ಹಾಸನ: ಜಿಲ್ಲೆಯ ಅಧಿದೇವತೆ ಹಾಸನಾಂಬ ಜಾತ್ರಾ ಮಹೋತ್ಸವ ನವೆಂಬರ್ 2 ರಿಂದ 15 ರ ವರೆಗೆ ನಡೆಯಲಿದ್ದು, ದರ್ಶನೋತ್ಸವದ ಸಮಯದಲ್ಲಿ ಯಾವುದೇ ನ್ಯೂನತೆಗಳು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಗರಸಭೆ, ಕಂದಾಯ, ಲೋಕೋಪಯೋಗಿ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಅವರು ಮಾತನಾಡಿದರು.
ಶಕ್ತಿ ಯೋಜನೆಯಿಂದಾಗಿ ರಾಜ್ಯದ ನಾನಾ ಮೂಲೆಗಳಿಂದ ಮಹಿಳಾ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಲಿದ್ದು, ಕಳೆದ ವರ್ಷ 6 ಲಕ್ಷ ಮಹಿಳಾ ಭಕ್ತಾದಿಗಳು ಬಂದಿದ್ದರು. ಈ ಬಾರಿ 10 ಲಕ್ಷ ಮೀರುವ ಸಂಭವವಿದೆ. ಇದಕ್ಕೆ ಅನುಸಾರವಾಗಿ ಶೌಚಾಲಯ, ಕುಡಿಯುವ ನೀರು, ಪ್ರಸಾದ ವಿನಿಯೋಗ ಸೇರಿದಂತೆ ಇತರೆ ಮೂಲ ಸೌಕರ್ಯ ಒದಗಿಸುವಂತೆ ಸೂಚನೆ ನೀಡಿದರು.
ಪೊಲೀಸ್ ಬಂದೋಬಸ್ತ್ ಕಟ್ಟುನಿಟ್ಟಾಗಿ ಪಾಲಿಸಬೇಕು. ಕೆಲ ಪೊಲೀಸರು ಮೊಬೈಲ್ ನೋಡಿಕೊಂಡು ಕೆಲಸ ನಿರ್ವಹಿಸುತ್ತಿರುವುದನ್ನು ಕಣ್ಣಾರೆ ಕಂಡಿದ್ದೇನೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬರುವುದರಿಂದ ಜಾಗೃತಿಯಿಂದ ಕೆಲಸ ಮಾಡುವಂತೆ ತಾಕೀತು ಮಾಡಲು ಸಭೆಯಲ್ಲಿ ಹಾಜರಿದ್ದ ಎಸ್ಪಿ ಅವರಿಗೆ ರಾಜಣ್ಣ ಸೂಚನೆ ನೀಡಿದರು.
24 ಗಂಟೆ ದರ್ಶನಕ್ಕೆ ಅವಕಾಶ:
ದಿನದ 24 ಗಂಟೆ ಹಾಸನಾಂಬ ದೇವಿ ದರ್ಶನದ ವ್ಯವಸ್ಥೆ ಕಲ್ಪಿಸಬೇಕು. ವಿಐಪಿ ದರ್ಶನ ವೇಳೆ ಕುಂಕುಮಾರ್ಚನೆ ಸೇರಿದಂತೆ ಇತರೆ ಪೂಜೆ ವಿಧಿ ವಿಧಾನವನ್ನು ಗರ್ಭಗುಡಿಯಲ್ಲಿ ಮಾಡದೇ, ಕೇವಲ ಮಂಗಳಾರತಿಯನ್ನು ಸ್ವೀಕರಿಸುವ ವ್ಯವಸ್ಥೆ ಮಾಡಿದರೆ ಸೂಕ್ತ. ಇದರಿಂದ ತಾಸುಗಟ್ಟಲೆ ಸಾಲಿನಲ್ಲಿ ನಿಂತು ಬರುವ ಭಕ್ತಾದಿಗಳಿಗೆ ಅನಾನುಕೂಲ ಉಂಟಾಗುವುದಿಲ್ಲ ಎಂದು ಸಚಿವರು ಸಲಹೆ ನೀಡಿದರು.
ಎಲ್ಇಡಿ ವ್ಯವಸ್ಥೆ, ವಿದ್ಯುತ್ ದೀಪಾಲಂಕಾರ, ನೇರ ಪ್ರಸಾರ ಸೇರಿದಂತೆ ಇತರೆ ಗುತ್ತಿಗೆಯನ್ನು ಈ ಹಿಂದೆ ನಿರ್ವಹಿಸಿದವರೂ ಸೇರಿದಂತೆ ಹೊಸದಾಗಿಯೂ ಟೆಂಡರ್ ಹಾಕುವ ಗುತ್ತಿಗೆದಾರರಿಗೆ ಅವಕಾಶ ನೀಡುವಂತೆ ಸೂಚನೆ ನೀಡಿದರು.
