ಹರಾರೆ: ಜಿಂಬಾಬ್ವೆ ತಂಡವು ಭಾರತದ ವಿರುದ್ಧ 13 ರನ್ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ ಜಿಂಬಾಬ್ವೆ 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಇಲ್ಲಿನ ಹರಾರೆ ಸ್ಫೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಭಾರತ ಬ್ಯಾಟಿಂಗ್ ಮಾಡುವ ಅವಕಾಶವನ್ನು ಜಿಂಬಾಬ್ವೆ ತಂಡಕ್ಕೆ ಬಿಟ್ಟುಕೊಟ್ಟಿತು. ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದರೂ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 115 ರನ್ ಕಲೆಹಾಕಿತ್ತು. 116 ರನ್ಗಳ ಅಲ್ಪ ಮೊತ್ತದ ಗುರಿ ಬೆನ್ನತ್ತಿದ್ದ ಭಾರತ ಅಗ್ರ ಕ್ರಮಾಂಕದ ಬ್ಯಾಟರ್ಗಳ ವೈಫಲ್ಯದಿಂದ 19.5 ಓವರ್ಗಳಲ್ಲೇ 102 ರನ್ಗೆ ಆಲೌಟ್ ಆಗಿ ಹೀನಾಯ ಸೋಲು ಕಂಡಿತು.
ಚೇಸಿಂಗ್ ಆರಂಭಿಸಿದ ಭಾರತಕ್ಕೆ ಆರಂಭದಲ್ಲೇ ತೀವ್ರ ಆಘಾತ ಎದುರಾಯಿತು. ಪವರ್ ಪ್ಲೇನಲ್ಲಿ 28 ರನ್ ಗಳಿಸುವಷ್ಟರಲ್ಲೇ ಪ್ರಮುಖ 4 ವಿಕೆಟ್ ಕಳೆದುಕೊಂಡಿತ್ತು. ಒಂದಂತದಲ್ಲಿ ರನ್ ಕದಿಯಲು ತಿಣುಕಾಡುತ್ತಿದ್ದ ಟೀಂ ಇಂಡಿಯಾ ಮತ್ತೊಂದೆಡೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತ್ತು. ಪರಿಣಾಮ 61 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು.
8ನೇ ವಿಕೆಟ್ಗೆ ಜೊತೆಯಾಗಿದ್ದ ವಾಷಿಂಗ್ಟನ್ ಸುಂದರ್ ಹಾಗೂ ಅವೇಶ್ ಖಾನ್ ಜೋಡಿ ನೀಡಿದ 23 ರನ್ಗಳ ಸಣ್ಣ ಜೊತೆಯಾಟ ಮತ್ತೆ ಗೆಲುವಿನ ಕನಸು ಚಿಗುರಿಸಿತ್ತು. ಈ ವೇಳೆ ಲಾಂಗ್ಆಫ್ನಲ್ಲಿ ಸಿಕ್ಸರ್ಗೆ ಯತ್ನಿಸಿ ಅವೇಶ್ ಖಾನ್ ಕ್ಯಾಚ್ ನೀಡಿ ಔಟಾದರು. ಇನ್ನೂ ಕೊನೇ ಓವರ್ ವರೆಗೂ ಗೆಲುವಿನ ಭರವಸೆ ಮೂಡಿಸಿದ್ದ ವಾಷಿಂಗ್ಟನ್ ಸುಂದರ್ ರನ್ ಕದಿಯುವಲ್ಲಿ ವಿಫಲರಾದರು. ಪರಿಣಾಮ ಜಿಂಬಾಬ್ವೆ ಎದುರು ಮಂಡಿಯೂರಬೇಕಾಯಿತು. ಟೀಂ ಇಂಡಿಯಾ ಪರ ನಾಯಕ ಶುಭಮನ್ ಗಿಲ್ 34 ರನ್ (29 ಎಸೆತ, 5 ಬೌಂಡರಿ), ವಾಷಿಂಗ್ಟನ್ ಸುಂದರ್ 27 ರನ್, ಅವೇಶ್ ಖಾನ್ 16 ರನ್ ರನ್ ಗಳಿಸಿದರು.
ಜಿಂಬಾಬ್ವೆ ಪರ ಮಿಂಚಿನ ಬೌಲಿಂಗ್ ದಾಳಿ ನಡೆಸಿದ ಸಿಖಂದರ್ ರಝಾ, ಟೆಂಡಿ ಛಟಾರ ತಲಾ ಮೂರು ವಿಕೆಟ್ ಕಿತ್ತರೆ, ಬ್ರಿಯಾನ್ ಬೆನೆಟ್, ವೆಲ್ಲಿಂಗ್ಟನ್ ಮಸಕಡ್ಜಾ, ಮುಜರಬಾನಿ, ಲ್ಯೂಕ್ ಜೊಂಗ್ವೆ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ಪರ ವೆಸ್ಲಿ ಮಾಧೆವೆರೆ 21 ರನ್, ಬ್ರಿಯಾನ್ ಬೆನೆಟ್ 22 ರನ್, ಸಿಕಂದರ್ ರಝಾ 17 ರನ್, ಡಿಯೋನ್ ಮೈಯರ್ಸ್ 23 ರನ್, ಕ್ಲೈವ್ ಮದಂಡೆ 29 ರನ್ಗಳ ಕೊಡುಗೆ ನೀಡಿದರು. ಉಳಿದ ಬ್ಯಾಟರ್ಸ್ಗಳು ಕ್ರೀಸ್ನಲ್ಲಿ ಭದ್ರವಾಗಿ ನೆಲೆಯೂರದ ಕಾರಣ 20 ಓವರ್ಗಳಲ್ಲಿ 115 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಟೀಂ ಇಂಡಿಯಾ ಪರ ರವಿ ಬಿಷ್ಣೋಯಿ 4 ಓವರ್ಗಳಲ್ಲಿ ಕೇವಲ 13 ರನ್ ಬಿಟ್ಟುಕೊಟ್ಟು 4 ವಿಕೆಟ್ ಕಿತ್ತರೆ, ವಾಷಿಂಗ್ಟನ್ ಸುಂದರ್ 2 ವಿಕೆಟ್ ಹಾಗೂ ಮುಕೇಶ್ ಕುಮಾರ್ 1 ವಿಕೆಟ್ ಪಡೆದು ಮಿಂಚಿದರು.