ಮೈಸೂರು: ನಗರದ ಕೃಷ್ಣರಾಜ, ಚಾಮರಾಜ ವಿಧಾನ ಸಭಾ ಕ್ಷೇತ್ರಗಳ ಅಭಿವೃದ್ಧಿ ಪರ್ವ ನಾಗಲೋಟದಲ್ಲಿದೆ. ಆದರೆ, ಪಕ್ಕದ ನರಸಿಂಹ ರಾಜ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಅಭಿವೃದ್ಧಿಯಿಂದ ವಂಚಿತವಾಗಿದೆ. ಈ ಕ್ಷೇತ್ರವೂ ಅಭಿವೃದ್ದಿ ಹೊಂದಬೇಕಾದರೆ, ಬಿಜೆಪಿ ಅಭ್ಯರ್ಥಿ ಈ ಬಾರಿ ಶಾಸಕರಾಗಿ ಆಯ್ಕೆಯಾಗಲು ಇಲ್ಲಿನ ಪ್ರಜ್ಞಾವಂತ ಮತದಾರರ ಸಂಕಲ್ಪ ತೊಡಬೇಕು ಎಂದು ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ ಕರೆ ನೀಡಿದರು.
ಮೈಸೂರು ಗಾಯತ್ರಿಪುರಂನಲ್ಲಿ ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕಳೆದೆರಡು ದಿನಗಳ ಹಿಂದೆ ಬೊಮ್ಮಾಯಿ ನೇತೃತ್ವದ ಬಿಜೆಪಿ ಮೀಸಲಾತಿ ವಿಚಾರದಲ್ಲಿ ಕ್ರಾಂತಿಕಾರಕ ನಿರ್ಧಾರ ಪ್ರಕಟಿಸಿದೆ. ಅನುಸೂಚಿತ ಜಾತಿಗೆ ಶೇ.15ರಿಂದ 17ಕ್ಕೆ, ಅನುಸೂಚಿತ ಪಂಗಡಕ್ಕೆ ಶೇ.3ರಿಂದ 7ಕ್ಕೆ ಏರಿಸಲಾಗಿತ್ತು. ಇದರಲ್ಲಿ ಎಸ್ಸಿ ಸಮುದಾಯದ ಹಲವು ವರ್ಷಗಳ ಬೇಡಿಕೆಯಾದ ಒಳ ಮಿಸಲಾತಿ ನೀಡಿ, ರಾಜ್ಯ ಸರ್ಕಾರ ಕ್ರಾಂತಿಕಾರಕ ನಿರ್ಧಾರ ಪ್ರಕಟಿಸಿದೆ. ಇದರ ಜೊತೆಗೆ ಲಿಂಗಾಯತ ಸಮುದಾಯಕ್ಕೆ ಶೇ.7ರಷ್ಟು, ಒಕ್ಕಲಿಗ ಸಮುದಾಯಕ್ಕೆ ಶೇ.6 ರಷ್ಟು ಹೆಚ್ಚಿಸಿದ್ದು, ಆಯಾಯ ಸಮುದಾಯಗಳ ಅಭಿವೃದ್ಧಿಗೆ ಪೂರಕವಾಗಿ ನಿರ್ಧರವನ್ನು ಬಿಜೆಪಿ ಸರ್ಕಾರ ಕೈಗೊಂಡಿದೆ ಎಂದರು.
ಮೈಸೂರು ನಗರದಲ್ಲಿ ಕೃಷ್ಣರಾಜ, ಚಾಮರಾಜ ಕ್ಷೇತ್ರಗಳು, ಹಲವು ವರ್ಷಗಳಿಂದ ಅಭಿವೃದ್ಧಿ ಹೊಂದುತ್ತಿವೆ.
