ಮದ್ದೂರು: “ನನ್ನ ಅಜ್ಜಯ್ಯನ ಸುದ್ದಿಗೆ ಬರಬೇಡ. ಅಜ್ಜಯ್ಯನ ಶಕ್ತಿ ಏನು ಎಂಬುದು ನಿನಗೇನು ಗೊತ್ತು? ಅವರ ಶಕ್ತಿ ನನಗೆ ಮಾತ್ರ ಗೊತ್ತು. ಏತಕ್ಕೆ ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸಿದೆ? ನೀವು ಧರ್ಮಸ್ಥಳಕ್ಕೆ ಹೋಗಿ ಆಣೆ ಮಾಡಿದ ನಂತರ ಏನಾಯಿತು ಎಂಬುದನ್ನು ನೀವೇ ಚರ್ಚೆ ಮಾಡಿಕೊಳ್ಳಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸವಾಲು ಹಾಕಿದ್ದಾರೆ.
ಮದ್ದೂರಿನಲ್ಲಿ ನಡೆದ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು, “ಶಿವಕುಮಾರ್ ಅಪ್ಪ ಅಮ್ಮನಿಗೆ ಹುಟ್ಟಿಲ್ಲ ಎಂದು ಹೇಳಿದ್ದ ಕುಮಾರಸ್ವಾಮಿ ಸಾತನೂರಿಗೆ ಬಂದು ಕ್ಷಮೆ ಕೇಳಿದ್ದ. ಅಂದೇ ಯಾರಿಗೂ ಹೆದರದ ದೊಡ್ಡ ಆಲಹಳ್ಳಿ ಕೆಂಪೇಗೌಡರ ಮಗನಾದ ನಾನು ಇಂದು ಹೆದರುತ್ತೇನೆಯೆ? ನಿಮ್ಮ ಪಾದಯಾತ್ರೆಗಳಿಗೆಲ್ಲ ಹೆದರುವ ಮಗ ನಾನಲ್ಲ” ಎಂದು ತಿರುಗೇಟು ನೀಡಿದರು.
“ಕುಮಾರಸ್ವಾಮಿ ನಾವು ನಿಮ್ಮ ಪೆನ್ ಡ್ರೈವ್ ವಿಚಾರಕ್ಕೆ ಬಂದಿದ್ದೇವೆಯೇ? ನೀನುಂಟು ನಿಮ್ಮ ಅಣ್ಣ, ತಮ್ಮಂದಿರು ಉಂಟು, ನಿನ್ನ ಕುಟುಂಬವುಂಟು. ಪೆನ್ ಡ್ರೈವ್ ಹಿಂದೆ ಮಹಾನಾಯಕ, ಉಪಮುಖ್ಯಮಂತ್ರಿ ಇದ್ದಾರೆ ಎಂದು ಹೇಳಿದ್ದರು. ಈ ಮಾತಿಗೆ ಬದ್ದನಾಗಿ ಇರಬೇಕಿತ್ತು. ನೀವು ನನ್ನ ಬಗ್ಗೆ ಮಾತನಾಡಲಿಲ್ಲ ಎಂದರೆ ನಿನಗೆ ನಿದ್ರೆ ಬರುವುದಿಲ್ಲ ಎನ್ನುವುದು ತಿಳಿದಿದೆ. ಇದು ಇವತ್ತಿನದಲ್ಲ, 1985 ರಿಂದ ನಿಮ್ಮ ಕುಟುಂಬದ ಹಾಗೂ ನನ್ನ ನಡುವೆ ತಿಕ್ಕಾಟ ನಡೆಯುತ್ತಿದೆ” ಎಂದು ಹೇಳಿದರು.
“ಈಗ ಪಾದಯಾತ್ರೆಯಲ್ಲಿ ಎರಡು ಹೆಜ್ಜೆ ಹಾಕಿ ಹೇಳಿಕೆ ನೀಡಿ ಏಕೆ ಓಡಿ ಹೋಗುತ್ತಾ ಇದ್ದಿಯಾ? ಅವನು ಯಾರೋ ಪ್ರೀತಂ ಗೌಡ ನನ್ನ ಕುಟುಂಬದ ಮರ್ಯಾದೆ ತೆಗೆದಿದ್ದಾನೆ ಎಂದು ಹೇಳಿದೆ. ಆದರೆ ಇದಕ್ಕೂ ಮೊದಲು ರೇವಣ್ಣನದ್ದೇ ಬೇರೆ ಕುಟುಂಬ ನನ್ನದೇ ಬೇರೆ ಕುಟುಂಬ, ನಾವು ಭಾಗವಾಗಿದ್ಧೇವೆ ಎಂದು ಹೇಳಿದ್ದೇ. ಈಗ ಎಲ್ಲಿಂದ ಬಂತು ಕುಟುಂಬ? ನಾವು ನಿನ್ನ ಕುಟುಂಬದ ವಿಚಾರಕ್ಕೆ ಕೈ ಹಾಕುವುದಿಲ್ಲ. ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡಬೇಡಿ ಎಂದು ಬಿಜೆಪಿಯ ದೇವರಾಜೇಗೌಡನಿಂದ ಪತ್ರ ಬರೆಸಿದವನು ನೀನೆ ಅಲ್ಲವೇ” ಎಂದು ಪ್ರಶ್ನಿಸಿದರು.
“ಮುಖ್ಯಮಂತ್ರಿಯನ್ನಾಗಿ ಮಾಡಿದ ನಿಮ್ಮ ವಿರುದ್ದವೇ ಕುಮಾರಸ್ವಾಮಿ ಹೀಗೆ ಮಾತನಾಡುತ್ತಿದ್ದಾರಲ್ಲಾ ಸರಿಯೇ ಎಂದು ಯಾರೋ ಪ್ರಶ್ನಿಸಿದರು. ಅದಕ್ಕೆ ನಾನು ಹೇಳಿದೆ ಸ್ವಂತ ಅಣ್ಣ, ತಮ್ಮಂದಿರನ್ನೇ ಸಹಿಸುವುದಿಲ್ಲ. ಇನ್ನು ನನ್ನ ಹಾಗೂ ಚಲುವರಾಯಸ್ವಾಮಿ ಅವರನ್ನು ಸಹಿಸುತ್ತಾನೆಯೇ? ಮಂಡ್ಯ ಸಂಸದನಾದ ಕಾರಣಕ್ಕೆ ಇಷ್ಟೆಲ್ಲಾ ಹೇಳುತ್ತಿದ್ದೇನೆ. ನಾನು ಅವನ ಮಗನನ್ನು ಗೆಲ್ಲಿಸಲು ನೋಡಿದೆ. ಆದರೆ ಜನ ಸೋಲಿಸಿದರು” ಎಂದರು.
“ಮಂಡ್ಯ ಮತ್ತು ಹಾಸನಕ್ಕೆ ದೊಡ್ಡ ಕೈಗಾರಿಕೆಗಳನ್ನು ತಂದು ತಲಾ 10 ಸಾವಿರ ಜನರಿಗೆ ಉದ್ಯೋಗ ನೀಡುತ್ತೇನೆ ಎಂದು ಹೇಳಿದ್ದೀರಿ. ನೀವು ಈ ಕೆಲಸ ಮಾಡಿದರೆ ನನ್ನ ಹಾಗೂ ಚಲುವರಾಯಸ್ವಾಮಿ ಅವರ ಸಂಪೂರ್ಣ ಬೆಂಬಲವಿರುತ್ತದೆ” ಎಂದು ಹೇಳಿದರು.