ನವದೆಹಲಿ: ನಿರಂತರವಾಗಿ ರೆಪೋ ದರವನ್ನು ಏರಿಕೆ ಮಾಡಿದ್ದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಈ ಎಂಪಿಸಿ ಸಭೆಯ ಬಳಿಕ ರೆಪೋ ದರವನ್ನು ಸ್ಥಿರವಾಗಿರಿಸಿದೆ. ಆರ್ಬಿಐ ರೆಪೋ ದರವನ್ನು ಫೆಬ್ರವರಿಯಲ್ಲಿ 25 ಮೂಲಾಂಕ ಏರಿಕೆ ಮಾಡಿದ್ದು, ದರವು ಶೇಕಡ 6.50ಕ್ಕೆ ತಲುಪಿದೆ.
ಈಗ ಆ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಈ ಹಿಂದೆ ಒಟ್ಟು 6 ಬಾರಿ ಆರ್ಬಿಐ ರೆಪೋ ದರ ಪರಿಷ್ಕರಣೆ ಮಾಡಿದೆ. 7ನೇ ಬಾರಿಗೆ ಆರ್ಬಿಐ ರೆಪೋ ದರವನ್ನು 25 ಬಿಪಿಎಸ್ ಏರಿಕೆ ಮಾಡಬಹುದು ಎಂಬುವುದು ತಜ್ಞರ ಅಭಿಪ್ರಾಯವಾಗಿತ್ತು. ಆದರೆ ಆರ್ಬಿಐ ರೆಪೋ ದರವನ್ನು ಸ್ಥಿರವಾಗಿಸಿದೆ. ದೇಶದಲ್ಲಿ ಹಣದುಬ್ಬರವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಆರ್ಬಿಐ ಈ ಕ್ರಮವನ್ನು ಕೈಗೊಳ್ಳುತ್ತಿದೆ. 2022ರ ಏಪ್ರಿಲ್ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಸತತ 10 ಬಾರಿಯೂ ರೆಪೋ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿತ್ತು. ಆದರೆ ಹಣದುಬ್ಬರವನ್ನು ನಿಯಂತ್ರಣ ಮಾಡುವ ಪ್ರಯತ್ನದಲ್ಲಿ 2022ರ ಮೇ ತಿಂಗಳಿನಲ್ಲಿ ಆರ್ಬಿಐ ರೆಪೋ ದರವನ್ನು 40 ಮೂಲಾಂಕ ಕೂಡಲೇ ಜಾರಿಗೆ ಬರುವಂತೆ ಏರಿಕೆ ಮಾಡಿತ್ತು. ಅದಾದ ಬಳಿಕ ನಿರಂತರವಾಗಿ ದರ ಹೆಚ್ಚಿಸುತ್ತಾ ಬಂದಿದೆ.