ಬೆಳಗ್ಗಿನ ತಿಂಡಿ ಏನೇ ಇದ್ದರೂ ಬ್ಯಾಚುಲರ್ಸ್ ಹಾಗೂ ಈಗಿನ ಯುವಜನರಿಗೆ ಫಟಾಫಟ್ ಅಂತ ಆಗಬೇಕು. ಏನೇ ರೆಸಿಪಿ ಇದ್ದರೂ ಕಡಿಮೆ ಸಾಮಗ್ರಿ ಬಳಸಿ ಸುಲಭದಲ್ಲಿ ಮಾಡಬೇಕು. ಅಂತಹ ರೆಸಿಪಿಗಳಲ್ಲಿ ಅತ್ಯಂತ ಫೇಮಸ್ ಇರೋದೇ ಪ್ಯಾನ್ ಕೇಕ್. ಆದರೆ ಕೇವಲ ಮೈದಾ ಅಥವಾ ಗೋಧಿ ಹಿಟ್ಟು ಬಳಸಿ ಪ್ರತಿ ದಿನ ಪ್ಯಾನ್ ಕೇಕ್ ಮಾಡಿದರೆ ಯಾರಿಗೆ ತಾನೇ ಬೋರ್ ಎನಿಸಲ್ಲ? ಹಾಗಿದ್ರೆ ಇಂದು ಸ್ವಲ್ಪ ಡಿಫರೆಂಟ್ ಆಗಿ ಬಾದಾಮಿ ಹಿಟ್ಟಿನಿಂದ ರುಚಿಕರ ಪ್ಯಾನ್ ಕೇಕ್ ಮಾಡೋದು ಹೇಗೆಂದು ನೋಡೋಣ. ಇದು ಮಾಡೋದು ತುಂಬಾ ಸುಲಭವಾಗಿದ್ದು, ಬ್ಯಾಚುಲರ್ಸ್ಗಂತೂ ಹೇಳಿ ಮಾಡಿಸಿದ ರೆಸಿಪಿಯಾಗಿದೆ.
ಬೇಕಾಗುವ ಪದಾರ್ಥಗಳು:
ಬಾದಾಮಿ ಹಿಟ್ಟು – 2 ಕಪ್
ಮೈದಾ ಹಿಟ್ಟು – ಕಾಲು ಕಪ್
ಬೇಕಿಂಗ್ ಪೌಡರ್ – 2 ಟೀಸ್ಪೂನ್
ಉಪ್ಪು – ಅರ್ಧ ಟೀಸ್ಪೂನ್
ಸಕ್ಕರೆ ಪುಡಿ – 2 ಟೀಸ್ಪೂನ್
ಮೊಟ್ಟೆ – 2
ಬೆಣ್ಣೆ – 2 ಟೀಸ್ಪೂನ್
ಹಾಲು – 1 ಕಪ್
ವೆನಿಲ್ಲಾ ಸಾರ – 1 ಟೀಸ್ಪೂನ್
ಮಾಡುವ ವಿಧಾನ:
* ಮೊದಲಿಗೆ ಒಂದು ಮಿಕ್ಸಿಂಗ್ ಬೌಲ್ನಲ್ಲಿ ಬಾದಾಮಿ ಹಿಟ್ಟು, ಮೈದಾ, ಬೇಕಿಂಗ್ ಪೌಡರ್, ಉಪ್ಪು, ಸಕ್ಕರೆ ಪುಡಿ ಹಾಕಿ ಮಿಶ್ರಣ ಮಾಡಿ ಅದನ್ನು ಪಕ್ಕಕ್ಕಿಡಿ.
* ಇನ್ನೊಂದು ಬೌಲ್ನಲ್ಲಿ ಮೊಟ್ಟೆ, ಕರಗಿಸಿದ ಬೆಣ್ಣೆ, ಹಾಲು ಹಾಗೂ ವೆನಿಲ್ಲಾ ಸಾರ ಹಾಕಿ ಮಿಶ್ರಣ ಮಾಡಿ.
* ಈಗ ಹಿಟ್ಟಿನ ಮಿಶ್ರಣಕ್ಕೆ ಮೊಟ್ಟೆಯ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಹಿಟ್ಟಿಗೆ 10 ನಿಮಿಷ ವಿಶ್ರಾಂತಿ ನೀಡಿ.
* ಈಗ ಪ್ಯಾನ್ ಅನ್ನು ಬಿಸಿ ಮಾಡಿ, ಅದರಲ್ಲಿ ಸುಮಾರು 3 ಟೀಸ್ಪೂನ್ ಹಿಟ್ಟು ಸುರಿದು ಮಧ್ಯಮ ಉರಿಯಲ್ಲಿ 1-2 ನಿಮಿಷ ಬೇಯಿಸಿಕೊಳ್ಳಿ.
* ಪ್ಯಾನ್ ಕೇಕ್ನ ತಳ ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಅದನ್ನು ತಿರುವಿ ಹಾಕಿ ಮತ್ತೆ 1-2 ನಿಮಿಷ ಬೇಯಿಸಿಕೊಳ್ಳಿ.
* ಹೀಗೆ ಎಲ್ಲಾ ಹಿಟ್ಟನ್ನು ಪ್ಯಾನ್ ಕೇಕ್ಗಳಾಗಿ ತಯಾರಿಸಿ.
* ಈಗ ಬಾದಾಮಿ ಹಿಟ್ಟಿನ ಪ್ಯಾನ್ ಕೇಕ್ ತಯಾರಾಗಿದ್ದು, ಬಿಸಿಬಿಸಿಯಾಗಿ ಬೆಣ್ಣೆಯೊಂದಿಗೆ ಸವಿಯಿರಿ.