ಮಂಡ್ಯ: ರಾಜ್ಯದಲ್ಲಿ ಸದ್ಯ ಕಾಂಗ್ರೆಸ್ ಮುಂಬರುವ ಲೋಕಸಭಾ ಚುನಾವಣೆಯನ್ನು ಟಾರ್ಗೆಟ್ ಮಾಡಿದ್ದು, ಆಪರೇಷನ್ ಹಸ್ತಕ್ಕೆ ಕೈ ನಾಯಕರು ಮುಂದಾಗಿದ್ದಾರೆ ಎಂಬ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಜೋರಾಗಿ ಕೇಳಿ ಬರುತ್ತಿದೆ. ಅದೇ ರೀತಿ ಸಕ್ಕರೆನಾಡು ಮಂಡ್ಯದಲ್ಲಿ ಕಾಂಗ್ರೆಸ್ ತನ್ನ ಎಂಪಿ ಅಭ್ಯರ್ಥಿಗೆ ಜೆಡಿಎಸ್ ನಾಯಕನಿಗೆ ಗಾಳ ಹಾಕಲು ಆಪರೇಷನ್ಗೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಕರ್ನಾಟಕ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿದ ಹಾಗೆ ಕೇಂದ್ರದಲ್ಲೂ ಶತಾಯಗತಾಯ ಸಾರ್ವಭೌಮತ್ವ ಸಾಧಿಸಬೇಕು ಎಂಬ ಕನಸನ್ನು ಕಾಂಗ್ರೆಸ್ ಕಾಣುತ್ತಿದೆ. ಇನ್ನೇನು ಕೆಲವೇ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ರಾಷ್ಟçವ್ಯಾಪಿ ಜರುಗಲಿದೆ. ಈ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಹೆಚ್ಚು ಸೀಟ್ಗಳನ್ನು ಗೆಲ್ಲಿಸಿ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡಬೇಕೆಂದು ರಾಜ್ಯ ಕೈ ನಾಯಕರು ಸರ್ಕಸ್ ಮಾಡುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ಹಾಗೂ ಜೆಡಿಎಸ್ ನಾಯಕರನ್ನು ಕರೆತಂದು ಎಂಪಿ ಅಭ್ಯರ್ಥಿಯನ್ನಾಗಿ ಮಾಡಿ ಗೆಲುವು ಸಾಧಿಸಬೇಕು ಎಂಬ ಲೆಕ್ಕಾಚಾರ ಹೇಳಿಕೊಂಡಿದ್ದಾರೆ. ಸದ್ಯ ಸಕ್ಕರೆನಾಡು ಮಂಡ್ಯದಲ್ಲಿ ಕಾಂಗ್ರೆಸ್ಗೆ ಸೂಕ್ತ ಎಂಪಿ ಅಭ್ಯರ್ಥಿ ಇಲ್ಲ. ಅಭ್ಯರ್ಥಿ ಇಲ್ಲದ ಕಾರಣ ಜೆಡಿಎಸ್ನ ನಾಯಕನೊಬ್ಬನನ್ನು ಕರೆತಂದು ಅಭ್ಯರ್ಥಿ ಮಾಡುವ ಯೋಜನೆಯನ್ನು ಕೈ ನಾಯಕರು ಮಾಡುತ್ತಿದ್ದಾರೆ.
ಸದ್ಯ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಹಾಗೂ ರಾಜಕೀಯ ಮುಖಂಡರ ಪೈಕಿ ಪ್ರಭಾವಿ ನಾಯಕ ಅಂದರೆ ಮಾಜಿ ಸಚಿವ ಹಾಗೂ ಮೇಲುಕೋಟೆ ಕ್ಷೇತ್ರದ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು. ಪುಟ್ಟರಾಜು ಅವರನ್ನ ಕಾಂಗ್ರೆಸ್ಗೆ ಕರೆತಂದು ಎಂಪಿ ಅಭ್ಯರ್ಥಿಯನ್ನಾಗಿ ಮಾಡಿ ಗೆಲ್ಲಿಸುವುದು ಸುಲಭವಾಗಿದೆ. ಹೀಗಾಗಿ ಕಾಂಗ್ರೆಸ್ ನಾಯಕರು ಜೆಡಿಎಸ್ ನಾಯಕನಾದ ಪುಟ್ಟರಾಜುರನ್ನ ಕಾಂಗ್ರೆಸ್ಗೆ ಸೇರಿಸಿಕೊಳ್ಳುವ ಆಪರೇಷನ್ಗೆ ಕೈ ಹಾಕುವ ಪ್ರಯತ್ನದಲ್ಲಿ ಕೈ ನಾಯಕರು ಇದ್ದಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿ ಬಂದಿವೆ. ಇದಕ್ಕೆ ಉದಾಹರಣೆ ಎಂಬAತೆ ಸಚಿವ ಚಲುವರಾಯಸ್ವಾಮಿ ಹೇಳಿಕೆ ಮತ್ತಷ್ಟು ಪುಷ್ಟಿ ನೀಡಿದೆ. ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ನ ಮಾಜಿ ಶಾಸಕರು ಕಾಂಗ್ರೆಸ್ಗೆ ಬರಲಿದ್ದಾರೆ. ಕೆಲ ದಿನಗಳಲ್ಲಿ ಅದು ಬಹಿರಂಗವಾಗುತ್ತದೆ. ನಾನು ಈಗ ಬರುವವರ ಹೆಸರನ್ನು ಹೇಳಲ್ಲ ಎನ್ನುವ ಮೂಲಕ ಚಲುವರಾಯಸ್ವಾಮಿ ರಾಜಕೀಯದ ಸಸ್ಪೆನ್ಸ್ ಸ್ಟೋರಿಗೆ ಒಂದು ಟ್ವಿಸ್ಟ್ ನೀಡಿದ್ದಾರೆ.
ಒಂದು ಕಡೆ ಚಲುವರಾಯಸ್ವಾಮಿ ಜೆಡಿಎಸ್ ಮಾಜಿ ಶಾಸಕರು ಕಾಂಗ್ರೆಸ್ಗೆ ಬರುತ್ತಾರೆ ನೋಡುತ್ತಿರಿ ಎಂದು ಹೇಳಿದ್ದಾರೆ. ಇನ್ನೊಂದೆಡೆ ಮಾಜಿ ಸಚಿವ ಪುಟ್ಟರಾಜುಗೆ ಕಾಂಗ್ರೆಸ್ ಗಾಳ ಹಾಕಲು ಯತ್ನ ಮಾಡುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಪುಟ್ಟರಾಜು ಅವರನ್ನ ಸಂಪರ್ಕ ಮಾಡಿ ಈ ಬಗ್ಗೆ ಕೇಳಿದರೆ, ಈ ಬಗ್ಗೆ ನಂಗೆ ಏನು ಗೊತ್ತಿಲ್ಲ. ಅವರು ಹೇಳುವುದು ನಿಜವಲ್ಲ. ನಾನು ಈ ಬಗ್ಗೆ ಮಾತನಾಡಲ್ಲ ಎನ್ನುತ್ತಾರೆ
ಪುಟ್ಟರಾಜುಗೆ `ಕೈ’ ನಾಯಕರಿಂದ ಗಾಳ
