ಮೈಸೂರು: ಸಾಂಸ್ಕöÈತಿಕ ನಗರಿ ಮೈಸೂರಿನಲ್ಲಿ ಐತಿಹಾಸಿಕ ದಸರಾ ಮಹೋತ್ಸವ ಸಂಭ್ರಮ ಕಳೆಕಟ್ಟಿದೆ. ಶುಭ ವೃಶ್ಚಿಕ ಲಗ್ನದಲ್ಲಿ ಖ್ಯಾತ ಸಾಹಿತಿ ಹಂ.ಪ.ನಾಗರಾಜು ಅವರು ಅದ್ಧೂರಿ ನಾಡಹಬ್ಬ ದಸರಾಗೆ ವಿಧ್ಯುಕ್ತವಾಗಿ ಉದ್ಘಾಟನೆ ಮಾಡುವ ಮೂಲಕ ಚಾಲನೆ ನೀಡಿದರು.
ನಾಡದೇವಿಗೆ ಪುಷ್ಪಾರ್ಷನೆ ಸಲ್ಲಿಸುವ ಮೂಲಕ ದಸರಾ ಹಬ್ಬವನ್ನು ಉದ್ಘಾಟಿಸಲಾಗಿದ್ದು, ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ,ಕೆ.ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಸಾಥ್ ನೀಡಿದರು.
ದಸರಾ ಉದ್ಘಾಟಿಸಿ ಮಾತನಾಡಿದ ಹಂ.ಪ.ನಾಗರಾಜು ಅವರು ಲೋಕಮಾತೆ ಚಾಮುಂಡೇಶ್ವರಿದೇವಿಗೆ ಮೊದಲು ನಮಸ್ಕರಿಸಿ, ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರನ್ನು ನೆನೆದು ನನ್ನ ಮಾತುಗಳನ್ನು ಆರಂಭಿಸುತ್ತೇನೆ. “ಬಹುಭಾಗ್ಯಗಳ ಬ್ರಹ್ಮ” ಎಂಬ ಕೀರ್ತಿ ಗಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೆ, ಜನಾನುರಾಗಿಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರೆ, ಮೈಸೂರಿನ ಭವ್ಯ ಪರಂಪರೆಯನ್ನು ಇನ್ನೂ ಭವ್ಯತರವಾಗಿಸಲು ಟೊಂಕ ಕಟ್ಟಿ ನಿಂತಿರುವ ಶ್ರೀ ಹೆಚ್.ಸಿ.ಮಹದೇವಪ್ಪನವರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನವಚೈತ್ಯನ್ಯ ನೀಡುತ್ತಿರುವ ಶ್ರೀ ಶಿವರಾಜ ತಂಗಡಗಿ ಅವರೆ,ಇತರ ಎಲ್ಲಾ ಗಣ್ಯರೇ, ಸಭಾಸದರೇ ತಮಗೆಲ್ಲರಿಗೂ ನನ್ನ ಗೌರವಪೂರ್ವಕ ನಮಸ್ಕಾರಗಳು.
ಪ್ರಭುತ್ವಗಳಲ್ಲಿ ಪ್ರಜಾಪ್ರಭುತ್ವ ಮುಡಿಯ ಮಾಣಿಕ್ಯ ಕಳೆದ ತಿಂಗಳು ಸೆಪ್ಟೆಂಬರ್ 15 ರಂದು ತೆಂಕಣದ ಚಾಮರಾಜನಗರದಿಂದ ಬಡಗಣದ ಬೀದರವರೆಗೆ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸುವ ಮತ್ತು ಬಹುತ್ವದ ಮಹತ್ವವನ್ನು ಮನಗಾಣಿಸುವ ವಿಶ್ವದಾಖಲೆಯ ಮಾನವಸರಪಳಿಯನ್ನು ಆಯೋಜಿಸಿದ್ದು ಸಮಯೋಚಿತವೂಅಭಿನಂದನಾರ್ಹವೂ ಆಗಿದೆ. ವರಸೆ ವರಸೆಯಾಗಿ ಅನೇಕ ಭಾಗ್ಯಗಳ ಮಳೆಗರೆದಿರುವ ಈ ಸರ್ಕಾರ ನಡೆಸಿದ ಅರ್ಥಪೂರ್ಣವಾದ ಮಾನವಸರಪಣಿ ಯೋಜನೆಯೂ ಅಮೂರ್ತರೂಪದ ಇನ್ನೊಂದು ಸೃಜನಾತ್ಮಕಭಾಗ್ಯವೆಂದೇ ಪರಿಗಣಿಸುತ್ತೇನೆ.
