ಹನೂರು : ಮಾಯ್ಕಾರ ಮಾದಪ್ಪನ ನೆಲೆ ಮಲೆ ಮಹದೇಶ್ವರ ಬೆಟ್ಟಕ್ಕೆ ಹರಕೆ ಹೊತ್ತ ಭಕ್ತರು ಕಾಣಿಕೆಯಾಗಿ ತಂದು ಬಿಡುವ ದನಕರುಗಳು ಕಟುಕರ ಕಳ್ಳಕಾಕರ ಪಾಲಾಗುತ್ತಿರುವುದು ಪುಣ್ಯ ಕ್ಷೇತ್ರ ಪಾಪದ ಕ್ಷೇತ್ರವಾಗಿ ಮಾರ್ಪಡುವುದರ ಜತೆಗೆ ಸಾಂಪ್ರಧಾಯಿಕ ಭಕ್ತರ ಆಚಾರ ವಿಚಾರಗಳಿಗೆ ಅಪಚಾರ ತಂದಿದೆ.
ತಮ್ಮ ಮನೆಯಲ್ಲಿ ಜಾನುವಾರುಗಳ ಸಂತತಿ ಸಮೃದ್ದಿಯಾದರೆ ಮನೆ ದೇವರಾದ ಮಲೆ ಮಹದೇಶ್ವರನಿಗೆ “ಜನುಗ” ಬಿಡುವುದಾಗಿ ಹರಕೆ ಹೊತ್ತ ರಾಜ್ಯಾದ್ಯಂತದ ಅಲ್ಲದೆ,ನೆರೆಯ ತಮಿಳುನಾಡಿನ ಸಾವಿರಾರು ರೈತಾಪಿ ಕುಟುಂಬಗಳಾದ ಮಾದಪ್ಪನ ಭಕ್ತವೃಂದ ಅವರ ಮನೆಯಲ್ಲಿ ಜನಿಸಿದ ಹಸುವಿನ ಮೊದಲ ಕರುವನ್ನು ಭಯ ಭಕ್ತಿಯಿಂದ ಸಾಕಿ ಸಲಹಿ ಅದು ಸುಮಾರು ವಯಸ್ಸಿಗೆ ಬರುತ್ತಿದ್ದಂತೆ ಅದನ್ನು ಮಲೆ ಮಹದೇಶ್ವರ ಬೆಟ್ಟಕ್ಕೆ ತಂದು ವಿಶೇಷ ಪೂಜೆ ಸಲ್ಲಿಸಿ ಅಲ್ಲೇ ಬಿಟ್ಟು ಬರುವುದು ಬಹಳ ಹಿಂದಿನಿಂದ ನಡೆದು ಬಂದ ವಾಡಿಕೆ.
ಇದರಿಂದಾಗಿ ಬರುಬರುತ್ತಾ ಭಕ್ತರು ಬಿಡುವ ದನಕರುಗಳ ಸಂಖ್ಯೆ ಹೆಚ್ಚಾಗಿ ಕಾಪಾಡುವುದು ದುರ್ಲಭವಾಗಿ ಬಿಡಾಡಿದನಗಳಾಗಿ ಬೀದಿ ಬೀದಿ ಅಲೆಯತೊಡಗಿದ್ದು ಪ್ರಾಧಿಕಾರದ ಪಾಲಿಗೆ ತಲೆನೋವಾಗಿ ಭಕ್ತರಿಗೆ ಕಿರಿ ಕಿರಿಯುಂಟಾದ್ದನ್ನು ಮನಗಂಡು ಪ್ರಾಧಿಕಾರದ ವತಿಯಿಂದಲೇ ಅಧಿಕೃತವಾಗಿ ದನಕರುಗಳನ್ನು ಕಾಣಿಕೆಯಾಗಿ ತಂದು ಬಿಡುವುದಕ್ಕೆ ಜ. 2019 ರಲ್ಲಿ ನಿರ್ಬಂಧ ಏರಲಾಯಿತಲ್ಲದೆ ಈ ಸಂಬಂಧದ ಸೂಚನಾ ಫಲಕವನ್ನು ಆ ಸಂದರ್ಭದಲ್ಲೇ ಪ್ರವೇಶ ದ್ವಾರದ ಚಪ್ಪಲಿಬಿಡುವ ಕೇಂದ್ರದ ಮುಂದೆ ಅಳವಡಿಸಲಾಗಿದೆಯಾದರೂ ಅದು ಅಕ್ಷರಗಳು ಕಾಣದಷ್ಟು ಸವಕಲಾಗಿದ್ದರೂ ಇಂದಿನ ತನಕ ಬದಲಾಯಿಸುವ ಗೋಜಿಗೆ ಹೋಗಿಲ್ಲ. ಆರಂಭದಲ್ಲಿ ತಾಳುಬೆಟ್ಟದಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ಭಕ್ತರು ತರುತ್ತಿದ್ದ ದನಕರುಗಳನ್ನು ತಡೆದು ಹಿಂದಕ್ಕೆ ಕಳುಹಿಸಲಾಗುತ್ತಿತ್ತು.