ಪ್ಯಾಕೇಜ್ ಟೂರ್ಗೆ ಚಿಂತನೆ: ಹಾಸನಾಂಬ ದರ್ಶನೋತ್ಸವ ಜೊತೆಗೆ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಉತ್ತೇಜಿಸಲು ?ಮರೆಯಲಾಗದ ಹಾಸನ ಯಾತ್ರೆ? ಯೋಜನೆ ಅಡಿ ನಾಲ್ಕೆöÊದು ಪ್ಯಾಕೇಜ್ನೊಂದಿಗೆ ಜಿಲ್ಲೆಯ ಪ್ರಸಿದ್ಧ ದೇವಾಲಯ, ಪ್ರವಾಸಿ ತಾಣಗಳನ್ನು ಗುರುತಿಸಿ ಪ್ಯಾಕೇಜ್ ಟೂರ್ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಸತ್ಯಭಾಮಾ ತಿಳಿಸಿದರು.
ಹಾಸನ ಜಿಲ್ಲೆ ಶಿಲ್ಪಕಲೆಗಳ ಬೀಡಾಗಿದ್ದು, ಬೇಲೂರು, ಶ್ರವಣಬೆಳಗೊಳ, ಸಕಲೇಶಪುರ, ಹಳೇಬೀಡು, ಅರಸೀಕೆರೆ ಸೇರಿದಂತೆ ನಾನಾ ಪ್ರವಾಸಿ ತಾಣಗಳಿಗೆ ಭಕ್ತಾದಿಗಳಿಗೆ ಪ್ರವಾಸೋದ್ಯಮ ಇಲಾಖೆಯಿಂದ ಪ್ಯಾಕೇಜ್ ವ್ಯವಸ್ಥೆಯನ್ನು ಮಾಡುವ ಬಗ್ಗೆ ಪ್ರಸ್ತಾವ ಮಾಡಲಾಗಿದೆ ಎಂದರು.
ಎರಡು ಮೂರು ದಿನಗಳ ಪ್ಯಾಕೇಜ್ ಇದಾಗಿದ್ದು, ನಾಲ್ಕೆöÊದು ಪ್ರವಾಸಿ ತಾಣಗಳನ್ನು ಒಳಗೊಂಡ 5 ಪ್ಯಾಕೇಜ್ಗಳನ್ನು ಪ್ರವಾಸೋದ್ಯಮ ಇಲಾಖೆ ಹಾಗೂ ಟ್ರಾವೆಲಿಂಗ್ ಏಜೆನ್ಸಿ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ರಿಯಾಯಿತಿ ದರದಲ್ಲಿ ಪ್ಯಾಕೇಜ್ ಪರಿಚಯಿಸಲಾಗುವುದು. ಈ ಬಗ್ಗೆ ಕೆಲ ದಿನಗಳಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಟ್ರಾವೆಲಿಂಗ್ ಏಜೆನ್ಸಿಗಳ ಸಭೆ ಕರೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
`ಹಾಸನಾಂಬ ಸ್ಮರಣ ಸಂಚಿಕೆ’, ವೈಚಾರಿಕ ಹಾಸನ? ಮೂಲಕ ಕಾಲೇಜು ಶಾಲಾ ವಿದ್ಯಾರ್ಥಿಗಳಿಗೆ ಸ್ಪರ್ಧೆ, ಪ್ರವಾಸಿ ಸ್ಥಳಗಳ ಮಾಹಿತಿಯನ್ನು ಒಳಗೊಂಡ ಪ್ರವಾಸಿ ಮಾಹಿತಿ ಕೇಂದ್ರಗಳನ್ನು ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದ ಬಳಿ ತೆರೆಯಲು ಸಲಹೆ ನೀಡಲಾಯಿತು.