ಏಕೆಂದರೆ ಸೇತುವೆಗಳನ್ನು ಧ್ವಂಸ ಮಾಡಿ ಕಂದರ ಪ್ರಪಾತಗಳನ್ನು ನಿರ್ಮಿಸುತ್ತಿರುವ ದುರಂತವನ್ನು ನಿವಾರಿಸಲು ಮನುಷ್ಯ ಮನುಷ್ಯರನ್ನು, ರಾಷ್ಟ್ರ ರಾಷ್ಟ್ರಗಳನ್ನು ಕೂಡಿಸುವ ಸರಪಳಿಗಳು ಇಂದಿನ ಜರೂರು. ಸಾಮಾನ್ಯ ಪ್ರಜೆಯೊಬ್ಬರು ಈ ನಾಡ ಹಬ್ಬದ ಸಡಗರದ ಸರಣಿಯನ್ನು ಉದ್ಘಾಟಿಸುತ್ತಿರುವದು ಆ ಪರಿಕಲ್ಪನೆಯ ಮುಂದುವರಿಕೆಯಾಗಿದೆ. ಇದು ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಪ್ರಭು ಎಂಬ ಸಿದ್ಧಾಂತವನ್ನು ಮಾನ್ಯಮಾಡಿದಂತೆ, ಜನಮುಖಿ ಕಾಳಜಿಯನ್ನು ಎತ್ತಿಹಿಡಿದಂತೆ. ಈ ಪವಿತ್ರ ದಸರಾ ಉತ್ಸವಸರಣಿ ಕಾರ್ಯಕ್ರಮದ ಉದ್ಘಾಟನೆಯನ್ನು, ನಮ್ಮ ನಾಡಿನ ಪ್ರಜೆಗಳ ಪರವಾಗಿ, ವಿನಯ ಮತ್ತು ಧನ್ಯತಾ ಭಾವದಿಂದ ನೆರವೇರಿಸುತ್ತಿದ್ದೇನೆ.
ಆಸ್ತಿಕತೆ ನಾಸ್ತಿಕತೆ ಕುರಿತ ಚರ್ಚೆ ಇಲ್ಲಿ ಅಪ್ರಸ್ತುತ, ದೇವಾಲಯಕ್ಕೆ ಬಂದವರೆಲ್ಲಾ ಆಸ್ತಿಕರೆಂದಾಗಲಿ, ಒಳಗೆ ಬರದೆ ದೂರ ಉಳಿದವರೆಲ್ಲ ನಾಸ್ತಿಕರೆಂದಾಗಲಿ ಅಲ್ಲ. ಎಲ್ಲ ದೇಶ ಕಾಲಗಳಲ್ಲೂ ಸಮಾಜ ಮಾನ್ಯಮಾಡಿದ ಶಿಷ್ಟಪರಂಪರೆಯ ಪ್ರೋತವೊಂದು ಜೀವಂತವಾಗಿರುತ್ತದೆ. ಕನ್ನಡಿಗರು ಹತ್ತುದಿನಗಳ ಈ ದೊಡ್ಡ ಹಬ್ಬವನ್ನು ಆಚರಿಸುತ್ತ ಬಂದಿದ್ದಾರೆ. ಕೆಲವು ಹಬ್ಬಗಳು ಆಯಾ ಮತಧರ್ಮದವರಿಗಷ್ಟೇ ಸೀಮಿತವಾಗಿರುತ್ತದೆ. ದಸರಾ ಹಬ್ಬ ಮತಧರ್ಮಗಳ ತಾರತಮ್ಯವಿರದೆ ಇಡೀ ನಾಡು ಆಚರಿಸುವ ಸರ್ವಜನಾಂಗದ ಹಬ್ಬ. ಅನೇಕ ಹಬ್ಬಗಳು ಒಂದೆರಡು ದಿನಗಳಿಗೆ ಸೀಮಿತವಾದರೆ ದಸರೆಯು ಪಾಡ್ಯದಂದು ಅಡಿಯಿಟ್ಟು ಬಿದಿಗೆ ತದಿಗೆಗಳನ್ನು ದಾಟಿ ದಶಮಿಯವರೆಗೆ ಹತ್ತುದಿನಗಳು ನಡೆಯುವ ಪರ್ವ. ಮೈಸೂರು ಒಡೆಯರು ಶ್ರದ್ಧಾಭಕ್ತಿಗಳಿಂದ ವೈಭವದಿಂದ ಆಚರಿಸಿದರು. ಅದು ನಾಡಿನ ಉದ್ದಗಲಗಳಲ್ಲಿ ಎಷ್ಟೊಂದು ಪ್ರಭಾವ ಬೀರಿತ್ತೆಂದರೆ ನನ್ನ ಬಾಲ್ಯದ ನೆನಪು ಮರುಕಳಿಸುತ್ತಿದೆ.
