ಚಾಮರಾಜನಗರ:- ನಾನೇ ನನ್ನ ವಿರುದ್ಧ ಘೋಷಣೆ ಕೂಗಿಸಿಕೊಂಡು ಸಚಿವ ಸಂಪುಟದಲ್ಲಿ ಕೆಲಸ ಮಾಡಿಸಿಕೊಳ್ಳುತ್ತಿದ್ದೆ ಎಂದು ಸಚಿವ ಎಚ್.ಸಿ.ಮಹಾದೇವಪ್ಪ ಹಳೇ ಗುಟ್ಟೊಂದನ್ನು ರಟ್ಟು ಮಾಡಿದರು.
ಚಾಮರಾಜನಗರದಲ್ಲಿ ನಡೆದ ಭೀಮ ಸಂಕಲ್ಪ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, 1998 ರಲ್ಲಿ ಇಪ್ಪತ್ತು ಸಾವಿರ ಬ್ಯಾಕ್ ಲಾಗ್ ಹುದ್ದೆ ತುಂಬಿಸುವ ಸಂದರ್ಭದಲ್ಲಿ ನನ್ನ ಮನೆ ಮುಂದೆ ಧಿಕ್ಕಾರ ಕೂಗಿಸಿದ್ದೆ. ನನ್ನ ಮನೆ ಮುಂದೆ ಕುಳಿತು ಎಚ್.ಸಿ. ಮಹದೇವಪ್ಪರಿಗೆ ಧಿಕ್ಕಾರ ಕೂಗಿ ಅಂತ ಹೇಳುತ್ತಿದ್ದೆ,
ಆಮೇಲೆ ಕ್ಯಾಬಿನೆಟ್ನಲ್ಲಿ ನನ್ನ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ ಎಂದು ಹೇಳಿ ಅಪ್ರುವಲ್ ಮಾಡಿಸುತ್ತಿದ್ದೆ,ಈ ಗುಟ್ಟನ್ನು ನಾನು ಈಗ ಇಲ್ಲಿ ಹೇಳುತ್ತಿದ್ದೇನೆ ಎಂದರು.
ಎಚ್.ಸಿ. ಮಹದೇವಪ್ಪ, ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ಇರುವವರಗೆ ಎಸ್ಇಪಿ ಹಾಗೂ ಟಿಎಸ್ಪಿ ಹಣದಲ್ಲಿ ಒಂದು ರೂಪಾಯಿಯೂ ದುರುಪಯೋಗವಾಗಲು ಬಿಡಲ್ಲ, ಎಸ್ಸಿ ಎಸ್ಟಿ ಹುಡುಗರಿಗೆ ಸುಮ್ಸುಮ್ನೆ ಕಂಟ್ರಾಕ್ಟರ್ ಲೈಸೆನ್ಸ್ ಕೊಟ್ಟಿಲ್ಲ, ಬೇರೆ ಬೇರೆ ಕಂಟ್ರಾಕ್ಟರ್ಗಳು ಜೇಬು ತುಂಬಾ ದುಡ್ಡು ಇಟ್ಟುಕೊಳ್ಳುತ್ತಿದ್ದರು.ಆದರೆ, ನಮ್ಮವರಿಗೆ ಊಟ ಮಾಡೋಕೆ ದುಡ್ಡು ಇರುತ್ತಿರಲಿಲ್ಲ ಅವರ ಜೇಬು ಖಾಲಿ ಇರ್ತಿತ್ತು.
ಅದಕ್ಕೆ ಕಂಟ್ರಾಕ್ಟರ್ ಮೀಸಲಾತಿ ತಂದೆವು ಎಂದು ಹೇಳಿದರು.
