ಮಂಡ್ಯ:ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನೂ ಒಬ್ಬ ಬಿಜೆಪಿ ಪ್ರಬಲ ಆಕಾಂಕ್ಷಿತ ಅಭ್ಯರ್ಥಿಯಾಗಿದ್ದೇನೆ.ಬಿಜೆಪಿ ಪಕ್ಷದ ವರಿಷ್ಠರು ಮಂಡ್ಯ ಜಿಲ್ಲೆಯ ಯಾವುದೇ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಿ ಅವಕಾಶ ಮಾಡಿಕೊಟ್ಟರೆ ಸ್ಪರ್ಧೆ ಮಾಡುತ್ತೇನೆ ಇಲ್ಲದಿದ್ದಲ್ಲಿ ಸಾಮಾನ್ಯ ಕಾರ್ಯಕರ್ತಳಾಗಿ ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ ಎಂದು ಸಮಾಜ ಸೇವಕಿ ಹಾಗೂ ಬಿಜೆಪಿ ಮುಖಂಡ ರಾದ ಪ್ರೇಮಾ ಯುವರಾಜ್ ತಿಳಿಸಿದರು.
ನಗರದ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ,ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿ
ಕೊಂಡಿದ್ದೇನೆ.ಕಳೆದ ಬಾರಿಯೂ ಮದ್ದೂರು ವಿಧಾನ ಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದು, ಈ ಬಾರಿಯೂ ವಿಧಾನಸಭಾ ಚುನಾವಣೆಯ ಆಕಾಂಕ್ಷಿಗಳಲ್ಲಿ ಒಬ್ಬಳಾಗಿದ್ದೇನೆ.ಪಕ್ಷ ನನಗೆ ಟಿಕೆಟ್ ನೀಡಿದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದರು.
ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಜಿಲ್ಲೆಯಲ್ಲಿ ಕನಿಷ್ಠ ಮೂರ್ನಾಲ್ಕು ಸ್ಥಾನಗಳನ್ನು ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದ ಅವರು,ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೆಲಸ ಮಾಡಲು ಖುಷಿಯಾಗುತ್ತದೆ.ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಮೋದಿಯವರು ಸರ್ವತೋಮುಖವಾಗಿ ಕೆಲಸ ಮಾಡಿ ಅಭಿವೃದ್ಧಿ ಪಡಿಸಿದ್ದಾರೆ.ಹಳ್ಳಿಗಳಲ್ಲಿ ಕಮಲ ಅರಳುತ್ತಿದೆ ಎಂದರು.
ನರೇಂದ್ರ ಮೋದಿಯವರ ನೇತೃತ್ವದಲ್ಲಿ ಆರ್ಥಿಕವಾಗಿ, ಕೈಗಾರಿಕವಾಗಿ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ.ಬಡತನದ ರೇಖೆಗಿಂತ ಕೆಳಗಿರುವವರು ಮುಂದೆ ಬರುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿಯಿಂದ ಜನರು ಬಿಜೆಪಿ ಪರವಾಗಿದ್ದಾರೆ.ಅದರಲ್ಲೂ ಯುವಜನರು ಹೆಚ್ಚಾಗಿ ಮೋದಿಯವರನ್ನು ಓಲೈಕೆ ಮಾಡುತ್ತಾರೆ.ಹಾಗಾಗಿ ಈ ಬಾರಿ ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಾರತ ದೇಶ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಡಿಜಿಟಲಿಕರಣಗೊಳ್ಳುತ್ತಿದೆ.ಡಿಜಿಟಲ್ ಒಂದು ರೀತಿಯ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತದೆ ಎಂದು ಹೇಳಿದರು.
ವ್ಯಾಪಾರಿ ಪ್ರಕೋಷ್ಠದಲ್ಲಿ ರಾಯಬಾರಿಯಾಗಿ ಕೆಲಸ ಮಾಡಿದ್ದೇನೆ.ಪ್ರಸ್ತುತ ಸಾಮಾನ್ಯ ಕಾರ್ಯಕರ್ತೆಯಾಗಿಯೂ ಕೆಲಸ ಮಾಡುತ್ತಿದ್ದೇನೆ.ಪಕ್ಷದ ವರಿಷ್ಠರು ನನ್ನನ್ನು ಗುರುತಿಸಿ ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ.ಇಲ್ಲದಿದ್ದರೆ ಪಕ್ಷ ಸಂಘಟನೆಗೆ ತೊಡಗಿಕೊಳ್ಳುತ್ತೇನೆ ಎಂದು ಹೇಳಿದರು.
ಸಾತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗೋಸಾಗಾಣೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ ಎಂಬುದು ಶುದ್ಧ ಸುಳ್ಳು.ಇದರಲ್ಲಿ ಕಾಣದ ಕೈಗಳು ಕೆಲಸ ಮಾಡಿವೆ.ಬಿಜೆಪಿಗೆ ಕೆಟ್ಟ ಹೆಸರು ತರುವ ನಿಟ್ಟಿನಲ್ಲಿ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಹೆತ್ತ ತಾಯಿ ಒಬ್ಬಳಾದರೆ,ನಿತ್ಯ ನಮಗೆ ಹಾಲುಣಿಸುವ ಗೋಮಾತೆ ಸಹ ತಾಯಿಗೆ ಸಮನಾದವಳು. ಇಂತಹ ಗೋಮಾತೆಯನ್ನು ಕಸಾಯಿಖಾನೆಗೆ ಸಾಗಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಗೋವುಗಳಿಗೆ ವಯಸ್ಸಾದರೆ ಕಸಾಯಿಖಾನೆಗೆ ಸಾಗಿಸುವುದನ್ನು ಬಿಟ್ಟು ಗೋಶಾಲೆಗೆ ಕೊಟ್ಟು ಬಿಡಿ, ಅದರ ಹೊಣೆಗಾರಿಕೆಯನ್ನು ಅವರು ನೋಡಿಕೊಳ್ಳುತ್ತಾರೆ.ಹಾಲುಂಡು ವಯಸ್ಸಾಯಿತು ಎಂಬ ಕಾರಣಕ್ಕೆ ಇಂತಹ ಧೋರಣೆ ಅನು
ಸರಿಸುವುದು ತರವಲ್ಲ ಎಂದು ಹೇಳಿದರು.
ಗೋಸಾಕಾಣಿಕೆ ಮಾಡುತ್ತಿದ್ದವನ ಮೇಲೆ ಪುನೀತ್ ಕೆರೆಹಳ್ಳಿ ಮತ್ತವರ ತಂಡ ಯಾವುದೇ ದಾಳಿಯನ್ನೂ ಮಾಡಿಲ್ಲ.ಉದ್ದೇಶಪೂರ್ವಕವಾಗಿ ಅವರನ್ನು ಸಿಲುಕಿಸುವ ಹುನ್ನಾರ ನಡೆದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ.ನಾ. ಸುರೇಶ್, ಮುಡಾ ನಿರ್ದೇಶಕ ಹನುಮಂತು, ನಗರಸಭಾ ಸದಸ್ಯ ಪ್ರಸನ್ನ, ಮುಖಂಡರಾದ ಬಿ.ಕೃಷ್ಣ, ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.