ತದ ನಂತರದಲ್ಲಿ ಚೆಕ್ ಪೋಸ್ಟ್ ತೆರವುಗೊಳಿಸಿ ಪ್ರಾಧಿಕಾರ ಸುಮ್ಮನಾಯಿತು. ಆದರೆ ಭಕ್ತರು ಮಾತ್ರ ದನಕರುಗಳನ್ನು ಕಾಣಿಕೆ ತಂದೊಪ್ಪಿಸುವ ಪ್ರವೃತ್ತಿ ನಿಲ್ಲಲಿಲ್ಲ. ಆದರೆ ಇದನ್ನೆ ದಂಧೆಯನ್ನಾಗಿ ಮಾಡಿಕೊಂಡ ಪ್ರಾಧಿಕಾರದ ಕೆಲವು ನೌಕರರು ಹಾಗೂ ಮತ್ತಿತರರು, ಭಕ್ತರು ದೇಗುಲದ ಮುಂದೆ ಪೂಜೆ ಸಲ್ಲಿಸಿ ದನಕರುಗಳನ್ನು ಬಿಡುತ್ತಿದ್ದಂತೆ ತಾವೇ ಸಾಕಿಕೊಳ್ಳುವುದಾಗಿ ಹೇಳಿ ತೆಗೆದುಕೊಂಡು ಹೋಗಿ, ಇಲ್ಲದಿದ್ದರೆ ಭಕ್ತಾದಿಗಳು ಬಿಟ್ಟು ಹೋದ ಸಂದರ್ಭದಲ್ಲಿ ತಾವುಗಳೇ ಹಿಡಿದುಕೊಂಡು ಹೋಗಿ ಕೆಲವು ದಿನಗಳ ಕಾಲ ಅಲ್ಲೆ ಬಿಟ್ಟು ಮೇಯಿಸಿ, ಗಂಡು ಕರುಗಳಾಗಿದ್ದರೆ, ಕಟ್ಟುಮಸ್ತಾಗಿದ್ದರೆ ನೆರೆಯ ತಮಿಳುನಾಡಿನ ಕಸಾಯಿ ಖಾನೆಗೂ ಹಸುವಾದರೆ ಹಾಲು ಕರೆಯುವವರಿಗೆ ಒಳ್ಳೆ ಬೆಲೆಗೆ ಮಾರುವುದನ್ನೇ ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ. ನಾಲ್ಕಾರು ಮಂದಿ ಒಗ್ಗೂಡಿ ಗಡಿಯಂಚಿನ ಪಾಲಾರ್ ತನಕ ನಡೆಸಿಕೊಂಡು ಹೋಗಿ ಅಲ್ಲಿಂದ ವಾಹನಗಳಿಗೆ ತುಂಬಿ ತಮಿಳುನಾಡಿಗೆ ಕಳ್ಳ ಸಾಗಣೆ ಮಾಡುವುದು ಜಗಜ್ಜಾಹೀರಾದರೂ ಬೆಟ್ಟದ ಪೊಲೀಸರಾಗಲಿ ಪ್ರಾಧಿಕಾರವಾಗಲಿ ತಲೆ ಕೆಡಿಸಿಕೊಳ್ಳದಿರುವುದರಿಂದಲೇ ಈ ದಂಧೆ ನಿರಾತಂಕವಾಗಿ ನಡೆದುಕೊಂಡೇ ಬರುತ್ತಿರುವುದಾಗಿ ಸ್ಥಳೀಯ ಪ್ರಜ್ಞಾವಂತರು ಬೇಸರ ವ್ಯಕ್ತಪಡಿಸಿದ್ದಾರೆ.
ಇತ್ತ ಭಕ್ತರ ಆಶಯ ಈಡೇರದಿದ್ದರೂ ಅವರು ಭಕ್ತಿ-ಭಾವದಿಂದ ತಂದು ಬಿಟ್ಟಿದ್ದ ದನಕರುಗಳು ಕಸಾಯಿ ಖಾನೆ ತಲುಪುವ ಮೂಲಕ ಕಯ್ಯಾರೆ ಸಾಕಿ ಸಲುಹಿದ ದನಕರುಗಳು ಕಟುಕರ ಪಾಲಾಗುತ್ತಿರುವುದು ತಾವೇ ಪಾಪಕ್ಕೆ ಗುರಿಯಾದಂತಾಗಿ ಪಶ್ಚಾತಾಪ ಪಡುವಂತಾಗಿದೆ. ಅದರಲ್ಲೂ ತಮಿಳುನಾಡಿನ ಕಡೆಯಿಂದಾಗಲಿ ರಾಜ್ಯ ಬಹುತೇಕ ಕಡೆಗಳಿಂದಾಗಲಿ ದನಕರುಗಳನ್ನು ತಡೆಯುವ ಗೇಟಿನಲ್ಲಿರುವ ಪೊಲೀಸರು ಹಾಗೂ ಪ್ರಾಧಿಕಾರದ ಕೆಲ ನೌಕರ ವೃಂದ ರೈತರಿಂದ ನಿರ್ಬಂಧದ ನೆಪವೊಡ್ಡಿ ಸಾವಿರಾರು ರೂಪಾಯಿ ಕಮಾಯಿ ಮಾಡುತ್ತಿರುವುದೂ ಕೂಡ ಗುಟ್ಟಿನ ಸಂಗತಿಯೇನಲ್ಲ.
