ಬೆಂಗಳೂರು:- ಕನ್ನಡ ಚಿತ್ರನಟ ಹಾಗೂ ನಿರ್ದೇಶಕ ಉಪೇಂದ್ರ ಅವರ ವಿರುದ್ಧ ʼಅಟ್ರಾಸಿಟಿ ಕಾನೂನಿನಡಿʼ ದೂರು ದಾಖಲಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಉಪೇಂದ್ರ ವಿಡಿಯೋ ಒಂದರಲ್ಲಿ ಮಾತನಾಡುತ್ತಾ ಕೆಳವರ್ಗವನ್ನು ನಿಂದಿಸುವ ಹಿನ್ನಲೆ ಹೊಂದಿರುವ ಗಾದೆಯೊಂದನ್ನು ಬಳಸಿದ್ದರು. ಈ ಕುರಿತು ಜನರು ಆಕ್ರೋಶ ವ್ಯಕ್ತಪಡಿಸಿದ ನಂತರ ಅದನ್ನು ಡಿಲೀಟ್ ಮಾಡಿ ಕ್ಷಮೆ ಕೇಳಿದ್ದರು.
ಇದೀಗ ಉಪೇಂದ್ರ ವಿರುದ್ಧ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಮಧುಸೂಧನ್ ಎನ್ನುವವರು ದೂರು ನೀಡಿದ್ದಾರೆ. ಇದೇ ವೇಳೆ ನಟ ಉಪೇಂದ್ರ ಅವರ ವಿರುದ್ದ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಅಟ್ರಾಸಿಟಿ ಕೇಸ್ ದಾಖಲಾಗಿದ್ದು, ಅವರ ವಿರುದ್ದ ಕಠಿಣ ಕ್ರವನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಈ ಕುರಿತು ಹಲಸೂರು ಗೇಟ್ ಠಾಣೆಯಲ್ಲೂ ದೂರು ದಾಖಲಾಗಿದ್ದು, ಈಗಾಗಲೇ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ FIR ದಾಖಲಾಗಿರುವ ಕಾರಣ ಹಲಸೂರು ಗೇಟ್ ದೂರಿನ ವಿಷಯದಲ್ಲಿ FIR ದಾಖಲಿಸಿಲ್ಲ ಎಂದು ದೂರುದಾರರು ಹೇಳಿದ್ದಾರೆ.
ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಬ್ರಾಹ್ಮಣ ಅಧಿಕಾರಿಯ ಮೂಲಕ ದೂರು ಕೊಡಿಸುವ ಮೂಲಕ ಪ್ರಕರವನ್ನು ಹಳ್ಳ ಹಿಡಿಸಲು ಪ್ರಯತ್ನಿಸಲಾಗುತ್ತಿದೆ, ಈ ಹಿಂದೆ ಜೈನ್ ಕಾಲೇಜ್ ಪ್ರಕರಣದಲ್ಲೂ ಹೀಗೇ ಮಾಡಲಾಗಿತ್ತು ಎಂದು ಹೋರಾಟಗಾರರು ಆರೋಪಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಉಪೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಇಷ್ಟಕ್ಕೂ ಕ್ಷಮೆಯನ್ನು ಸ್ವೀಕರಿಸುವ ದೊಡ್ಡತನವೂ ಇಲ್ಲವೇ? ಯಾಕೆ ಇಷ್ಟೊಂದು ದ್ವೇಷ ಎಂದು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಉಪೇಂದ್ರ ಪ್ರಶ್ನೆ ಮಾಡಿದ್ದಾರೆ.
ಇಂದು ನನ್ನ ವಿರುಧ್ದ ಮಾತನಾಡುತ್ತಿರುವ ಹಲವರು ಅಂದು ಹುಟ್ಟೇ ಇರಲಿಲ್ಲ. 50 ವರ್ಷಗಳ ಹಿಂದೆ ನನ್ನ ಬಾಲ್ಯ ನಾನು ಎಂತಹ ಪರಿಸರದಲ್ಲಿ ಬೆಳೆದೆ. ಆ ಬಾಲ್ಯದಲ್ಲಿ ನಾನು ಕಂಡ ಆ ಕ್ರೂರ ಬಡತನ, ನನ್ನ ಕಣ್ಣ ಮುಂದೆಯೇ ಬೆಂಕಿ ಹಚ್ಚಿಕೊಂಡು ಆದ ಆತ್ಮಹತ್ಯೆಗಳು, ಹಸಿವು, ಅಪಮಾನ, ತುಳಿತ. ಇದನ್ನು ಅನುಭವಿಸಿ ಬೆಳೆದ ನಾನು ಇಂದು ಒಂದು ವರ್ಗದ ಜನರ ಬಗ್ಗೆ ಅವಮಾನಕಾರಿಯಾಗಿ ಮಾತನಾಡುತ್ತೇನೆಯೇ? ನನಗೆ ಹುಚ್ಚೇ? ಅದಕ್ಕೆ ಕಾರಣವಾದರೂ ಏನು? ಅದರಿಂದ ನನಗೆ ಸಿಗುವ ಲಾಭವಾದರೂ ಏನು? ಇಷ್ಟಕ್ಕೂ ಕ್ಷಮೆಯನ್ನು ಸ್ವೀಕರಿಸುವ ದೊಡ್ಡತನವೂ ಇಲ್ಲವೇ? ಯಾಕೆ ಇಷ್ಟೊಂದು ದ್ವೇಷ ಎಂದು ಉಪೇಂದ್ರ ಸೋಷಿಯಲ್ ಮೀಡಿಯಾದಲ್ಲಿ ಬೇಸರ ಹೊರಹಾಕಿದ್ದಾರೆ.