ಪ್ರತಿವರ್ಷ ನವರಾತ್ರಿಯಲ್ಲಿ ನನ್ನ ತಾಯಿ ಜಾಕಾಯಿ ಪೆಟಾರಿಯಿಂದ ತನ್ನ ತವರುಮನೆಯ ಬಳುವಳಿಯಾಗಿ ತಂದಿದ್ದ ಎರಡು ಬಚ್ಚಣಿಗೆ ಬೊಂಬೆ ಮತ್ತಿತರ ಪ್ರದರ್ಶನ ವಸ್ತುಗಳನ್ನು ತೆಗೆದು ಕೊಡುತ್ತಿದ್ದರು.
ನನ್ನ ತಮ್ಮತಂಗಿಯರೊಂದಿಗೆ ನೂರಾರು ಬೊಂಬೆಗಳನ್ನು ಅಲಂಕರಿಸಿ ಮೆಟ್ಟಿಲು ಮೆಟ್ಟಿಲಾಗಿ ಪೇರಿಸಿದ ಹಲಗೆಗಳ ಮೇಲೆ ಒಪ್ಪವಾಗಿ ಜೋಡಿಸುತ್ತಿದ್ದೆವು. ಮರದಲ್ಲಿ ಮಾಡಿದ ಆ ಎರಡು ಬಚ್ಚಣಿಗೆ ಬೊಂಬೆಗಳನ್ನು ದೂರ ದೂರ ಇಟ್ಟರೆ ನನ್ನತಾಯಿ ಕೂಡಲೆ “ಮಕ್ಕಳೇ ಅವು ಎರಡಿದ್ದರೂ ಒಂದೇನೆ. ಅವು ಜೋಡಿ, ಅವು ಶಾಶ್ವತ ದಂಪತಿಗಳು. ಅವನ್ನು ಅಗಲಿಸಬಾರದು. ಈ ಬೊಂಬೆಗಳಂತೆ ಅಗಲದೆ ಗಂಡಹೆಂಡತಿ ಬಾಳಿ ಎಂದು ನನ್ನ ತಾಯಿತಂದೆ ಹರಸಿ ಕೊಟ್ಟಿರುವರು. ಇವು ಬರೀ ಮರದ ಬೊಂಬೆಗಳಲ್ಲ, ಮನೆ ಬೆಳಗುವ ಜೋಡಿ.” ನನ್ನಮ್ಮ ಹೇಳಿದ ಮಾತುಗಳನ್ನು ಈಗಲೂ ಮೆಲಕುಹಾಕುತ್ತೇನೆ, ಜೋಡಿ ಬೊಂಬೆಗಳು ಆದರ್ಶವನ್ನು ಬಿತ್ತುವ ರೂಪಕಗಳು, ಮೆಟಫರ್ಸ್, ಅರಮನೆ, ರಾಜರಾಣಿ, ದೇವತೆಗಳು ಇತ್ಯಾದಿ ಮಾತುಗಳು ಆಲಂಕಾರಿಕ ರೂಪಕಗಳು, ಸಹನೆ ಸೌಹಾರ್ದದಿಂದ ಬಾಳಿದರೆ, ನೆಮ್ಮದಿ ಇದ್ದರೆ ಪ್ರತಿ ಮನೆಯೂಆರಮನೆಯೇ, ಎಲ್ಲರೂ ರಾಜರಾಣಿಯರೇ, ನವರಾತ್ರಿಯ ತೆಂಕಣಗಾಳಿಗೆ ಮೈಸೂರು ಮೈಕೊಡವಿ, ಪೊರೆಬಿಟ್ಟು, ಶೃಂಗಾರಗೊಂಡು, ಕಂಗೊಳಿಸುತ್ತದೆ.
