ಮೈಸೂರು:ನೂತನ ಕ್ರೈಸ್ತ ವರ್ಷಾರಂಭದ ಅಂಗವಾಗಿ ಜನವರಿ 01ರಂದು ಬೆಳಗ್ಗೆ 04.00 ಗಂಟೆಯಿಂದ ಪ್ರಾರಂಭಿಸಿ ಯೋಗಾನರಸಿಂಹಸ್ವಾಮಿಯವರಿಗೆ ವಿಶೇಷ ಅಲಂಕಾರ ಮತ್ತು “ಶ್ರೀರಂಗಂಕ್ಷೇತ್ರ” “ಮಧುರೈ ಕ್ಷೇತ್ರಗಳಿಂದ ತರಿಸಿರುವ ವಿಶೇಷ “ತೋಮಾಲೆ” ಮತ್ತು “ಸ್ವರ್ಣಪುಷ್ಪದಿಂದ ಶ್ರೀಸ್ವಾಮಿಗೆ “ಸಹಸ್ರನಾಮರ್ಚನೆ” ಮತ್ತು ದೇವಾಲಯದ ಉತ್ಸವ ಮೂರ್ತಿಯಾದ ಶ್ರೀಮಲಯಪ್ಪನ್ ಸ್ವಾಮಿ, ಪದ್ಮಾವತಿ ಮತ್ತು ಮಹಾಲಕ್ಷ್ಮಿ ದೇವರಿಗೆ ದೇವಾಲಯದ ಆವರಣದಲ್ಲಿ “ಏಕಾದಶ ಪ್ರಾಕಾರೋತ್ಸವ” ಹಾಗೂ ಇಪ್ಪತ್ತು ಕ್ವಿಂಟಾಲ್ ಪುಳಿಯೋಗರೆ ನಿವೇದನೆ” ಮತ್ತು ದೇವಾಲಯಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ “ ಎರಡು ಲಕ್ಷ ತಿರುಪತಿ ಮಾದರಿಯ ಲಡ್ಡು ವಿತರಣಾ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ನಾಡೋಜ. ಪ್ರೊ. ಭಾಷ್ಯಂ ಸ್ವಾಮೀಜಿಯವರು ತಿಳಿಸಿದರು
ವಿಜಯನಗರದ ಯೋಗ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರಾರಂಭದಲ್ಲಿ 1994ನೇ ಇಸವಿಯಲ್ಲಿ ಅಂದಾಜು ಒಂದು ಸಾವಿರ ಲಡ್ಡು ವಿತರಣೆಯಿಂದ ಪ್ರಾರಂಭಿಸಿ ಕಳೆದ ಹಲವಾರು ವರ್ಷಗಳಿಂದ ಪ್ರತಿ ವರ್ಷ ಒಂದು ಲಕ್ಷ ಮತ್ತು ಎರಡು ಲಕ್ಷ ಲಡ್ಡುಪ್ರಸಾದವನ್ನು ಭಕ್ತಾದಿಗಳಿಗೆ ವಿತರಣೆ ಮಾಡಲಾಗುತ್ತಿದೆ. ಈ ವರ್ಷವೂ ಸಹ ಇನ್ನೂ ಹೆಚ್ಚು ಅಂದರೆ ಎರಡು ಲಕ್ಷ ಲಡ್ಡುವನ್ನು ವಿತರಣೆ ಮಾಡಲು ದೇವಸ್ಥಾನದ ವತಿಯಿಂದ ತಯಾರಿ ನಡೆಯುತ್ತಿದೆ. ಈ ವರ್ಷ ಅಂದಾಜು (2,000)ಗ್ರಾಂ ತೂಕದ (15,000) ಲಡ್ಡುಗಳು ಹಾಗೂ (150)ಗ್ರಾಂ ತೂಕದ (2 ಲಕ್ಷ) ಲಡ್ಡುಗಳನ್ನು ದೇವಾಲಯಕ್ಕೆ ಬರುವ ಎಲ್ಲಾ ಭಕ್ತಾದಿಗಳಿಗೆ ಯಾವುದೇ ಜಾತಿ, ಮತ ಮತ್ತು ಭೇದವಿಲ್ಲದೆ ಉಚಿತವಾಗಿ ವಿತರಿಸಲಾಗುವುದು.
