ಚಾವ್ಮರಾಜನಗರ -ಇದೇ 9 ರಂದು ದೇಶದ ಪ್ರಧಾನಿ ನರೇಂದ್ರ ಮೋದಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ಭೇಟಿ ಕೊಡಲಿದ್ದು ಕ್ಷಣಗಣನೆ ಆರಂಭವಾಗಿದೆ.
ಮೈಸೂರಿನಲ್ಲಿ ಏ. 8 ರಂದು ಬಂದು ವಾಸ್ತವ್ಯ ಹೂಡಲಿರುವ ಮೋದಿ 9 ರ ಬೆಳಗ್ಗೆ ಬಂಡೀಪುರಕ್ಕೆ ಹೆಲಿಕಾಪ್ಟರ್ನಲ್ಲಿ ಬಂದು ಬಳಿಕ ಅರಣ್ಯ ಇಲಾಖೆಯ ಜೀಪಿನಲ್ಲಿ ಅಂದು ಬೆಳಗ್ಗೆ ಅಂದಾಜು 15 ಕಿಮೀ ವನ್ಯಜೀವಿ ಸಫಾರಿ ನಡೆಸಿ ಸೋಲಿಗರೊಂದಿಗೆ ಸಂವಾದ ನಡೆಸಲಿದ್ದಾರೆ.
ನಂತರ ಬಂಡೀಪುರದ ಬೋಳಗುಡ್ಡ ಎಂಬ ಕಳ್ಳಬೇಟೆ ತಡೆ ಶಿಬಿರಕ್ಕೆ ಪ್ರಧಾನಿ ಭೇಟಿ ಕೊಡಲಿದ್ದು ವಿಸ್ತಾರವಾದ ಅರಣ್ಯ ಪ್ರದೇಶ, ಸ್ವಚ್ಛಂದವಾಗಿ ವಿಹರಿಸುವ ವನ್ಯಜೀವಿಗಳನ್ನು ಕಣ್ತುಂಬಿಕೊಳ್ಳಲಿದ್ದಾರೆ.
ಈಗಾಗಲೇ ಮೂರು ಹೆಲಿಕ್ಯಾಪ್ಟರ್ಗಳಿಗೆ ಕಾಂಕ್ರೀಟ್ ನಿರ್ಮಿತ ಹೆಲಿಪ್ಯಾಡ್ ನಿರ್ಮಿಸಿ ಟ್ರಯಲ್ ಸಹ ನಡೆಸಲಾಗುತ್ತಿದೆ. ಇಡೀ ಜಿಲ್ಲಾಡಳಿತವೇ ಸ್ಥಳದಲ್ಲಿದ್ದು, ಬಂಡೀಪುರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಅಷ್ಟೇ ಅಲ್ಲದೇ ಎಲ್ಲಾ ರೆಸಾರ್ಟ್ಗಳನ್ನು ಮೂರು ದಿನಗಳ ಬಂದ್ ಮಾಡಿ, ಸಫಾರಿ ಸಹ ರದ್ದು ಮಾಡಿದ್ದಾರೆ. ಬಂಡೀಪುರ ಮೂಲಕ ಹಾದುಹೋಗುವ ಎರಡು ಹೆದ್ದಾರಿ ಸಹ ಬಂದ್ ಮಾಡಿರುವ ಅಧಿಕಾರಿಗಳು ಎಲ್ಲಾ ರೀತಿ ಮುನ್ನೆಚ್ಚರಿಕೆ ಕ್ರಮವಹಿಸಿದ್ದಾರೆ.
ಚಾಯ್ ವಾಲ ಪ್ರಧಾನಿಗೆ ವಿಶೇಷ ಟೀ: ಚಿಕ್ಕಂದಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಚಹಾ ಮಾರುತ್ತಿದುದು ಎಲ್ಲರಿಗೂ ತಿಳಿದ ವಿಚಾರ. ಬಂಡೀಪುರಕ್ಕೆ ಪ್ರಧಾನಿ ಭೇಟಿ ನೀಡಿದ ವೇಳೆ ದನ್ನಟ್ಟಿ ಹಳ್ಳ ಎಂಬ ಕ್ಯಾಂಪಿನಲ್ಲಿ ಅರಣ್ಯ ವೀಕ್ಷಕರು ವಿಶೇಷವಾಗಿ ಸೋಲಿಗರು ತಯಾರಿಸುವ ಕಪ್ಪು ಚಹಾವನ್ನು ಸೇವಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಾಲು ಹಾಕದಿರುವ ಅಂತರ್ಜಲ, ನಿಂಬೆ ಹುಲ್ಲು, ಬೆಲ್ಲ ಹಾಕಿ ಮಾಡುವ ಟೀ ರುಚಿಯನ್ನು ಮೋದಿ ಅವರಿಗೆ ತೋರಿಸಬೇಕೆಂದು ಅರಣ್ಯ ಇಲಾಖೆ ಪ್ಲಾನ್ ಮಾಡಿಕೊಂಡಿದೆ.