ಮೈಸೂರೆಂದರೆ ದಸರ, ಜಂಬೂಸವಾರಿ ಎಂಬ ಮಾತು ಲೋಕಪ್ರಸಿದ್ಧಿ ಪಡೆಯಿತು. ಪ್ರಜಾಪ್ರಭುತ್ವ ಬಂದಮೇಲೆ ಕೆಲವು ಬದಲಾವಣೆ ಆದುವು. ಈ ಬದಲಾವಣೆ ಸ್ವರೂಪದಲ್ಲೇ ಹೊರತು ಸತ್ವದಲ್ಲಿ ಅಲ್ಲ. ಚುನಾಯಿತ ಸರಕಾರ ಈ ಹಬ್ಬವನ್ನು ಜನಮುಖಿಯಾಗಿಸಿದರು. ಇದು ಅರಮನೆಯ ಹಬ್ಬವಲ್ಲ, ಜನರು ಆರಿಸಿದ ಸರಕಾರ ನಡೆಸುವ ಉತ್ಸವವನ್ನಾಗಿಸಿ ಇನ್ನಷ್ಟು ಅರ್ಥಪೂರ್ಣವಾಗಿ ಹಿಂದಿನಂತೆಯೇ ಸಂಭ್ರಮದಿಂದ ನಡೆಸುತ್ತಿದ್ದಾರೆ. ಸರಕಾರ ಮತ್ತು ಜನರು ಒಟ್ಟಿಗೆ ಹೆಜ್ಜೆ ಹಾಕುವ ಈ ನಾಡ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ.
ಪ್ರಾಯ: ಇನ್ನು ಮುಂದಿನ ತಲೆಮಾರಿಗೆ ಸಿಗದೆ ಮರೆಯಾಗಬಹುದಾದ ಈ ಮಣ್ಣಿನ, ಈ ನೆಲದ ಘಮಲು, ದೇಸಿಯ ಸೊಗಡು ತುಂಬಿರುವ ಹಬ್ಬ ನಿಲ್ಲಬಾರದು. ಈ ಆಚರಣೆಯಿಂದ ಕರ್ನಾಟಕದ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯ ಕಿರು ಪರಿಚಯ ಇಂದಿನ ಹೊಸ ತಲೆಮಾರಿನವರಿಗೆ ಆಗುತ್ತದೆ. ದೇಸಿವಾದ್ಯ ಮೇಳಗಳು, ಕಲೆ, ಕುಣಿತ, ಹಾಡು, ಸ್ತಬ್ಧಚಿತ್ರಗಳು, ಬಣ್ಣದ ವೇಷಗಳು, ಕುದುರೆಗಳ ಸಂಚಲನ, ಜಂಬೂ ಸವಾರಿ, ಮುಂತಾದವುಗಳ ಪರಿಚಯ ಶಾಲಾಕಾಲೇಜಲ್ಲಿ ಸಿಗುವುದಿಲ್ಲ. ಹೊಸ ತಲೆಮಾರಿಗೆ ನಮ್ಮ ನಾಡಿನ ಬಹುರೂಪಿ ಸಂಸ್ಕೃತಿಯ ಮತ್ತು ಅಸ್ಮಿತೆಯ ಆಯಾಮ ಅನುಭವವಾಗುತ್ತದೆ.
ದಸರ ಹಬ್ಬದ ಸಂದರ್ಭದಲ್ಲಿ ಹಿಂದಿನಿಂದ ಪ್ರೋತ್ಸಾಹಿಸುತ್ತಿದ್ದ ದೇಸಿ ಪರಂಪರೆಗಳಲ್ಲಿ ಕುಸ್ತಿಯೂ ಒಂದು. ಇನ್ನು ಮುಂದೆಯೂ ದೇಸೀ ಕ್ರೀಡೆಯಾದ ಕುಸ್ತಿಗೆ ಹೆಚ್ಚು ಪ್ರೋತ್ಸಾಹ ಕೊಡಬೇಕು. ನಾಡಿನ ಉದ್ದಗಲಗಳಲ್ಲಿ ಗರಡಿಮನೆಗಳು ಇದ್ದುವು. ನಾನು ಮಂಡ್ಯದಲ್ಲಿ ಆರನೆಯ ತರಗತಿ ವಿದ್ಯಾರ್ಥಿ ಆಗಿದ್ದಾಗ 1948ರಲ್ಲಿ ನಡೆದ ಘಟನೆ ನೆನಪಾಗುತ್ತದೆ. ಆಗ ಮೈಸೂರು ಉಸ್ತಾದ್ ಟೈಗರ್ ರಾಮು ಎಂಬ ಪೈಲ್ವಾನರು ತುಂಬಾ ಜನಪ್ರಿಯರಾಗಿದ್ದರು. ಅದನ್ನು ಕಂಡು ನಾನು ಪೈಲ್ವಾನ್ಆ ಗಬೇಕೆಂದು ಗರಡಿಮನೆಗೆ ಹೋಗುತ್ತಿದ್ದೆ. ತಲೆತುಂಬ ಗುಂಗರು ಕೂದಲಿತ್ತು. ಆದರೆ ಉಸ್ತಾದ್ ಕಾಳಪ್ಪನವರು ಗರಡಿಯಲ್ಲಿ ಕ್ರಾಪು ಸರಿಯಲ್ಲವೆಂದರು. ಸರಿ ನಾನು ತಲೆಬೋಳಿಸಿ ಮನೆಗೆ ಹೋದೆ. ನಮ್ಮ ಚಿಕ್ಕಪ್ಪ “ಎಂಥಾ ತಪ್ಪು ಮಾಡಿದೆಯೋ ಬೇಕೂಫ, ತಂದೆ ಬದುಕಿರುವಾಗ ತಲೆಬೋಳಿಸಿ ಅಪಶಕುನವಾಯಿತು” ಎಂದು ಚೆನ್ನಾಗಿ ಬೈದು ಗರಡಿಮನೆಗೆ ಕಾಲಿಡದಂತೆ ಮಾಡಿದರು.