ಲಡ್ಡು ಪ್ರಸಾದವನ್ನು ವಿಶೇಷವಾಗಿ 60 ಮಂದಿ ನುರಿತ ಬಾಣಸಿಗರಿಂದ ತಯಾರಿಸಲಾಗಿದ್ದು, ದಿನಾಂಕ: 20.12.2023 ರಿಂದ ಪ್ರಾರಂಭಿಸಿ 31.12.2023 ರವರೆಗೂ ಲಡ್ಡು ತಯಾರಿ ಕಾರ್ಯ ನಡೆಯುತ್ತದೆ ಎಂದರು
ನಂತರ ದೇವಾಲಯದ ಎನ್ ಶ್ರೀನಿವಾಸನ್ಅವರು ಮಾತನಾಡಿ
ಲೋಕ ಕಲ್ಯಾಣಾರ್ಥವಾಗಿ ಯಾವುದೇ ಜಾತಿ, ಮತಗಳ ಭೇದವಿಲ್ಲದೆ ಪ್ರಪಂಚದ ಎಲ್ಲೆಡೆ ಆಚರಿಸುವ ಕ್ರೈಸ್ತ ವರ್ಷಾರಂಭದ ಹಿನ್ನೆಲೆಯಲ್ಲಿ ವಿಶ್ವಶಾಂತಿ, ಭ್ರಾತೃತ್ವ ಮತ್ತು ಸರ್ವಧರ್ಮ ಸಮನ್ವಯತೆಗಾಗಿ ಮತ್ತು ನಾಡಿನ ಎಲ್ಲಾ ಜನರ ಒಳಿತಿಗಾಗಿ ಪ್ರಾರ್ಥಿಸಿ ಈ ಲಡ್ಡು ಪ್ರಸಾದ ನಿವೇದನೆ ಮತ್ತು ಭಕ್ತಾದಿಗಳಿಗೆ ವಿನಿಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಲೋಕಕಲ್ಯಾಣಾರ್ಥಕ್ಕೋಸ್ಕರ ಮತ್ತು ದೇಶದ ಎಲ್ಲಾ ಜನರ ಒಳಿತಿಗಾಗಿ, ಸಮಸ್ತ ಜನರಿಗೆ ಸುಖ ಶಾಂತಿ ನೆಮ್ಮದಿ ದೊರೆಯಲಿ ಎಂದು ಪ್ರಾರ್ಥಿಸುವ ಮತ್ತು ಎಲ್ಲಾ ಭಕ್ತಾದಿಗಳು ಒಂದೇ ಎಂದು ಸಾರುವ ಏಕೈಕ ದೃಷ್ಠಿಯಿಂದ ಈ ಎಲ್ಲಾ ಕಾರ್ಯಕ್ರಮಗಳು “ಪರಮ ಪೂಜ್ಯ ಪ್ರೊ. ಭಾಷ್ಯಂಸ್ವಾಮೀಜಿಯವರ” ದಿವ್ಯನೇತೃತ್ವದಲ್ಲಿ ವಿಶೇಷ ಪ್ರಾರ್ಥನೆಯಿಂದ ನೆರವೇರಲಿದೆ.
ಆಸ್ಥಿಕ ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಭಗವಂತನ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕು ಎಂದರು,
ಈಗಾಗಲೇ ಕೊರೋನ ಅಲೆ ದೇಶದಲಿ, ಆರಂಭಗೊಂಡಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರದವರು ಯಾವುದೇ ಆತಂಕವನ್ನು ಪಡುವ ಅಗತ್ಯವಿಲ್ಲವೆಂದು ಮಾರ್ಗಸೂಚಿಯನ್ನು ನೀಡಿರುತ್ತಾರೆ. ಸಾರ್ವಜನಿಕರಿಗೆ ಧೈರ್ಯವನ್ನು ಆದರೂ ಸಾರ್ವಜನಿಕರು ಹಾಗೂ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳು ತಮ್ಮ ಆರೋಗ್ಯವನ್ನು ಕಾಪಾಡಿಕ್ಕೊಳ್ಳುವ ದೃಷ್ಟಿಯಿಂದ ದಯವಿಟ್ಟು ಮಾಸ್ಕ್ ಬಳಸಿ, ಸ್ಯಾನಿಟೈಸರ್ ಉಪಯೋಗಿಸಿ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ ಎಂದು ಕೇಳಿಕೊಳ್ಳುತ್ತೇನೆ. ಹಾಗೂ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳು ದಯವಿಟ್ಟು ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕ್ಕೊಳ್ಳಿ ಎಂದು ಪ್ರಾರ್ಥಿಸುತ್ತೇನೆ ಎಂದರು