ಮಡಿಕೇರಿ : ಮಡಿಕೇರಿ ತಾಲ್ಲೂಕು ಭಾಗಮಂಡಲ ಹೋಬಳಿ ಚೇರಂಗಾಲ ಗ್ರಾಮದ ಮತ್ತಾರಿ ಸೇತುವೆ ಮಳೆಯಿಂದ ಮುಳುಗಡೆಯಾಗಿದೆ. ಈ ಭಾಗದಲ್ಲಿ ಒಟ್ಟು 15 ಮನೆಗಳಿದ್ದು, 65 ಮಂದಿ ವಾಸವಾಗಿದ್ದಾರೆ. ಹಾನಿ ಪ್ರದೇಶವನ್ನು ಮಡಿಕೇರಿ ತಹಶೀಲ್ದಾರ್ ಕಿರಣ್ ಗೌರಯ್ಯ ಅವರು ಪರಿಶೀಲಿಸಿದರು.
ಹಾಗೆಯೇ ಭಾಗಮಂಡಲ ತ್ರಿವೇಣಿ ಸಂಗಮ, ಭಾಗಮಂಡಲ -ನಾಪೋಕ್ಲು ರಸ್ತೆಗೆ ಬಂದಿರುವ ನೀರಿನ ಮಟ್ಟವನ್ನು ವೀಕ್ಷಿಸಿದರು. ಭಾಗಮಂಡಲ ಗ್ರಾಮದಲ್ಲಿರುವ ಕಾಶಿ ಮಠದಲ್ಲಿ ಕಾಳಜಿ ಕೇಂದ್ರ ನಡೆಸಲು ಸಿದ್ಧತೆ ಯಾಗಿದ್ದು, ಹೆಚ್ಚಿನ ಮಳೆ ಆದಲ್ಲಿ ಸಂತ್ರಸ್ತರನ್ನು ಕಾಳಜಿ/ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾಗಮಂಡಲ – ನಾಪೋಕ್ಲು ರಸ್ತೆಯ ಮೇಲೆ ಅಂದಾಜು 2 ಅಡಿ ನೀರು ಬಂದಿದೆ. ಗೃಹ ರಕ್ಷಕ ದಳದ ತಂಡವು ಬೋಟ್ ಸೇರಿದಂತೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ತಹಶೀಲ್ದಾರ್ ಹೇಳಿದ್ದಾರೆ. ಮಡಿಕೇರಿ ತಾಲೂಕಿನ ಹೊದ್ದೂರು ಗ್ರಾಮದ ಬಿ ಕೆ ಚಂದಪ್ಪ ಎಂಬುವವರ ವಾಸದ ಮನೆಯ ಎರಡು ಗೋಡೆಗಳು ಕುಸಿದು ಹಾನಿಯಾಗಿದೆ. ಈ ಸಂಬಂಧ ಗ್ರಾಮ ಆಡಳಿತ ಅಧಿಕಾರಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.