ಪಕ್ಕದ ಕ್ಷೇತ್ರಗಳು ಅಭಿವೃದ್ಧಿ ಹೊಂದುತ್ತಿದ್ದರು ನಿಮ್ಮ ಕ್ಷೇತ್ರ ಮಾತ್ರ ಏಕೆ ಅಭಿವೃದ್ಧಿಯಾಗುತ್ತಿಲ್ಲ ಎಂದು ಒಮ್ಮೆ ಯೋಚಿಸಬೇಕು. ಎಸ್ಸಿ-ಎಸ್ಟಿ, ಒಬಿಸಿ ಮತ್ತು ಒಕ್ಕಲಿಗ, ಲಿಂಗಾಯತ ಸಮುದಾಯಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಸಿಗಬೇಕಾದ ಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆ. ಎನ್.ಆರ್.ಕ್ಷೇತ್ರದ ವಿಶೇಷ ಮುತವರ್ಜಿ ವಹಿಸಿ, ಕೇಂದ್ರ ಸರ್ಕಾರದ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿ ಕೆಡಿಪಿ ಸಭೆಯಲ್ಲಿ ಈ ಬಗ್ಗೆ ವಿಚಾರಿಸಿದರೆ, ಸರಿಯಾದ ಮಾಹಿತಿ ಲಭ್ಯವಿಲ್ಲ ಎನ್ನುತ್ತಾರೆ ಪರಿಸ್ಥಿತಿ ಎಳೆಎಳೆಯಾಗಿ ವಿವರಿಸಿದರು.
ಶಾಸಕ ಎಸ್.ಎ.ರಾಮದಾಸ್: ನಮ್ಮ ಕ್ಷೇತ್ರದಲ್ಲಿ ಎಲ್ಲಾ ವರ್ಗಗಳಿಗೂ ರಾಜ್ಯ ಮತ್ತು ಕೇಂದ್ರ ಸರ್ಕಾರ ಸವಲತ್ತುಗಳನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಆದರೆ, ಎನ್.ಆರ್.ಕ್ಷೇತ್ರದ ಹಲವು ಮತದಾರರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸವಲತ್ತುಗಳನ್ನು ಸಿಗುತ್ತಿಲ್ಲ ನಮ್ಮ ಬಳಿ ಬಂದು ಅಲವತ್ತುಕೊಳ್ಳುತ್ತಿದ್ದಾರೆ. ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ ಕಾರ್ಡ್ ಸೇರಿದಂತೆ ಇತರೆ ಸವಲತ್ತುಗಳಿಂದ ವಂಚಿತರಾಗುತ್ತಿರುವ ಬಗ್ಗೆ ನಮ್ಮ ಕಾರ್ಯಕರ್ತರಿಂದ ಮಾಹಿತಿ ಬಂದಿದೆ. ಅಂತೆಯೇ ಇಲ್ಲಿನ ಹಲವು ರಸ್ತೆಗಳು ಗುಂಡಿ ಮಯವಾಗಿದ್ದು, ಓಡಾಡಲು ಇಲ್ಲಿನ ಜನರು ದಿನನಿತ್ಯ ಕಷ್ಟಪಡುವ ಸ್ಥಿತಿ ಬಂದಿದೆ. ಒಟ್ಟಿನಲ್ಲಿ ಅಭಿವೃದ್ಧಿಯಿಂದ ಎನ್.ಆರ್.ಕ್ಷೇತ್ರ ವಂಚಿತವಾಗಿದೆ ಎಂದರೆ ತಪ್ಪಾಗಲಾರದು. ಹಾಗಾಗಿ ಈ ಕ್ಷೇತ್ರದ ಅಭಿವೃದ್ಧಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವ ಪಣತೊಡಬೇಕು ಎಂದರು.
ಶಾಸಕ ಎಲ್.ನಾಗೇಂದ್ರ: ನನ್ನ ಕ್ಷೇತ್ರದಲ್ಲಿ ದಿನನಿತ್ಯ ಮತದಾರರ ಕಷ್ಟಗಳಿಗೆ ಸ್ಪಂದಿಸುತ್ತ, ರಸ್ತೆ, ಚರಂಡಿ, ಯುಜಿಡಿ ಸಂಪರ್ಕ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳನ್ನು ತ್ವರಿತವಾಗಿ ಹಮ್ಮಿಕೊಂಡು ಕೆಲಸ ನಿರ್ವಹಿಸುತ್ತಿದ್ದೇನೆ. ಈ ಕ್ಷೇತ್ರದ ರಸ್ತೆಗಳು ಗುಂಡಿಮಯವಾಗಿದ್ದು, ಅಭಿವೃದ್ಧಿ ಮರಿಚುಕ್ಕಿಯಾಗಿದೆ ಎಂದು ಬೇಸರ ಹೊರಹಾಕಿದರಲ್ಲದೆ, 2023ರ ಚುನಾವಣೆಯಲ್ಲಿ ಅಭಿವೃದ್ಧಿ ಪರವಾಗಿ ಶಾಸಕರನ್ನು ಗೆಲ್ಲಿಸಲು ಮತ್ತು ತಮ್ಮ ಕುಟುಂಬಗಳ ಸುರಕ್ಷೆ ಕಾಪಾಡುವ ಜನಪ್ರತಿನಿಧಿ ಗೆಲ್ಲಿಸಲು ಪಣತೊಡಬೇಕು ಎಂದು ಮನವಿ ಮಾಡಿದರು.
