ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ನಡೆಯಲಿರುವ ಬಹು ನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಭಾರತ-ಪಾಕಿಸ್ತಾನ ಪಂದ್ಯವೂ ಸೇರಿ 9 ಪಂದ್ಯಗಳ ದಿನಾಂಕ ಬದಲಾವಣೆ ಮಾಡಲಾಗಿದ್ದು, ಹೊಸ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯ ಅಕ್ಟೋಬರ್ 15 ರ ಭಾನುವಾರದಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು, ಆದರೆ ಹೊಸ ವೇಳಾಪಟ್ಟಿಯಂತೆ ಪಂದ್ಯ ಒಂದು ದಿನ ಮುಂಚಿತವಾಗಿ ಅಂದರೆ ಅಕ್ಟೋಬರ್ 14ರಂದು ಅದೇ ಕ್ರೀಡಾಂಗಣದಲ್ಲಿ ನಡೆಯಲಿದೆ. ನವರಾತ್ರಿ ಹಬ್ಬ ಇರುವುದರಿಂದ ಭದ್ರತೆಯ ಕಾರಣ ಹಲವು ಪಂದ್ಯಗಳ ದಿನಾಂಕ ಬದಲಾವಣೆ ಮಾಡಲಾಗಿದೆ.
ಭಾರತ-ಪಾಕಿಸ್ತಾನ ಪಂದ್ಯದ ದಿನಾಂಕ ಬದಲಾದ ಕಾರಣ ಅಕ್ಟೋಬರ್ 14ರಂದು ದೆಹಲಿಯಲ್ಲಿ ನಡೆಯಬೇಕಿದ್ದ ಅಫ್ಘಾನಿಸ್ತಾನ – ಇಂಗ್ಲೆಂಡ್ ನಡುವಿನ ಪಂದ್ಯ ಅಕ್ಟೋಬರ್ 15ರಂದು ನಡೆಯಲಿದೆ.
ಹೈದರಾಬಾದ್ನಲ್ಲಿ ಶ್ರೀಲಂಕಾ-ಪಾಕಿಸ್ತಾನ ನಡುವಿನ ಪಂದ್ಯ ಅಕ್ಟೋಬರ್ 12ರಂದು ಗುರುವಾರ ನಡೆಯಬೇಕಿತ್ತು, ಹೊಸ ವೇಳಾಪಟ್ಟಿಯಂತೆ ಈ ಪಂದ್ಯ ಅಕ್ಟೋಬರ್ 10, ಮಂಗಳವಾರ ನಡೆಯಲಿದೆ. ಲಕ್ನೋದಲ್ಲಿ ದಕ್ಷಿಣ ಆಫ್ರಿಕಾ – ಆಸ್ಟ್ರೇಲಿಯಾದ ನಡುವಿನ ಅಕ್ಟೋಬರ್ 13ರಂದು ಶುಕ್ರವಾರದ ಬದಲಿಗೆ ಅಕ್ಟೋಬರ್ 12 ಗುರುವಾರದಂದು ನಡೆಯಲಿದೆ.
ಬಾಂಗ್ಲಾದೇಶ – ನ್ಯೂಜಿಲೆಂಡ್ನ ನಡುನೆ ಅಕ್ಟೋಬರ್ 14 ರಂದು ಚೆನ್ನೈನಲ್ಲಿ ನಡೆಯಬೇಕಿದ್ದ ಹಗಲು ಪಂದ್ಯವಾಗಿ ನಿಗದಿಪಡಿಲಾಗಿದ್ದ ಪಂದ್ಯ ಅಕ್ಟೋಬರ್ 13ರಂದು ಶುಕ್ರವಾರ ನಡೆಯಲಿದ್ದು, ಹಗಲು-ರಾತ್ರಿ ಪಂದ್ಯವಾಗಿರಲಿದೆ.
ಧರ್ಮಶಾಲಾದಲ್ಲಿ ಬಾಂಗ್ಲಾದೇಶ-ಇಂಗ್ಲೆಂಡ್ನ ನಡುವಿನ ಪಂದ್ಯದ ಸಮಯ ಕೂಡ ಬದಲಾಗಿದೆ. ಮೊದಲು ಇದು ಹಗಲು ರಾತ್ರಿ ಪಂದ್ಯವನ್ನಾಗಿ ಆಯೋಜಿಸಲಾಗಿತ್ತು, ಈಗ ಪಂದ್ಯ ಬೆಳಗ್ಗೆ 10.30ಕ್ಕೆ ಆರಂಭವಾಗಲಿದ್ದು, ಹಗಲು ಪಂದ್ಯವಾಗಿರಲಿದೆ.
ಬೆಂಗಳೂರಿನಲ್ಲಿ ನಡೆಯುವ ಪಂದ್ಯದ ದಿನಾಂಕ ಬದಲು
ನವೆಂಬರ್ 12 ರ ಭಾನುವಾರದ ಡಬಲ್-ಹೆಡರ್ ಮುಖಾಮುಖಿಯೊಂದಿಗೆ ಮೂರು ಬದಲಾವಣೆಗಳಿವೆ, ಆಸ್ಟ್ರೇಲಿಯಾ-ಬಾಂಗ್ಲಾದೇಶ ನಡುವಿನ ಪುಣೆಯಲ್ಲಿ ನಡೆಯುವ ಪಂದ್ಯ ಬೆಳಗ್ಗೆ 10.30ಕ್ಕೆ ಆರಂಭವಾಗಲಿದೆ. ಕೋಲ್ಕತ್ತಾದಲ್ಲಿ ನಡೆಯಲಿರುವ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ.
ನೆದರ್ಲ್ಯಾಂಡ್ಸ್ ವಿರುದ್ಧದ ಭಾರತದ ಕೊನೆಯ ಲೀಗ್ ಪಂದ್ಯವನ್ನು ಈಗ ನವೆಂಬರ್ 11 ರಿಂದ 12 ಕ್ಕೆ ವರ್ಗಾಯಿಸಲಾಗಿದೆ, ಈ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಪಂದ್ಯದೊಂದಿಗೆ ಅಕ್ಟೋಬರ್ 5 ರ ಗುರುವಾರದಂದು ವಿಶ್ವಕಪ್ ಪ್ರಾರಂಭವಾಗುತ್ತದೆ, ನವೆಂಬರ್ 19 ರ ಭಾನುವಾರದಂದು ಇದೇ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.