ಅದರಿಂದ ಈ ನಾಡಿಗೆ ಒಬ್ಬ ಶ್ರೇಷ್ಠ ಪೈಲ್ವಾನ ಸಿಗಬಹುದಾದ ಅವಕಾಶ ತಪ್ಪಿತಲ್ಲಾಎಂದು ಈಗಲೂ ವ್ಯಸನವಿದೆ!. ನಮ್ಮ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಷ್ಟೇ ಅಡ್ಡಿ ಆತಂಕಗಳು ಎದುರಾಗುತ್ತಿದ್ದರೂ, ಎದೆಗುಂದದೆ ಸಡ್ಡು ಹೊಡೆದು ಗಟ್ಟಿಯಾಗಿ ನಿಂತಿರುವುದನ್ನು ನೋಡಿದರೆ ಅವರೂ ಕೂಡ ಗರಡಿಮನೆಯಲ್ಲಿ ಸಾಮುಮಾಡಿರಬೇಕೆಂಬ ಗುಮಾನಿ ನನಗಿದೆ. ಅಹುದು ಜೀವನವೇ ದೊಡ್ಡ ಅಖಾಡ. ಅದರಲ್ಲಿ ಧೃತಿಗೆಡದೆ ತೊಡೆತಟ್ಟಿ ನಿಲ್ಲಲೇಬೇಕು. ಸಜ್ಜನಿಕೆ ಸೌಮ್ಯತೆ ದೌರ್ಬಲ್ಯವಲ್ಲ. ಆದರೆ ಪ್ರತಿಕೂಲ ಪ್ರವಾಹವನ್ನು ಎದುರಿಸುವ ಧೀಶಕ್ತಿ ಪ್ರತಿಯೊಬ್ಬರಲ್ಲೂ ಇರಬೇಕಾಗುತ್ತದೆ ಎಂದರು.
ಇಂದಿನಿಂದ ಅಕ್ಟೋಬರ್ 12ರ ವರೆಗೆ ಮೈಸೂರು ದಸರಾ ನಡೆಯಲಿದೆ. ಪ್ರತಿದಿನವೂ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿವೆ. ಅ.12ರಂದು ಜಗತ್ಪ್ರಸಿದ್ಧ ದಸರಾ ಜಂಬೂ ಸವಾರಿ ಮೆರವಣಿಗೆ ಇದೆ. ಇಂದಿನಿಂದ ದಸರಾ ಚಲನಚಿತ್ರೋತ್ಸವ, ದಸರಾ ಆಹಾರ ಮೇಳ, ಫಲಪುಷ್ಪ ಪ್ರದರ್ಶನಗಳು ಆರಂಭವಾಗಲಿವೆ. ಅಲ್ಲದೆ, ದಸರಾ ಕುಸ್ತಿ, ದಸರಾ ಶಿಲ್ಪಕಲೆ ಮತ್ತು ಚಿತ್ರಕಲಾ ಶಿಬಿರ, ದಸರಾ ಸಿಎಂ ಕಪ್ ಕ್ರೀಡಾಕೂಟ, ದಸರಾ ಪುಸ್ತಕ ಮೇಳ, ನವರಾತ್ರಿ ಜಾನಪದ ರಂಗ ಉತ್ಸವ, ವಸ್ತು ಪ್ರದರ್ಶನ ಸೇರಿದಂತೆ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತಿದೆ. ಜೊತೆಗೆ, ನಗರದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಹಸಿರು ಮಂಟಪದ ಬಳಿ ವಿದ್ಯುತ್ ದೀಪಾಲಂಕಾರ ಹಾಗೂ ದೀಪಾಲಂಕಾರಗೊಂಡಿರುವ “ವಿದ್ಯುತ್ ರಥ”ಕ್ಕೆ ಚಾಲನೆ ನೀಡುವ ಕಾರ್ಯಕ್ರಮವಿದೆ.