ಅರಗು ಮತ್ತು ಬಣ್ಣದ ಕಾರ್ಖಾನೆಯ ಅಧ್ಯಕ್ಷ ರಘು ಆರ್.ಕೌಟಿಲ್ಯ ಹೇಳಿಕೆ: ಒಬಿಸಿ ಕುಲಕಸುಬುಗಳಿಗೆ ಉತ್ತೇಜಿಸುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೊಳಿಸಿವೆ. ಇದರ ಸದುಪದಯೋಗ ಪಡೆಯಲು ಎನ್.ಆರ್.ಕ್ಷೇತ್ರದ ಹಿಂದುಳಿದ, ಎಸ್ಸಿ-ಎಸ್ಟಿ ಸಮುದಾಯ ಮುಂದಾಗಬೇಕು. ಸ್ವ ಉದ್ಯೋಗ ಕಲ್ಪಿಸಲು ಕೇಂದ್ರ ಸರ್ಕಾರ ಮುದ್ರಾ ಯೋಜನೆ ಜಾರಿಗೆ ತಂದಿದೆ, ಅಲ್ಲದೆ, ರಾಜ್ಯ ಸರ್ಕಾರ ದೀನ-ದಲಿತರ ಏಳಿಗೆಗೆ ಮೀಸಲಾತಿ ಹೆಚ್ಚಳ, ಮರು ವರ್ಗೀಕರಣ ಮಾಡಿದೆ. ಅಂತೆಯೇ ಇಷ್ಟು ದಿನ ಎಸ್ಸಿ-ಎಸ್ಟಿ ಮತ್ತು ಒಬಿಸಿ ಸಮುದಾಯದ ಏಳಿಗೆಗೆ ಯಾವುದೇ ಯೋಜನೆಯನ್ನು ಕಾಂಗ್ರೆಸ್ ರೂಪಿಸಿಲ್ಲ. ಹಾಗಾಗಿ ಈ ವೇದಿಕೆ ಮೇಲಿರುವ ಎಲ್ಲಾ ಜನಪ್ರತಿನಿಧಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಂತೆ ಎನ್.ಆರ್.ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಎಲ್ಲರೂ ಪಣತೊಡಬೇಕು ಎಂದು ಕಾರ್ಯಕರ್ತರನ್ನು ಉರಿದುಂಬಿಸಿದರು.
ಮಾಜಿ ಮೇಯರ್ ಹಾಗೂ ಬಿಜೆಪಿ ಮುಖಂಡ ಸಂದೇಶ್ ಸ್ವಾಮಿ ಹೇಳಿಕೆ: ರಾಜ್ಯದ ಪ್ರತಿಯೊಬ್ಬ ನಾಗರಿಕರ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದರೂ ಎನ್.ಆರ್.ಕ್ಷೇತ್ರದಲ್ಲಿ ಸರ್ಕಾರದ ಯೋಜನೆಗಳು ಸರಿಯಾಗಿ ಅನುಷ್ಠಾನವಾಗುತ್ತಿಲ್ಲ. ಅದರಲ್ಲೂ ಒಬಿಸಿ ಸಮುದಾಯಕ್ಕೆ ಸಿಗಬೇಕಾದ ಸವಲತ್ತು ಸಿಗುತ್ತಿಲ್ಲ. ಹಾಗಾಗಿ ಒಬಿಸಿ ಸಮುದಾಯ ಈ ಬಾರಿ ಪಣ ತೊಟ್ಟು ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಶಾಸಕರಾಗಿ ಆಯ್ಕೆ ಮಾಡಲು ಶ್ರಮಿಸಬೇಕು. ಇದಕ್ಕೆ ಈ ಭಾಗದ ಒಬಿಸಿ ಮೋರ್ಚಾ ಕಾರ್ಯಕರ್ತರು ಶ್ರಮಿಸುವಂತೆ ಮನವಿ ಮಾಡಿದರು.
