ಮೈಸೂರು:- ರಾಜ್ಯದ ಕೆಲವು ಬಿಜೆಪಿ ನಾಯಕರು ಸಿದ್ದರಾಮಯ್ಯ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಗಂಭೀರವಾದ ಆರೋಪ ಮಾಡಿದ್ದಾರೆ. ಮೈಸೂರು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತಮ್ಮ ಪಕ್ಷದ ನಾಯಕರ ವಿರುದ್ಧವೇ ಕಿಡಿಕಾರಿದರು.
“ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ನ ಕೆಲವು ನಾಯಕರು ಪರಸ್ಪರ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ. ಯಾರ ಮೇಲೆ ಯಾರೂ ಆರೋಪ ಮಾಡದಂತೆ ಒಪ್ಪಂದ ಮಾಡಿಕೊಂಡಿರುವಂತೆ ವರ್ತಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಜೊತೆ ಬಿಜೆಪಿಯ ಹಿರಿಯ ನಾಯಕರೇ ಶಾಮೀಲಾಗಿರಬಹುದು” ಎಂದು ಪ್ರತಾಪ್ ಸಿಂಹ ಆರೋಪ ಮಾಡಿದ್ದಾರೆ.
“ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಪರಸ್ಪರ ಹೊಂದಾಣಿಕೆ ಮಾಡಿಕೊಂಡಿರುವಂತೆ ಕಾಣುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದಾಗ ಅರ್ಕಾವತಿ ಹಗರಣ, ಡಿ ನೋಟಿಫಿಕೇಶನ್, ಕೆಂಪಣ್ಣ ಆಯೋಗದ ವರದಿ ಮುಂತಾದ ಪ್ರಕರಣಗಳನ್ನು ಮುಂದಿಟ್ಟು ಕಾಂಗ್ರೆಸ್ ನಾಯಕರನ್ನು ಹೆದರಿಸುವ ಕೆಲಸ ಮಾಡುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಆಡಳಿತದ ಅವಧಿಯಲ್ಲಿ ಕೇಳಿ ಬಂದಿರುವ ಆರೋಪಗಳ ಬಗ್ಗೆ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳುವ ಬೆದರಿಕೆ ಹಾಕುತ್ತಾರೆ. ಅವರ ವಿರುದ್ಧ ಇವರು ತನಿಖೆ ಮಾಡಲ್ಲ, ಇವರ ವಿರುದ್ಧ ಅವರೂ ತನಿಖೆ ಮಾಡಲ್ಲ, ಇದನ್ನು ನೋಡುತ್ತಿದ್ದರೆ, ಎರಡೂ ಪಕ್ಷದ ಹಿರಿಯ ನಾಯಕರು ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎನ್ನುವ ಅನುಮಾನ ಮೂಡುತ್ತಿದೆ” ಎಂದು ಹೇಳಿದ್ದಾರೆ.
ಹಿರಿಯ ನಾಯಕರ ವಿರುದ್ಧ ಪ್ರತಾಪ
ಮಾತು ಮುಂದುವರೆಸಿದ ಅವರು, “ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿ ಬಿಜೆಪಿಯವರನ್ನು ಹೆದರಿಸುತ್ತದೆ. ನಮ್ಮವರು ಅಧಿಕಾರಕ್ಕೆ ಬಂದಾಗ ನಿಮ್ಮನ್ನು ಹೆದರಿಸುತ್ತಾರೆ. ಇದೆಲ್ಲವೂ ಹೊಂದಾಣಿಕೆ ರಾಜಕಾರಣ ಇರಬಹುದೇ” ಎಂದು ಪ್ರಶ್ನೆ ಮಾಡಿದ್ದಾರೆ.
“ನಿನಗೆ ತುರಿಕೆಯಾದರೆ ನಾನು ನಿನ್ನ ಬೆನ್ನು ಕೆರೆಯುತ್ತೇನೆ, ನನಗೆ ತುರಿಕೆಯಾದಾಗ ನೀನು ನನ್ನ ಬೆನ್ನು ಕೆರಿ ಎನ್ನುವಂತಹ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎನಿಸುತ್ತದೆ. ನಮ್ಮ ಪಕ್ಷದ ಕಾರ್ಯಕರ್ತರು ಎಂದೂ ಹೀಗೆ ಹೊಂದಾಣಿಕೆ ರಾಜಕಾರಣ ಮಾಡಲ್ಲ, ಕೆಲವು ಹಿರಿಯ ನಾಯಕರೇ ಇಂತ ಕೆಲಸ ಮಾಡೋದು” ಎಂದು ಅಸಮಾಧಾನ ಹೊರಹಾಕಿದ್ದಾರೆ.
ಯಾವ ನಾಯಕರ ವಿರುದ್ಧ ಅಸಮಾಧಾನ?
ಚುನಾವಣೆಗೆ ಮುನ್ನ ಕಾಂಗ್ರೆಸ್ ವಿರುದ್ಧ ರೋಷಾವೇಶದ ಭಾಷಣ ಮಾಡುತ್ತಿದ್ದ ಹಲವು ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸೈಲೆಂಟ್ ಆಗಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳನ್ನು ಜಾರಿ ಮಾಡಲು ಷರತ್ತುಗಳನ್ನು ವಿಧಿಸಿದಾಗ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ ಯತ್ನಾಳ್ ಮಾತ್ರ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ, ಸಿಟಿ ರವಿ, ಪ್ರತಾಪ್ ಸಿಂಹ ಸರ್ಕಾರವನ್ನು ಪ್ರಶ್ನೆ ಮಾಡುತ್ತಿದ್ದರೂ ಹಲವು ಹಿರಿಯ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತನಾಡದಿರುವುದು ಕೋಪಕ್ಕೆ ಕಾರಣವಾಗಿದೆ.