ಅದರಲ್ಲೂ ವಿಶೇಷವಾಗಿ ಕೆಲವರು ಸಾಲೂರು ಮಠಕ್ಕೆ ತೆಗೆದುಕೊಂಡು ಹೋಗಿ ಬಿಡುತ್ತಿರುವರಾದರೂ ಅಲ್ಲಿ ದಾಖಲೆಗೆ ನೀಡುವವರ ಹೆಸರು ವಿಳಾಸ ಬರೆದುಕೊಳ್ಳಲಾಗುತ್ತಿದೆಯಾದರೂ ದಾಖಲೆಯಲ್ಲಿ ಇರುವಷ್ಟು ದನಕರುಗಳು ವಾಸ್ತವದಲ್ಲಿ ಇಲ್ಲದಿರುವುದು ಹಾಗೂ ಮಠದವರು ಸರ್ಕಾರದ ಅನುದಾನದಲ್ಲಿ ಎಲಚಿಕೆರೆಯಲ್ಲಿ ಗೋಶಾಲೆ ತೆರೆದಿರುವರಾದರೂ ಸಮರ್ಪಕ ನಿರ್ವಹಣೆ ಮಾಡುತ್ತಿಲ್ಲವೆಂಬ ಆರೋಪ ಕೇಳಿ ಬಂದಿದೆ.
ಗಡಿಯಂಚಿನ ಪಾಲಾರ್ನಲ್ಲೂ ಮಠದ ಗೋಶಾಲೆ ಇತ್ತಾದರೂ ಅಲ್ಲೂ ಕೂಡ ಕೆಲ ನೌಕರರು ಅಕ್ರಮವಾಗಿ ತಮಿಳುನಾಡಿಗೆ ಕಳ್ಳ ಸಾಗಣೆ ಮಾಡಿ ರಾದ್ದಾಂತವಾದ ನಂತರ ಅಲ್ಲಿ ಸ್ಥಗಿತಗೊಳಿಸಲಾಗಿದೆ.
ಮಾದಪ್ಪನ ಭಕ್ತರಿಂದ ಮಾಸ ಮಾಸ ಕೋಟ್ಯಾಂತರ ರೂಪಾಯಿ ಆದಾಯ ದೇವಸ್ಥಾನದ ಬೊಕ್ಕಸ ತುಂಬುತ್ತಿದ್ದು ಈಗಲಾದರೂ ಭಕ್ತರ ಭಾವನೆಗಳಿಗೆ ಧಕ್ಕೆ ಬಾರದಂತೆ ಬಹು ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವ ಸಂಪ್ರದಾಯ ವಾಡಿಕೆಯಂತೆ ಜಿನುಗ ಬಿಡುವ ದನಕರುಗಳನ್ನು ಪಡೆದು ಮ.ಬೆಟ್ಟ ಪ್ರಾಧಿಕಾರದಲ್ಲಿ ಯಥೇಚ್ಚವಾಗಿ ಇರುವ ಯಾವುದೋ ಒಂದು ಸ್ಥಳದಲ್ಲಿ ಗೋಶಾಲೆಯನ್ನು ತೆರದು ಸಂರಕ್ಷಿಸಿದಲ್ಲಿ ಹಿಂದಿನ ಸಂಪ್ರದಾಯ ಉಳಿಯುವುದರ ಜತೆಗೆ ಭಕ್ತರ ಆಶಯವನ್ನು ಈಡೇರಿಸಿದಂತಾಗಿ ದೇವಸ್ಥಾನದ ಪವಿತ್ರತೊಯು ಉಳಿದು ವಿಶೆಷ ಗೋತಳಿಗಳನ್ನು ಸಾಕಿ ಪರಿಚಯಿಸಿದರೆ ರೈತಾಪಿ ವರ್ಗಕ್ಕೂ ಅನುಕೂಲವಾಗುತ್ತದಾದ್ದರಿಂದ ಪ್ರಾಧಿಕಾರದ ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕೆಂಬುದು ಮಹದೇಶ್ವರರ ಭಕ್ತವೃಂದದ ಆಗ್ರಹಭರಿತ ಅಂಬೋಣ.