ನಂತರ ಓ.ಬಿ.ಸಿ.ಅಧ್ಯಕ್ಷರಾದ ಜೋಗಿಮಂಜು ಮಾತನಾಡಿ ಮೈಸೂರು ನಗರದಲ್ಲಿ ಕೃಷ್ಣರಾಜ, ಚಾಮರಾಜ ಕ್ಷೇತ್ರಗಳು, ಹಲವು ವರ್ಷಗಳಿಂದ ಅಭಿವೃದ್ಧಿ ಹೊಂದುತ್ತಿವೆ. ಆದರೆ, ಎನ್.ಆರ್.ಕ್ಷೇತ್ರ ಇದುವರೆಗೂ ಒಬ್ಬರೇ ಶಾಸಕರಿದ್ದರೂ ಅಭಿವೃದ್ಧಿ ಹೊಂದುತ್ತಿಲ್ಲ. ಜೊತೆಗೆ ಒಬಿಸಿ, ಎಸ್ಸಿ-ಎಸ್ಟಿ ವರ್ಗದ ಅನುದಾನಗಳು ಫಲಾನುಭವಿಗಳಿಗೆ ತಲುಪಿಸುತ್ತಿಲ್ಲ. ಹಿಂದೂಗಳು ವಾಸಿಸುತ್ತಿರುವ ಬಡಾವಣೆಗಳಿಗೆ ಸರಿಯಾದ ರಸ್ತೆಗಳಿಲ್ಲ. ಎನ್.ಆರ್.ಕ್ಷೇತ್ರದ ರಸ್ತೆಗಳು ಗುಂಡಿಮಯವಾಗಿವೆ. ಅಲ್ಲದೆ, ಹಿಂದೂ ಕುಟುಂಬಗಳು ಹಲವು ವರ್ಷಗಳಿಂದ ಭಯದ ನೆರಳಿನಲ್ಲಿ ಬದುಕುತ್ತಿದ್ದು, ಇದನ್ನು ತಡೆಗಟ್ಟಬೇಕಾದರೆ, ಎನ್.ಆರ್.ಕ್ಷೇತ್ರ ವ್ಯಾಪ್ತಿಯ ಹಿಂದೂಗಳೆಲ್ಲಾ ಒಂದಾಗಿ ಶಾಸಕರನ್ನು ಆಯ್ಕೆ ಮಾಡುವ ಸಂಕಲ್ಪ ತೊಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಸದರಾದ ಪ್ರತಾಪ್ ಸಿಂಹ, ರಾಮದಾಸ್, ನಾಗೇಂದ್ರ ಮಹಾ ಪೌರರಾದ ಶಿವಕುಮಾರ್ ನಗರ ಅಧ್ಯಕ್ಷರಾದ ಶ್ರೀ ವತ್ಸ,ಓ.ಬಿ.ಸಿ.ಅಧ್ಯಕ್ಷರಾದ ಜೋಗಿ ಮಂಜು,ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು,ಅನಿಲ್ ಧಾಮಸ್,ವಿಭಾಗ ಪ್ರಭಾರಿ ಮೈ ವಿ ರವಿಶಂಕರ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್,ಮೈಲಾಕ್ ಅಧ್ಯಕ್ಷರಾದ ರಘು ಕೌಟಿಲ್ಯ,ಪ್ರಧಾನ ಕಾರ್ಯದರ್ಶಿ ಗಳಾದ ಗಿರೀಧರ್,ಸೋಮಸುಂದರ್,ವಾಣೀಶ್ ಕುಮಾರ್, ನಗರ ಪಾಲಿಕೆ ಸದಸ್ಯರಾದ ಸತೀಶ್, ಸುಬ್ಬಯ್ಯ,ರಂಗಸ್ವಾಮಿ, ಛಾಯದೇವಿ, ನಾರಯಣ ಲೊಲಪ್ಪ, ಪ್ರಧಾನ ಕಾರ್ಯದರ್ಶಿ ಗೋಪಾಲ್, ಮಣಿರತ್ನಂ,ಅಭಿಲಾಷ್,ಜೀವನ್,ವಿಜಯ್,ಸೂರಜ್,ಶಿವಪ್ಪ, ರಾಚಪ್ಪಾಜೀ,ನಾರಯಣ ಅಚಾರ್,ಶಿವರಾಜ್,ಭರತ್,ಜಗದೀಶ್, ಹರಿಶ್, ಇದ್ದರು.