ಹಾಸನ ವೈಭವ?ದ ಮೂಲಕ ಪಟಾಕಿ ಸ್ಪರ್ಧೆ, ರಂಗೋಲಿ, ಚಿತ್ರಕಲೆ, ಹೈನುಗಾರಿಕೆ ಉತ್ತೇಜಿಸಲು ಹಾಲು ಕರೆಯುವ ಸ್ಪರ್ಧೆ, ಸೇರಿದಂತೆ ಗ್ರಾಮೀಣ ಸೊಗಡಿನ ಜಾನಪದ ಕಲೆ ಹಾಗೂ ಸಂಸ್ಕöÈತಿಯನ್ನು ಬಿಂಬಿಸುವ ಸ್ಪರ್ಧೆಗಳನ್ನು ಏರ್ಪಡಿಸಲು ಅವಕಾಶ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಂಪ್ರದಾಯಬದ್ಧ ದರ್ಶನ: ಸಂಪ್ರದಾಯ ಬದ್ಧವಾಗಿ ನಡೆಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮ ತಿಳಿಸಿದರು. ದೇವಾಲಯದ ಬಾಗಿಲು ತೆರೆಯುವ ದಿನ ಹಾಗೂ ಮುಚ್ಚುವ ದಿನ ಹೊರತುಪಡಿಸಿ ಇನ್ನೆಲ್ಲ ದಿನಗಳು ಸಾರ್ವಜನಿಕರಿಗೆ ದಿನದ 24 ಗಂಟೆ ದರ್ಶನಕ್ಕೆ ಅವಕಾಶ ಕಲ್ಪಿಸಲು ಸಚಿವರು ಸೂಚನೆ ನೀಡಿದ್ದಾರೆ. ಈ ಬಗ್ಗೆ ದೇವಾಲಯದ ಅರ್ಚಕರೊಂದಿಗೆ ಮಾತನಾಡಿ ಪೂಜೆಯ ಧಾರ್ಮಿಕ ವಿಧಿ ವಿಧಾನದ ವೇಳೆ ಅಲಂಕಾರ ಸೇರಿದಂತೆ ಇತರೆ ಪೂಜೆ ವಿಧಿಗಳಿಗೆ ಧಕ್ಕೆಯಾಗದಂತೆ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದರು. ಸಚಿವರ ಸೂಚನೆಯಂತೆ ವಿಐಪಿ ದರ್ಶನದ ವೇಳೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮನ್ವಯದಿಂದ ಚರ್ಚೆ ನಡೆಸಲಾಗುವುದು. ಹಾಸನಾಂಬೆ ದೇವಿಯ ಆರಾಧನೆ ಹಾಗೂ ಕೃಪೆ ಎಲ್ಲರಿಗೂ ದೊರೆಯಬೇಕು. ಈ ನಿಟ್ಟಿನಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ದೇವಾಲಯದ ದುರಸ್ತಿ ಸಂಬAಧ ಸಣ್ಣಪುಟ್ಟ ಕೆಲಸ ಬಾಕಿ ಇದ್ದು ಇದಕ್ಕೆ ಸಚಿವರಿಂದ ಅನುಮೋದನೆ ಸಿಕ್ಕಿದೆ. ಆದಷ್ಟು ಶೀಘ್ರ ಕೆಲಸಗಳು ನಡೆಯಲಿವೆ ಎಂದು ತಿಳಿಸಿದರು .
ಪರಿಸರ ಎಂಜಿನಿಯರ್ಗೆ ತರಾಟೆ: ನಗರಸಭೆಯ ಪರಿಸರ ಎಂಜಿನಿಯರ್ ಯಾರು ಎಂದು ತರಾಟೆಗೆ ತೆಗೆದುಕೊಂಡ ಸಚಿವ ರಾಜಣ್ಣ ?ಏನು ಕೆಲಸ ಮಾಡುತ್ತೀರಿ? ಸರ್ಕಾರಿ ಎಂಜಿನಿಯರಿAಗ್ ಕಾಲೇಜು ಬಳಿಯ ಹೆದ್ದಾರಿ ರಸ್ತೆ ಪಕ್ಕದಲ್ಲಿ ಕುರಚಲು ಗಿಡಗಳು ಬೆಳೆದಿದ್ದರೂ ತೆರವ ಮಾಡಿಲ್ಲ. ಹಲವು ಬಾರಿ ಸೂಚನೆ ನೀಡಿದರೂ ಮನ್ನಣೆ ನೀಡದೆ ವರ್ತಿಸುತ್ತಿದ್ದೀರಿ. ನಿಮ್ಮನ್ನು ವರ್ಗಾವಣೆ ಮಾಡುವುದಿಲ್ಲ. ನೇರವಾಗಿ ಸಸ್ಪೆಂಡ್ ಮಾಡುತ್ತೇನೆ. ತಲೆಲೀ ಏನಿದೆ? ಎಂದು ಖಾರವಾಗಿ ಪ್ರಶ್ನಿಸಿದರು. ?ಕಳೆದ ಬಾರಿಯ ಸಭೆಯಲ್ಲಿ ಈ ರಸ್ತೆ ಪಕ್ಕದ ಕುರುಚಲು ಗಿಡವನ್ನು ತೆರವು ಮಾಡುವಂತೆ ಹೇಳಿದ್ದೆ. ನೀವು ತೆರವು ಮಾಡಲು ಆಗದಿದ್ದರೆ ಆ ಕೆಲಸ ನಾನೇ ಮಾಡುವೆ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಾಸನಾಂಬ ದರ್ಶನೋತ್ಸವ ಸಮಯದಲ್ಲಿ ಜನರಿಗೆ ಒಳ್ಳೆಯ ಅಭಿಪ್ರಾಯ ಮೂಡುವಂತೆ ಕೆಲಸಗಳನ್ನು ಮಾಡಬೇಕು. ಪರಿಸರ ಎಂಜಿನಿಯರ್ ಕೇವಲ ಹೊಟ್ಟೆ ಬೆಳೆಸಿದರೆ ಸಾಲದು ಕೆಲಸ ಮಾಡಬೇಕು. ನಾನು ಪ್ರಾಕ್ಟಿಕಲ್ ವ್ಯಕ್ತಿ. ಮುಂದಿನ ಸಭೆಯಲ್ಲಿ ಈ ಎಲ್ಲ ನ್ಯೂನತೆಗಳನ್ನು ಸರಿ ಮಾಡದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.