ಬಳ್ಳಾರಿ: ತೀವ್ರ ಕಾರು ಅಪಘಾತದಿಂದ ಡಿಸೆಂಬರ್ 2022 ರಿಂದ ತಂಡದಿಂದ ಹೊರಗುಳಿದಿದ್ದ ಟೀಂ ಇಂಡಿಯಾ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್ ಬಳ್ಳಾರಿಯಲ್ಲಿ ಬ್ಯಾಟ್ ಹಿಡಿದಿದ್ದಾರೆ.
ಅಭಿಮಾನಿಯೊಬ್ಬರು ಪಂತ್ ಅವರ ಅಭ್ಯಾಸದ ವೇಳೆ ಬ್ಯಾಟಿಂಗ್ ವೀಡಿಯೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಅವರು ಜು.21 ರಿಂದಲೇ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿರುವ ಪಂತ್ ಬಳ್ಳಾರಿಯಲ್ಲಿ ಕ್ರಿಕೆಟ್ ಆಡಿದ್ದಾರೆ.
ವೀಡಿಯೋದಲ್ಲಿ ಪಂತ್ ಬ್ಯಾಟ್ ಹಿಡಿದು ಕ್ರೀಸ್ಗೆ ಆಗಮಿಸಿದಾಗ ಸೇರಿದ್ದ ಅಭಿಮಾನಿಗಳು ಹರ್ಷೋದ್ಗಾರಗಳಿಂದ ಸಂಭ್ರಮಿಸಿದ್ದಾರೆ. ಆಟದ ವೇಳೆ ಅವರ ಬ್ಯಾಟಿಂಗ್ ಶೈಲಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳ್ಳಾರಿಯ ವಿಜಯನಗರದಲ್ಲಿರುವ ಜಿಂದಾಲ್ ಘಟಕದಲ್ಲಿ ಪಂತ್ ಬ್ಯಾಟ್ ಬೀಸಿದ್ದಾರೆ. ಪಂತ್ ಜೆಎಸ್ಡಬ್ಲ್ಯೂ ಸ್ಪೋಟ್ರ್ಸ್ ರಾಯಭಾರಿಯಾಗಿದ್ದಾರೆ. ಜಾಹೀರಾತು ಕಾರಣಕ್ಕೆ ಪಂತ್ ಬಳ್ಳಾರಿಗೆ ಬಂದಿದ್ದಾರೆ ಎನ್ನಲಾಗಿದೆ.
ಪಂತ್ ಈ ವರ್ಷದ ಆರಂಭದಲ್ಲಿ ಸಂಭವಿಸಿದ್ದ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆ ನಂತರ ಚೇತರಿಸಿಕೊಂಡಿರುವ ಅವರು ವ್ಯಾಯಾಮ ಮತ್ತು ಓಟದ ಅಭ್ಯಾಸದಲ್ಲಿ ತೊಡಗಿದ್ದಾರೆ.
ಪಂತ್ ಅವರ ಅನುಪಸ್ಥಿತಿಯಲ್ಲಿ ಅವರ ಸ್ಥಾನವನ್ನು ಭರತ್ ಮತ್ತು ಇಶಾನ್ ಕಿಶನ್ ತುಂಬಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಪಂತ್ ಅವರ ಅನುಪಸ್ಥಿತಿಯು ಟೀಂ ಇಂಡಿಯಾಕ್ಕೆ ಬಹಳಷ್ಟು ನಷ್ಟ ಉಂಟು ಮಾಡಿದೆ. ಈ ಬಾರಿಯ ವಿಶ್ವಕಪ್ನಲ್ಲಿ ರಾಹುಲ್ ಮೊದಲ ಆಯ್ಕೆಯ ವಿಕೆಟ್ಕೀಪರ್-ಬ್ಯಾಟ್ಸ್ಮನ್ನ ಸ್ಥಾನವನ್ನು ಪಡೆಯುವ ಸಾಧ್ಯತೆಯಿದೆ. ಪಂತ್ ಅವರ ಅನುಪಸ್ಥಿತಿಯಲ್ಲಿ ರಾಹುಲ್ ಅವರ ಸಾಮಥ್ರ್ಯಗಳು ಮತ್ತು ಅನುಭವವು ಭರವಸೆಯನ್ನು ಒದಗಿಸಿದರೆ, ಎರಡನೇ ಆಯ್ಕೆ ಕೀಪರ್ ಆಗಿ ಇಶಾನ್ ಕಿಶನ್ ತಂಡದ ಭರವಸೆಯಾಗಿದ್ದಾರೆ.