ಬಂಡೀಪುರ, ಮಧುಮಲೈನಲ್ಲಿ ಖಾಕಿ ಹೈ ಅಲರ್ಟ್: ಕರ್ನಾಟಕದ ಬಂಡೀಪುರದ ನಂತರ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಡಲಿದ್ದು ಈಗಾಗಲೇ ಎಸ್ಪಿಜಿ ತಂಡ ತನ್ನ ಕರ್ತವ್ಯ ಆರಂಭಿಸಿದೆ.
ಏ.8 ರ ರಾತ್ರಿಯೇ ಪ್ರಧಾನಿ ಮೋದಿ ಮೈಸೂರಿಗೆ ಬಂದು ವಾಸ್ತವ್ಯ ಮಾಡಲಿದ್ದು ಏ.9 ರ ಬೆಳಗ್ಗೆ ಬಂಡೀಪುರಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿ ಸಫಾರಿ ನಡೆಸಲಿದ್ದಾರೆ. ಅದಾದ ನಂತರ, ರಾಂಪುರ ಆನೆ ಶಿಬಿರದ ಮಾವುತರ ಜೊತೆ ಸಂವಾದ ನಡೆಸಿ ತಮಿಳುನಾಡಿನ ಮಧುಮಲೈ ಹುಲಿ ರಕ್ಷಿತಾರಣ್ಯದಲ್ಲಿನ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ಕೊಡಲಿದ್ದಾರೆ.
ಮೋದಿ ಕಾಣಲು ಬೊಮ್ಮ-ಬೆಳ್ಳಿ ಕಾತರ : ಕಿರುಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದದ ಎಲಿಫ್ಯಾಂಟ್ ವಿಸ್ಪರರ್ಸ್ನ ನಿಜ ಪಾತ್ರಧಾರಿಗಳಾದ ಬೊಮ್ಮ ಹಾಗೂ ಬೆಳ್ಳಿ ದಂಪತಿಯನ್ನು ಸನ್ಮಾನಿಸಲಿದ್ದಾರೆ.
ಬಂಡೀಪುರದಲ್ಲಿ ಎಲ್ಲಿಲ್ಲದ ಸಂತಸ : ವಿದ್ಯುತ್ ಶಾಕಿನಿಂದ ಒದ್ದಾಡುತ್ತಿದ್ದ ಆನೆಯನ್ನು ಬದುಕಿಸಿದ್ದ ಅರಣ್ಯ ಇಲಾಖೆ ಕ್ರಮವನ್ನು ಟ್ಬೀಟ್ ಮೂಲಕ ಪ್ರಶಂಸಿದ್ದ ಪ್ರಧಾನಿ ಈಗ ಸ್ವತಃ ಬಂದು ಅಭಿನಂದನೆ ಸಲ್ಲಿಸುತ್ತಿರುವುದರಿಂದ ಬಂಡೀಪುರ ಅರಣ್ಯ ಇಲಾಖೆಯಲ್ಲಿ ಸಂತಸ ಮನೆ ಮಾಡಿದೆ. ಆನೆ ಉಳಿಸಲು ಶ್ರಮ ವಹಿಸಿದ್ದ ಸಿಬ್ಬಂದಿ ಮೋದಿ ಅವರಿಂದ ಸ್ಮರಣಿಕೆಗಳನ್ನೂ ಪಡೆಯಲಿದ್ದಾರೆ.
ಒಟ್ಟಾರೆ ವಿಶ್ವಗುರು ಎನ್ನಿಸಿಕೊಂಡಿರುವ ಪ್ರಧಾನಿಮೋದಿ ಭೇಟಿಗೆ ಚಾಮರಾಜನಗರ ಜಿಲ್ಲೆ ಸಕಲ ಸಿದ್ದತೆ ಮಾಡಿಕೊಂಡಿದ್ದು, ಆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರವಹಿಸಿದ್ದಾರೆ.
ಬಂಡೀಪುರದAತೆ ನೀಲಗಿರಿ ಪೊಲೀಸರು ಕೂಡ ಹೈ ಅಲರ್ಟ್ ಘೋಷಿಸಿದ್ದು ಭದ್ರತೆ ಸಂಬAಧ ಕರ್ನಾಟಕ ಮತ್ತು ತಮಿಳುನಾಡು ಪೊಲೀಸರು ಈಗಾಗಾಲೇ ಜಂಟಿ ಸಭೆಯನ್ನು ನಡೆಸಿ ಬಂಡೀಪುರದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಮಧುಮಲೈ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿನ ಎಲ್ಲಾ ಲಾಡ್ಜ್, ರೆಸಾರ್ಟ್ಗಳನ್ನು ಬಂದ್ ಮಾಡಲಾಗಿದ್ದು ಯಾವುದೇ ಭದ್ರತಾ ಲೋಪವಾಗದಂತೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.