ಅಂಬೇಡ್ಕರ್ ಸಿದ್ದಾಂತವನ್ನು ಪ್ರಚಾರ ಮಾಡಬೇಕು. ಬಲವಾದ ಅಂಬೇಡ್ಕರ್ ವಾದ ಬೇಕು, ದೇಶದ ಸಂವಿಧಾನ ರಕ್ಷಣೆ ನಮ್ಮ ಮೇಲಿದೆ, ಸಂವಿಧಾನ ರಕ್ಷಣೆ ಆದರೆ ನಾವು ರಕ್ಷಣೆಯಾಗುತ್ತೇವೆ ಅದಕ್ಕಾಗಿ ನಾವು ಒಗ್ಗಟ್ಟಾಗಬೇಕು ಎಂದರು.
ಹಬ್ಬ, ಮದುವೆಯಲ್ಲಿ ಸಂವಿಧಾನ ಪೀಠಿಕೆ ಓದಬೇಕು: ಸಂವಿಧಾನದ ಮಹತ್ವ ಪ್ರತಿ ಮನೆಮನೆಗೆ ಮುಟ್ಟಬೇಕು. ಹಬ್ಬ, ಮದುವೆಯಲ್ಲಿ ಸಂವಿಧಾನ ಪೀಠಿಕೆ ಓದುವ ಪರಿಪಾಠ ಆಗಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಭೀಮ ಸಂಕಲ್ಪ ಸಮಾವೇಶದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಸತತ ಪ್ರಯತ್ನ, ಸಂಘರ್ಷದ ಮೂಲಕ ರಚಿಸಿಕೊಟ್ಟಿರುವ ಸಂವಿಧಾನವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರಿಂದ ಆಗಬೇಕು.
ಸಂವಿಧಾನ ಬಗ್ಗೆ ಜಾಗೃತಿ ಮೂಡಿಸಬೇಕು. ಸಂವಿಧಾನದ ಮಹತ್ವ, ರಕ್ಷಣೆ, ಅನುಕೂಲವನ್ನು ಮಕ್ಕಳಿಗೆ, ಕುಟುಂಬಕ್ಕೆ ತಿಳಿಸಿಕೊಡುವ ಕೆಲಸ ಆಗಬೇಕಿದೆ ಎಂದರು.
ನಿಮ್ಮೆಲ್ಲರ ಸಹಕಾರದಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಂವಿಧಾನ ಉಳಿಸುವ, ನಿಮಗೆಲ್ಲರಿಗೂ ರಕ್ಷಣೆ ಕೊಡುವ ಸರ್ಕಾರ ಬಂದಿದೆ. ಮುಂದಿನ ದಿನಗಳಲ್ಲೂ ಸಂವಿಧಾನ ರಕ್ಷಣೆ ಮಾಡುವ ಪಕ್ಷ ಅಧಿಕಾರಕ್ಕೆ ಬರಬೇಕು ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕಿದೆ ಎಂದರು.
ಪ್ರತಿ ಮನೆಮನೆಯಲ್ಲೂ ಅಂಬೇಡ್ಕರ್ರವರ ಭಾವಚಿತ್ರ ಇಟ್ಟು ಸಂವಿಧಾನ ಪೀಠಿಕೆಯನ್ನು ಸಣ್ಣ ಮಕ್ಕಳಿಗೆ ಓದಿಸಿದರೆ ಬಹಳಷ್ಠು ಬದಲಾವಣೆ ಸಾಧ್ಯವಾಗುತ್ತದೆ, ಹಬ್ಬ, ಮದುವೆ ಸಮಾರಂಭಗಳಲ್ಲಿ ಸಂವಿಧಾನ ಪೀಠಿಕೆ ಓದುವ ಪರಿಪಾಠ ಬೆಳೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಶಾಸಕರುಗಳಾದ ಸಿ.ಪುಟ್ಟರಂಗಶೆಟ್ಟಿ, ಎಚ್.ಎಂ.ಗಣೇಶ್ ಪ್ರಸಾದ್, ಎ.ಆರ್.ಕೃಷ್ಣಮೂರ್ತಿ ಇನ್ನಿತರರು ಇದ್ದರು.