಿದ್ದೆ. ಎಸ್.ಎಂ. ಕೃಷ್ಣಾ ಅವರ ಕಾಲದಲ್ಲಿ ಅವರಿಗೆ ಟಿಕೆಟ್ ಕೊಡಿಸಿ ಸ್ಪರ್ಧಿಸುವಂತೆ ಮಾಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇವಲ 1 ಮತದ ಅಂತರದಲ್ಲಿ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದರು.
ಅವರು ಪರಿಶಿಷ್ಟ ಜಾತಿ ಸಮುದಾಯದಿಂದ ಬಂದಿದ್ದರೂ ಆತ ಜಾತಿ ವಿಚಾರವಾಗಿ ಎಂದೂ ಮಾತನಾಡಲಿಲ್ಲ. ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡ ಶ್ರೇಷ್ಠ ನಾಯಕ. ಅವರಿಗೆ ಈ ವಿಧಾನಸಭೆಯಲ್ಲಿ ಸಂತಾಪ ಸೂಚಿಸುತ್ತಿರುವುದು ನೋವು ಆಗುತ್ತಿದೆ. ಅವರ ಅಗಲಿಕೆಯಿಂದ ನನಗೆ ಹಾಗೂ ಅವರ ಸಾವಿರಾರು ಹಿಂಬಾಲಕರಿಗೆ ನೋವಾಗಿದ್ದು, ಇದನ್ನು ತಡೆದುಕೊಳ್ಳುವ ಶಕ್ತಿಯನ್ನು ಕರುಣಿಸಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.